ಕೊಳ್ಳೇಗಾಲದ ಕೊರೋನಾ ಮಾರಮ್ಮನ ದೇಗುಲ ತೆರವು
- ಕೊರೋನಾ ದೂರಾಗುತ್ತದೆ ಎಂಬ ಕಾರಣಕ್ಕೆ ಕೊರೋನಾ ದೇವಿ ದೇಗುಲ
- ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯಲ್ಲಿ ಸ್ಥಾಪಿಸಿದ್ದ ಕೊರೋನಾ ದೇವಿ ದೇಗುಲ
- ತಾಲೂಕು ಜಿಲ್ಲಾಡಳಿತದಿಂದ ಕೊರೋನಾ ದೇವಿ ದೇಗುಲ ತೆರವು
ಕೊಳ್ಳೇಗಾಲ (ಮೇ.23): ಕೊರೋನಾ ದೂರಾಗುತ್ತದೆ ಎಂಬ ಕಾರಣಕ್ಕೆ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷರು ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯಲ್ಲಿ ಸ್ಥಾಪಿಸಿದ್ದ ಕೊರೋನಾ ದೇವಿಯ ತಾತ್ಕಾಲಿಕ ದೇಗುಲವನ್ನು ತಾಲೂಕು ಜಿಲ್ಲಾಡಳಿತವು ಶುಕ್ರವಾರ ಮಧ್ಯರಾತ್ರಿ ತೆರವುಗೊಳಿಸಿದೆ.
ಕೊರೋನಾ 2ನೇ ಅಲೆಯ ಹೊಡೆತಕ್ಕೆ ತತ್ತರಿಸಿದ ಶಿಕ್ಷಕರು ..
ಚಾಮುಂಡೇಶ್ವರಿಯ ಆರಾಧಕಿ ಯಶೋಧಮ್ಮ ಎಂಬುವರು ದೇಗುಲ ಸ್ಥಾಪಿಸಿದ್ದರು. ತಮ್ಮ ಕನಸಲ್ಲಿ ಚಾಮುಂಡೇಶ್ವರಿ ಪ್ರತ್ಯಕ್ಷವಾಗಿ ಕೊರೋನಾ ಮಾರಮ್ಮನ ವಿಗ್ರಹ ಸ್ಥಾಪಿಸಿ, 48ದಿನಗಳ ಕಾಲ ಪೂಜೆ ಸಲ್ಲಿಸಿದರೆ ಇನ್ನೆರಡು ತಿಂಗಳಲ್ಲಿ ಕೊರೋನಾ ದೂರಾಗಲಿದೆ ಎಂಬ ಸಂದೇಶ ರವಾನಿಸಿದ್ದಾರೆ. ಹಾಗಾಗಿ, ಕಳೆದ ಶುಕ್ರವಾರ ವಿಗ್ರಹ ಸ್ಥಾಪಿಸಿ ಪೂಜೆ ಸಲ್ಲಿಸಿದ್ದೇನೆ, ಪೂಜೆ ನಿರಂತರವಾಗಿ ನಡೆಯಲಿದೆ ಎಂದು ಯಶೋಧಮ್ಮ ಗ್ರಾಮಸ್ಥರಿಗೆ ಹೇಳಿ ಮೌಢ್ಯ ಬಿತ್ತುವ ಕೆಲಸಕ್ಕೆ ಮುಂದಾಗಿದ್ದರು. ದೇಗುಲ ಸ್ಥಾಪನೆ ವಿಚಾರ ಬೆಳಕಿಗೆ ಬರುತ್ತಿದ್ದಂತೆ ತಾಲೂಕು ಆಡಳಿತ ಎಚ್ಚೆತ್ತುಕೊಂಡಿದ್ದು, ಶುಕ್ರವಾರ ಮಧ್ಯರಾತ್ರಿಯೇ ತಹಸೀಲ್ದಾರ್ ಕುನಾಲ್, ಗ್ರಾಮಾಂತರ ಠಾಣೆಯ ಅಶೋಕ್ ಮತ್ತು ಸಿಬ್ಬಂದಿ ದೇಗುಲ ತೆರವುಗೊಳಿಸಿ ಯಶೋಧಮ್ಮ ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೊರೋನಾದಿಂದ ಪಾರಾಗಲು ಪೂಜೆ
ಕೊರೋನಾದಿಂದ ರಕ್ಷಿಸಿಕೊಳ್ಳಲು ಚಾಮರಾಜನಗರ ಜಿಲ್ಲೆಯ ಕೆಲವೆಡೆ ಜನರು 12 ದಿನಗಳ ಕಾಲ ದೇವರನ್ನು ಪೂಜಿಸಲು ಆರಂಭಿಸಿದ್ದಾರೆ. ಕೊರೋನಾ ಸೋಂಕು ಹರಡದಂತೆ ನಗರದ ಬಣಜಿಗರ ಬೀದಿ, ಕುರುಬರ ಬೀದಿ, ನಾಯಕರ ಬೀದಿ ಹಾಗೂ ಗಂಗಾಮತಸ್ಥರ ಬೀದಿಯಲ್ಲಿ ಶುಕ್ರವಾರ ರಾತ್ರಿ ಪೂಜೆ ಸಲ್ಲಿಸಿದ್ದು, ಕೆಲ ಹಳ್ಳಿಗಳಲ್ಲಿ ಜನರು ರಸ್ತೆಗೆ ಸಗಣಿ ನೀರು ಹಾಕಿ, ರಂಗೋಲಿ ಬರೆದು ಪೂಜಿಸಿದ್ದಾರೆ. ಹಳ್ಳ ತೋಡಿ ಬಲಿದಾನದ ಅನ್ನವಿಟ್ಟು ಬೇವಿನ ಸೊಪ್ಪಿನಿಂದ ಹೊಗೆ, ಧೂಪ ಹಾಕಿ ಪೂಜಿಸಿದ್ದಾರೆ.