ಚಾಮರಾಜನಗರ ಸಂಸದ ವಿ. ಶ್ರೀನಿವಾಸಪ್ರಸಾದ್‌ ಅವರನ್ನು ಭೇಟಿಯಾದ ಶಾಸಕ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್‌. ಮಹೇಶ್‌ ಅವರಿಂದ ಶನಿವಾರ ದಿಢೀರ್‌ ಭೇಟಿ

ಮೈಸೂರು (ಜು.25): ಮೈಸೂರಿನ ಜಯಲಕ್ಷ್ಮೀ ಪುರಂನಲ್ಲಿರುವ ನಿವಾಸದಲ್ಲಿ ಚಾಮರಾಜನಗರ ಸಂಸದ ವಿ. ಶ್ರೀನಿವಾಸಪ್ರಸಾದ್‌ ಅವರನ್ನು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್‌. ಮಹೇಶ್‌ ಅವರು ಶನಿವಾರ ದಿಢೀರ್‌ ಭೇಟಿಯಾಗಿ ಸುಮಾರು ಒಂದು ಗಂಟೆ ಕಾಲ ಚರ್ಚಿಸಿದರು.

ಈ ಭೇಟಿ ಬಳಿಕ ಸಂಸದ ವಿ. ಶ್ರೀನಿವಾಸಪ್ರಸಾದ್‌ ಮಾತನಾಡಿ, ಎನ್‌. ಮಹೇಶ್‌ ಅವರು ನನ್ನ ಕ್ಷೇತ್ರದ ಶಾಸಕ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಇಲ್ಲಿಗೆ ಆಗಮಿಸಿದ್ದು, ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಂದಿದ್ದರು ಎಂದರು.

ಎನ್‌. ಮಹೇಶ್‌ ಅವರು ಬಿಜೆಪಿ ಸೇರುತ್ತಾರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸೇರುವುದು ಅವರಿಗೆ ಬಿಟ್ಟವಿಚಾರ. ಸದ್ಯ ಎನ್‌. ಮಹೇಶ್‌ ಅವರು ಬಿಎಸ್‌ಪಿಯಲ್ಲಿ ಇಲ್ಲ. ಬಿಜೆಪಿ ಸೇರುವ ಬಗ್ಗೆ ಅವರೇ ಯೋಚನೆ ಮಾಡಬೇಕು. ಅವರು ಈಗ ಸ್ವತಂತ್ರರಾಗಿದ್ದಾರೆ ಎಂದು ಹೇಳಿದರು.

ರಾಜ್ಯದ ಮತ್ತೊಬ್ಬ ಶಾಸಕ ಶೀಘ್ರ ಬಿಜೆಪಿ ಸೇರ್ಪಡೆ?

ಇದೇ ವೇಳೆ ಶಾಸಕ ಎನ್‌. ಮಹೇಶ್‌ ಮಾತನಾಡಿ, ನಾನು ಸಂಸದರ ಮನೆಗೆ ಆಗಮಿಸಿದ್ದು. ಕ್ಷೇತ್ರದ ಅಭಿವೃದ್ಧಿ ಕೆಲಸದ ಬಗ್ಗೆ ಮಾತನಾಡಲು ಅಷ್ಟೇ. ಉಮ್ಮತ್ತೂರು ಕೆರೆಗೆ ನೀರು ತುಂಬಿಸುವ ಕೆಲಸ ಹಾಗೂ ಹೊನ್ನೂರಿನಲ್ಲಿ ಡಾ. ಅಂಬೇಡ್ಕರ್‌ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮಕ್ಕೆ ದಿನಾಂಕ ನಿಗದಿ ಮಾಡಲು ಬಂದಿದ್ದೆ ಎಂದರು.

ಸಿಎಂ ಬದಲಾವಣೆ ಮಾಡುವುದು ಅವರ ಪಕ್ಷದ ವಿಚಾರ. ಯಡಿಯೂರಪ್ಪ ಅವರ ಸ್ಥಾನವನ್ನು ರಿಪ್ಲೇಸ್‌ ಮಾಡಲು ಅಂತಹ ಸ್ಟ್ರಾಂಗ್‌ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದು ಅವರು ಹೇಳಿದರು.