ನವದೆಹಲಿ/ಬೆಂಗಳೂರು (ಡಿ.19): ಕೋಲಾರ ಸಮೀಪದ ನರಸಾಪುರ ಕೈಗಾರಿಕಾ ವಲಯದಲ್ಲಿರುವ ವಿಸ್ಟ್ರಾನ್‌ ಐಫೋನ್‌ ಘಟಕ ದ್ವಂಸ ಪ್ರಕರಣ ತನಿಖೆ ಚುರುಕುಗೊಂಡಿದ್ದು, ಕಂಪನಿಯಲ್ಲಿ ಕಾರ್ಮಿಕರ ಕಾನೂನು ಉಲ್ಲಂಘನೆ ಆಗಿರುವುದು ಕಾರ್ಮಿಕ ಇಲಾಖೆ ಪರಿಶೀಲನೆ ವೇಳೆ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ತಿಳಿದು ಬಂದಿದೆ.

ಘಟನೆ ನಡೆದ ಬಳಿಕ ತನಿಖೆ ನಡೆಸುತ್ತಿರುವ ಕರ್ನಾಟಕ ಕಾರ್ಮಿಕ ಇಲಾಖೆಯ ಕೋಲಾರ ಜಿಲ್ಲಾ ವ್ಯಾಪ್ತಿಯ ಅಧಿಕಾರಿಗಳು, ಆ್ಯಪಲ್‌ನ ಗುತ್ತಿಗೆ ಸಂಸ್ಥೆಯಾದ ವಿನ್‌ಸ್ಟ್ರಾನ್‌ನ ಲೆಕ್ಕ ಪರಿಶೋಧನೆಯ ದಾಖಲಾತಿಗಳನ್ನೂ ಪರಿಶೀಲಿಸಿದ್ದಾರೆ. ಈ ವೇಳೆ ಕಾರ್ಮಿಕ ಇಲಾಖೆ ಕಾನೂನುಗಳ ಉಲ್ಲಂಘನೆ ಆಗಿರುವುದು ಸಾಬೀತಾಗಿದೆ. 

ಅನೇಕ ಹಂತಗಳಲ್ಲಿ ಇಲಾಖೆಯ ನಿಯಮಗಳ ಉಲ್ಲಂಘನೆ ಮಾಡಲಾಗಿದೆ ಎಂದು ತಮ್ಮ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟ​ರ್‍ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಸಂಸ್ಥೆಯು ಸಿಬ್ಬಂದಿಗಳ ನೇಮಕಾತಿ ಮತ್ತು ವೇತನ ಸಂಬಂಧ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡಿಲ್ಲ. ಅವರನ್ನು ನಿತ್ಯ 12 ಗಂಟೆಗಳ ಕಾಲ ದುಡಿಸಿಕೊಂಡರೂ ಹೆಚ್ಚುವರಿ ವೇತನ ಪಾವತಿ ಮಾಡಿಲ್ಲ. 

ಸಿಬ್ಬಂದಿಗಳ ವೇತನ ಮತ್ತು ಹಾಜರಾತಿಯನ್ನು ನಿಯಮಗಳ ಅನ್ವಯ ಕಾಪಾಡಿಕೊಂಡಿಲ್ಲ. ಹಾಜರಾತಿ ದಾಖಲಿಸುವ ಯಂತ್ರದಲ್ಲೂ ದೋಷವಿತ್ತು. ಸಿಬ್ಬಂದಿಗೆ ವೇತನವನ್ನೂ ಸೂಕ್ತ ಸಮಯಕ್ಕೆ ಪಾಲನೆ ಮಾಡಿಲ್ಲ. ಈ ಎಲ್ಲಾ ವಿಷಯಗಳು ಸಿಬ್ಬಂದಿಗಳು ಆಕ್ರೋಶಗೊಳ್ಳಲು ಕಾರಣ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.