ಕೋಲಾರ ಸಂಸದ ಮುನಿಸ್ವಾಮಿಗೆ ಕೊರೋನಾ ಪಾಸಿಟಿವ್
ಬೆಂಗಳೂರಿನ ನಿವಾಸದಲ್ಲೇ ಸಂಸದರು ಕ್ವಾರಂಟೈನ್| ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಲ್ಲುಪುರಂ ಜಿಲ್ಲೆಯ ತಿರುಕೊಯ್ಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿಯಾಗಿ ನೇಮಕಗೊಂಡಿದ್ದ ಸಂಸದ ಮುನಿಸ್ವಾಮಿ| ಬಿಜೆಪಿ ಅಭ್ಯರ್ಥಿ ಕಲಿ ವರದನ್ ಪರ ಪ್ರಚಾರ ಕೈಗೊಂಡಿದ್ದ ಸಂಸದರು|
ಕೋಲಾರ(ಮಾ.28): ಸಂಸದ ಎಸ್.ಮುನಿಸ್ವಾಮಿ ಅವರಿಗೆ ಕೊರೋನಾ ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿದ್ದು, ವೈದ್ಯರ ಸಲಹೆಯಂತೆ ಸಂಸದರು ಬೆಂಗಳೂರಿನ ತಮ್ಮ ಮನೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ.
ಇತ್ತೀಚೆಗಷ್ಟೇ ಕೋವಿಡ್ ಪರೀಕ್ಷೆ ಮಾಡಿಸಿದಾಗ ಅವರಿಗೆ ಕೊರೋನಾ ಸೋಂಕು ಇಲ್ಲವೆಂದು ವೈದ್ಯರು ವರದಿ ನೀಡಿದ್ದರು. ಆದರೆ ಅನಾರೋಗ್ಯದ ಕಾರಣ ಸಂಸದರು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಕೋವಿಡ್ ಪರೀಕ್ಷೆ ಮಾಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ.
ಶುಕ್ರವಾರ ಜಿಲ್ಲೆಗೆ ಆಗಮಿಸಿದ್ದ ಸಂಸದರು ಬಂಗಾರಪೇಟೆ ತಾಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ನಡೆದ ಡೇರಿ ಕಟ್ಟಡ ಮತ್ತು ಬಿಎಂಸಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ, ಜಿಲ್ಲಾ ಕೇಂದ್ರದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ್ದರು.
ಇತಿಹಾಸ ತಿಳಿದು ಮಾತಾಡ್ಲಿ: ಸಂಸದ ಮುನಿಸ್ವಾಮಿಗೆ ಶಾಸಕ ಟಾಂಗ್
ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ಕೊರೋನಾ ಸೋಂಕು ಇದ್ದರೆ ಕ್ವಾರಂಟೈನ್‌ನಲ್ಲಿ ಇದ್ದು, ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಎಂದು ಸಂಸದರು ಮನವಿ ಮಾಡಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಂಸದ ಮುನಿಸ್ವಾಮಿ ಅವರನ್ನು ವಿಲ್ಲುಪುರಂ ಜಿಲ್ಲೆಯ ತಿರುಕೊಯ್ಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿಯಾಗಿ ನೇಮಕಗೊಂಡಿದ್ದರು. ತಿರುಕೊಯ್ಲೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಲಿ ವರದನ್ ಅವರ ಪರ ಸಂಸದರು ಪ್ರಚಾರ ಕೈಗೊಂಡಿದ್ದರು.