ಆಂಧ್ರದ ಕುಪ್ಪಂನಿಂದ ಬೆಂಗಳೂರಿಗೆ ಬಂಗಾರಪೇಟೆ ಮೂಲಕ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಯೋಜನೆಯಿಂದಾಗಿ ಬಂಗಾರಪೇಟೆ ತಾಲೂಕಿನ 17 ಗ್ರಾಮಗಳ ರೈತರು ತಮ್ಮ ಕೃಷಿ ಜಮೀನುಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಕೋಲಾರ: ಬಂಗಾರಪೇಟೆ ತಾಲೂಕಿನ ಗಡಿಭಾಗಕ್ಕೆ ಅಂಟಿಕೊಂಡಿರುವ ಆಂಧ್ರದ ಕುಪ್ಪಂನಿಂದ ಬಂಗಾರಪೇಟೆ ಮಾರ್ಗ ಹೊಸೂರು ಹೈವೇ ರಸ್ತೆಯ ಮೂಲಕ ಬೆಂಗಳೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು ಈಗಾಗಲೇ ಅದಕ್ಕೆ ಪೂರ್ವ ಸಿದ್ದತೆಗಳನ್ನು ಕೈಗೊಳ್ಳಲು ಮುಂದಾಗಿದ್ದು, ರಸ್ತೆಗೆ ಜಮೀನುಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿ ಅನ್ನದಾತರಿದ್ದಾರೆ.

ಈಗಾಗಲೇ ಬೆಂಗಳೂರಿನಿಂದ ಚೆನ್ನೈಗೆ ಎಕ್ಸ್‌ಪ್ರೆಸ್ ವೇ ರಸ್ತೆ ನಿರ್ಮಾಣವಾಗಿದೆ. ಇದರಿಂದ ಎರಡೂ ನಗರಗಳ ನಡುವೆ ಸಂಚಾರ ಸುಗಮವಾಗಿದೆ ಹಾಗೂ ಸಮಯ ಸಹ ಉಳಿಯಲಿದೆ. ಅದೇ ರೀತಿ ಪಕ್ಕದ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರತಿನಿಧಿಸಿರುವ ಕುಪ್ಪಂ ಕ್ಷೇತ್ರದಿಂದ ಬದುಕು ಕಟ್ಟಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಬೆಂಗಳೂರಿಗೆ ಬಂದು ಹೋಗುವರು ಹಾಗೂ ವ್ಯಾಪಾರ ದೃಷ್ಟಿಯಿಂದಲೂ ನೂರಾರು ವ್ಯಾಪಾರಿಗಳು ಪ್ರಯಾಣಿಸುವರು.
ಕೇಂದ್ರದ ಮುಂದೆ ಪ್ರಸ್ತಾವನೆ ಸಲ್ಲಿಕೆ
ಅವರು ರಸ್ತೆ ಮೂಲಕ ಬೆಂಗಳೂರಿಗೆ ಬರಲು ತಮಿಳುನಾಡಿನ ಹೊಸೂರು ಮೂಲಕ ಇಲ್ಲವೇ ಕೆಜಿಎಫ್, ಬಂಗಾರಪೇಟೆ ಮೂಲಕ ಹೋಗಬೇಕು. ಇದು ತುಂಬಾ ದೂರವಾಗಿರುವುದರಿಂದ ತಮ್ಮ ಕ್ಷೇತ್ರದ ಜನರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಹಾಗೂ ವಾಣಿಜ್ಯ ಚಟುವಟಿಕೆ ಹೆಚ್ಚಿಸಲು ಚಂದ್ರಬಾಬು ನಾಯ್ಡು ಈ ಹೊಸ ರಾಷ್ಟ್ರೀಯ ರಸ್ತೆ ನಿರ್ಮಾಣಕ್ಕೆ ಕೇಂದ್ರದ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಅಲ್ಲದೆ ಚಂದ್ರಬಾಬು ನಾಯ್ಡು ಕೇಂದ್ರ ಸರ್ಕಾರದದೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ ಪ್ರಧಾನಿ ಮೋದಿ ನಾಯ್ಡು ಪ್ರಸ್ತಾವನೆಗೆ ಸಮ್ಮತಿ ಸೂಚಿಸಿದೆ. ಅದರಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಾಲ್ಕು ಪಥಗಳ ರಸ್ತೆ ನಿರ್ಮಾಣಕ್ಕೆ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ನೀಲಿ ನಕ್ಷೆ ಸಿದ್ಧಪಡಿಸಲು ಸೂಚಿಸಿದೆ. ಆಂದ್ರದ ಐಟಿ ಬಿಟಿ ಸಚಿವ ಲೋಕೇಶ್ ಸಹ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಈ ಯೋಜನೆಗಾಗಿ ೩ ಸಾವಿರ ಕೋಟಿಗೆ ಚರ್ಚಿಸಿದಾರೆ. ಅದರಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಅಧಿಕಾರಿಗಳ ಸಭೆಯನ್ನು ಎರಡು ಬಾರಿ ಕರೆಯಲಾಗಿದೆ. ಏಪ್ರಿಲ್ 4ರಂದು ಸಭೆ ಕರೆಯಲಾಗಿತ್ತು, ಆದರೆ ಅಂದಿನ ಸಭೆಗೆ ಕೆಲ ಅಧಿಕಾರಿಗಳು ಗೈರಾಗಿದ್ದರಿಂದ ಮೇ 5ರಂದು ಮತ್ತೆ ಸಭೆ ಕರೆದು ಚರ್ಚಿಸಲಾಗಿದೆ.
17 ಗ್ರಾಮದ ರೈತರು
ಕುಪ್ಪಂನಿಂದ ತಾಲೂಕಿನ ಮೂಲಕ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂತಸದ ಸುದ್ದಿ. ಆದರೆ ಈ ರಸ್ತೆ ಅನೇಕ ರೈತರು ತಲ ತಲಾಂತರದಿಂದ ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಅನ್ನದಾತರು ತಮ್ಮ ಜಮೀನುಗಳನ್ನು ಕಳೆದುಕೊಳ್ಳಬೇಕಾದಿತು. ಇದು ಅನೇಕ ರೈತರಿಗೆ ಆತಂಕ ಮೂಡಿಸಿದೆ. ಈಗಾಗಲೇ ಕುಪ್ಪಂನಿಂದ ದೋಣಿಮಡಗು ಗ್ರಾಪಂ ಮೂಲಕ ಮಾಲೂರು ತಾಲೂಕು ಮೂಲಕ ಹೊಸೂರು ಹೈ ವೇ ರಸ್ತೆ ಮೂಲಕ ಬೆಂಗಳೂರು ತಲುಪುವಂತೆ ಯೋಜನೆ ರೂಪಿಸಲಾಗಿದೆ. ಈ ರಸ್ತೆಗೆ ಕಾಮಸಮುದ್ರ ಹಾಗೂ ಬೂದಿಕೋಟೆ ಹೋಬಳಿಯ 17 ಗ್ರಾಮಗಳ ರೈತರು ತಮ್ಮ ಜಮೀನುಗಳನ್ನು ರಸ್ತೆಗೆ ಕಳೆದುಕೊಳ್ಳುವಂತಾಗಿದೆ.
ದೋಣಿಮಡಗು ಗ್ರಾಪಂ, ತನಿಮಡಗು, ಬತ್ತಲಾಯೂರು, ಗುಂಡಾರ್ಲಹಳ್ಳಿ, ಬುವನಹಳ್ಳಿ, ಚಿನ್ನಕಾಮನಹಳ್ಳಿ, ತಪಲ್ಲನಹಳ್ಳಿ ಗ್ರಾಪಂ ಕಳವಂಚಿ, ಮಿಟ್ಟಹಳ್ಳಿ, ಬಂದಾರ್ಲಹಳ್ಳಿ, ಕೀರಮಂದೆ, ಬೂದಿಕೋಟೆ ಹೋಬಳಿಯ ಬಲಮಂದೆ ಕದಿರೇನಹಳ್ಳಿ, ಗಂದೋಡಿತಿಮ್ಮನಹಳ್ಳಿ, ನಾಗೇನಹಳ್ಳಿ, ಗುಲ್ಲಹಳ್ಳಿ, ಗೊಡಗುಮಂದೆ, ಬೊಪ್ಪನಹಳ್ಳಿ ಹಾಗೂ ಪಾತರಾಮಗುಳ್ಳಿ ಗ್ರಾಮಗಳ ಮೂಲಕ ನಾಲ್ಕು ಪಥಗಳ ರಸ್ತೆ ನಿರ್ಮಾಣವಾಗಲಿದೆ ಎಂದು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಗುರುತಿಸಿದೆ.
ನಾಲ್ಕು ಪಥಗಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ
ಆದರೆ ತಮ್ಮ ಗ್ರಾಮಗಳ ಮೂಲಕ ಆಂದ್ರದ ಕುಪ್ಪಂನಿಂದ ಬೆಂಗಳೂರಿಗೆ ನಾಲ್ಕು ಪಥಗಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಲಿದೆ ಎಂಬುದು ಸದ್ಯಕ್ಕೆ ರೈತರಿಗೆ ಇನ್ನೂ ತಿಳಿದಿಲ್ಲ. ಈಗಾಲೇ ಚೆನ್ನೈ ಎಕ್ಸ್‌ಪ್ರೆಸ್ ವೇ ರಸ್ತೆ ನಿರ್ಮಾಣದ ವೇಳೆ ಜಮೀನು ನೀಡಲು ರೈತರು ಹಿಂದೆ ಮುಂದೆ ನೋಡಿದರೂ ಕೊನೆಗೆ ಸರ್ಕಾರ ಬಲವಂತದಿಂದ ಭೂಸ್ವಾಧೀನ ಮಾಡಿಕೊಂಡು ರಸ್ತೆ ನಿರ್ಮಾಣ ಮಾಡಿದೆ. ಈಗಲೂ ಸಹ ರೈತರು ವಿರೋಧವ್ಯಕ್ತಪಡಿಸಿದರೂ ಭೂಸ್ವಾಧೀನ ಮಾಡಿಕೊಂಡು ರಸ್ತೆ ಸಿದ್ಧವಾಗಲಿದೆ. ಆದರೆ ಜಮೀನು ಕಳೆದುಕೊಳ್ಳುವ ರೈತರು ಸೂಕ್ತ ಪರಿಹಾರಕ್ಕಾಗಿ ಹೋರಾಟ ಮಾಡಬೇಕಷ್ಟೇ.


