Asianet Suvarna News Asianet Suvarna News

ಕೋಲಾರ: ನಿಷೇಧ ಹೇರಿರೋ ಜಿಲ್ಲಾಡಳಿತ ಭವನದಲ್ಲೇ ರಾಶಿ ಬಿದ್ದಿದೆ ಪ್ಲಾಸ್ಟಿಕ್‌..!

ಜನರಿಗೆ ಪ್ಲಾಸ್ಟಿಕ್ ಬಳಸಬೇಡಿ ಅನ್ನೋ ಜಿಲ್ಲಾಡಳಿತ ಭವನದ ಆವರಣದಲ್ಲೇ ಪ್ಲಾಸ್ಟಿಕ್ ತ್ಯಾಜ್ಯ ರಾಶಿ ಬಿದ್ದಿದೆ. ಇದೂ ಸಾಲದು ಎಂದು ತ್ಯಾಜ್ಯವನ್ನು ಬೆಂಕಿ ಇಟ್ಟು ನಾಶ ಮಾಡೋ ಮೂಲಕ ಪರಿಸರ ಮಾಲೀನ್ಯಕ್ಕೆ ಗರಿಷ್ಠ ಕೊಡುಗೆ ನೀಡ್ತಿದೆ ಕೋಲಾರದ ಜಿಲ್ಲಾಡಳಿತ.

Kolar District Administration burns Plastic in Office surrounding
Author
Bangalore, First Published Jul 30, 2019, 10:26 AM IST
  • Facebook
  • Twitter
  • Whatsapp

ಚಿಕ್ಕಬಳ್ಳಾಪುರ(ಜು.30): ಪರಿಸರಕ್ಕೆ ಮಾರಕವಾಗಿ ಪರಿಣಮಿಸಿರುವ ಪ್ಲಾಸ್ಟಿಕ್‌ ತ್ಯಾಜ್ಯ ಸಮರ್ಪಕ ನಿರ್ವಹಣೆ ಕುರಿತು ಆದೇಶಗಳು ಜಾರಿಯಾಗುವ ಜಿಲ್ಲಾಡಳಿತದಲ್ಲಿಯೇ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ಆಗದಿದ್ದು, ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಬೆಂಕಿ ಹಚ್ಚಿದರೆ ದಂಡ ವಿಧಿಸುವ ಎಚ್ಚರಿಕೆ ನೀಡಿರುವ ಜಿಲ್ಲಾಡಳಿತ ಭವನದಲ್ಲಿಯೇ ಪ್ಲಾಸ್ಟಿಕ್‌ಗೆ ಬೆಂಕಿ ಹಚ್ಚಿ ಸುಡಲಾಗುತ್ತಿದೆ.

ಇತ್ತೀಚಿಗೆ ನೀಡಿದ ಆದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಶೇಖರಣೆಯಾಗಿರುವ ಪ್ಲಾಸ್ಟಿಕ್‌ ಸೇರಿದಂತೆ ಇತರೆ ಕಸಕ್ಕೆ ಬೆಂಕಿ ಹಾಕಬಾರದೆಂದು, ಹಾಕಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ಸಂದೇಶ ನೀಡಲಾಗಿದೆ.

ಅಧಿಕಾರಿಗಳೇ ಪಾಲಿಸದಿದ್ದರೆ ಹೇಗೆ?

ಜಿಲ್ಲೆಯಲ್ಲಿ ಕೆಲ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಆದೇಶಗಳು ಗಾಳಿಗೆ ತೂರುತ್ತಿದ್ದು, ಇದು ಇಡೀ ಆಡಳಿತಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸುತ್ತಿರುವುದು ವಿಪರ್ಯಾಸ. ಜಿಲ್ಲಾಡಳಿತ ಭವನದಲ್ಲಿ ಸುಮಾರು 30ಕ್ಕೂ ಹೆಚ್ಚು ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಪ್ರತಿನಿತ್ಯ ನೂರಾರು ಕೆಜಿ ಕಸ ಉತ್ಪತ್ತಿಯಾಗುತ್ತದೆ. ಜೊತೆಗೆ ಒಣಕಸದ ಪ್ರಮುಖ ಅಂಶವಾಗಿರುವ ಪ್ಲಾಸ್ಟಿಕ್‌ ಕೂಡಾ ಈ ಕಸದಲ್ಲಿ ಯಥೇಚ್ಛವಾಗಿ ಉತ್ಪತ್ತಿಯಾಗುತ್ತಿದ್ದು, ಕಸವನ್ನು ಜಿಲ್ಲಾಡಳಿತ ಭವನಕ್ಕೆ ಸೇರಿದ ಜಾಗದಲ್ಲಿಯೇ ರಾಶಿ ಹಾಕಲಾಗುತ್ತದೆ.

ಸಮರ್ಪಕ ವಿಲೇವಾರಿ ಇಲ್ಲ!

ಹೀಗೆ ರಾಶಿ ಹಾಕಿರುವ ಕಸವನ್ನು ನಗರಸಭೆ ಅಥವಾ ಜಿಲ್ಲಾಡಳಿತ ಭವನದ ಕಸ ವಿಲೇವಾರಿ ಗುತ್ತಿಗೆ ಪಡೆದವರಿಂದ ಈ ಕಸ ವೈಜ್ಞಾನಿಕವಾಗಿ ವಿಲೇವಾರಿಯಾಗಬೇಕಿದೆ. ಆದರೆ ಇಲ್ಲಿ ಅದು ಸಮರ್ಪಕವಾಗಿ ನಡೆಯುತ್ತಿಲ್ಲ. ಜಿಲ್ಲಾಡಳಿತ ಭವನದಲ್ಲಿ ಪ್ಲಾಸ್ಟಿಕ್‌ ಬಾಟಲಿಗಳು, ಪ್ಲಾಸ್ಟಿಕ್‌ ಚೀಲಗಳು, ಪ್ಲಾಸ್ಟಿಕ್‌ ಕಡತ ಸೇರಿದಂತೆ ಇತರೆ ಪರಿಸರಕ್ಕೆ ಮಾರಕವಾದ ಕಸ ಹೆಚ್ಚಾಗಿಯೇ ಉತ್ಪತ್ತಿಯಾಗುತ್ತಿದೆ.

ಕಡಿವಾಣಕ್ಕೆ ಆಗ್ರಹ

ನಗರದಾದ್ಯಂತ ಖಾಲಿ ಇರುವ ನಿವೇಶನ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದಕ್ಕೆ ಕಡಿವಾಣ ಹಾಕಲು ನಗರಸಭೆ ಈಗಾಗಲೇ 9 ಕಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಇದರಿಂದ ನಗರ ವ್ಯಾಪ್ತಿಯಲ್ಲಿ ಕಸ ಹಾಕುತ್ತಿದ್ದವರ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ನಗರಸಭೆ ಮೂಲಗಳು ತಿಳಿಸಿವೆ. ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿನ ಕಸದ ರಾಶಿಗಳಿಗೆ ಬೆಂಕಿ ಹಾಕುವ ಪ್ರಕರಣಗಳೂ ಕಡಿಮೆಯಾಗಿದ್ದು, ಇದೇ ರೀತಿ ಮುಂದುವರಿದಲ್ಲಿ ಶೀಘ್ರದಲ್ಲಿಯೇ ಸ್ವಚ್ಛ ಭಾರತ್‌ ಕನಸು ನನಸಾಗಲು ಸಧ್ಯ ಎಂಬ ಅಭಿಮತ ವ್ಯಕ್ತವಾಗಿದೆ.

ಸಿಕ್ಕ ಸಿಕ್ಕಲ್ಲೆಲ್ಲ ಕಸ ಎಸೆದ್ರೆ ದಂಡ ಕಟ್ಬೇಕಾಗುತ್ತೆ ಹುಷಾರ್..!

ಜನ ಕಸ ವಿಂಗಡಿಸಿದ್ರೂ ಸಿಬ್ಬಂದಿ ವಿಂಗಡಿಸುವುದಿಲ್ಲ:

ಇಲ್ಲಿನ ನಗರಸಭೆಯಿಂದ ಪ್ರತಿ ಮನೆಗೂ ಎರಡು ಕಸದ ಬುಟ್ಟಿಗಳನ್ನು ವಿತರಿಸಲಾಗಿದ್ದು, ಕಸವನ್ನು ಸಾರ್ವಜನಿಕ ಸ್ಥಳದಲ್ಲಿ ಹಾಕದಂತೆ ನಗರಸಭೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಅಲ್ಲದೆ ನೀಡಿರುವ ಎರಡು ಕಸದಬುಟ್ಟಿಗಳಲ್ಲಿಯೂ ಒಣಕಸ ಮತ್ತು ಹಸಿಕಸ ವಿಂಗಡಿಸಿ ಪ್ರತ್ಯೇಕವಾಗಿ ನಗರಸಭೆ ವಾಹನಗಳಿಗೆ ನೀಡುವಂತೆ ಮನವಿ ಮಾಡಲಾಗಿದೆ. ಆದರೆ ಎರಡು ಕಸದ ಬುಟ್ಟಿಗಳಲ್ಲಿ ಪ್ರತ್ಯೇಕವಾಗಿ ಕಸ ನೀಡಿದರೆ, ವಾಹನದಲ್ಲಿ ಒಂದಕ್ಕೇ ಸುರಿಯಲಾಗುತ್ತಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆದೇಶ ಗೌರವಿಸದ ಅಧಿಕಾರಿಗಳು:

ಸರ್ಕಾರಿ ಆದೇಶಗಳನ್ನು ಸರ್ಕಾರಿ ಅಧಿಕಾರಿಗಳೇ ಗಾಳಿಗೆ ತೂರುತ್ತಿರುವ ಪರಿಣಾಮ ಸಮರ್ಪಕ ಅನುಷ್ಠಾನ ಸಾಧ್ಯವಾಗುತ್ತಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳು ಕೂಡಲೇ ಗಮನ ಹರಿಸಿ ಇಂತಹ ಅಚಾತುರ್ಯ ಪುನರಾವರ್ತನೆಯಾಗದಂತೆ ಸಂಬಂಧಿಸಿದವರಿಗೆ ಖಡಕ್‌ ಸೂಚನೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Follow Us:
Download App:
  • android
  • ios