Asianet Suvarna News Asianet Suvarna News

ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆ ಕೈ ಬಿಟ್ಟ ಸರ್ಕಾರ: ಆದೇಶ ವಾಪಸ್‌ ಪಡೆದ ಸಹಕಾರ ಇಲಾಖೆ

ಅವಳಿ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಹೈನೋದ್ಯಮ ಸಂಸ್ಥೆಯಾದ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ(ಕೋಚಿಮುಲ್‌) ವನ್ನು ವಿಭಜಿಸುವ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿದಿದೆ. 

Kolar Chikkaballapur milk union division has been abandoned by the government gvd
Author
First Published Jun 29, 2023, 9:43 PM IST

ಕೋಲಾರ (ಜೂ.29): ಅವಳಿ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಹೈನೋದ್ಯಮ ಸಂಸ್ಥೆಯಾದ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ(ಕೋಚಿಮುಲ್‌) ವನ್ನು ವಿಭಜಿಸುವ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿದಿದೆ. 2022ರ ಮೇ 22ರಂದು ರಾಜ್ಯ ಸಹಕಾರ ಸಂಘಗಳ ಜಂಟಿ ನಿಬಂಧಕರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಪ್ರತ್ಯೇಕ ಹಾಲು ಒಕ್ಕೂಟವನ್ನು ರಚಿಸಿ ಪ್ರತ್ಯೇಕ ನೋಂದಣಿ ಆದೇಶ ಹೊರಡಿಸಿದ್ದರು.

ಇದರ ವಿರುದ್ಧ ಚಿಂತಾಮಣಿ ತಾಲೂಕಿನ ಕೋಚಿಮುಲ್‌ ನಿರ್ದೇಶಕ ಊಲವಾಡಿ ಅಶ್ವತ್ಥನಾರಾಯಣಬಾಬು, ಚಿಕ್ಕಬಳ್ಳಾಪುರದ ನಲ್ಲಕದಿರೇನಹಳ್ಳಿ ಡೇರಿ ಅಧ್ಯಕ್ಷ ಭರಣಿ ವೆಂಕಟೇಶ್‌, ಶಿಡ್ಲಘಟ್ಟತಾಲ್ಲೂಕು ಕೆ.ಮುತ್ತುಗದಹಳ್ಳಿ ಹಾಲು ಡೇರಿ ಅಧ್ಯಕ್ಷ ಆರ್‌.ಶ್ರೀನಿವಾಸ್‌, ಶಿಡ್ಲಘಟ್ಟದ ಗುಟ್ಟೂರು ಡೇರಿ ಅಧ್ಯಕ್ಷ ಬೈರಾರೆಡ್ಡಿ, ಶಿಡ್ಲಘಟ್ಟದ ತಿಪ್ಪೇನಹಳ್ಳಿ ಡೇರಿ ಅಧ್ಯಕ್ಷ ಟಿ.ಪಿ.ಪಾರ್ಥಸಾರಥಿ ಹಾಗೂ ಕೋಲಾರ ತಾಲ್ಲೂಕು ಕಿತ್ತಂಡೂರು ಡೇರಿ ಅಧ್ಯಕ್ಷ ಕೆ.ಎ.ಸಂಪತ್‌ಕುಮಾರ್‌ ಅವರುಗಳು ಸಹಕಾರ ಇಲಾಖೆ ಜಂಟಿ ನಿಬಂಧಕರ ಆದೇಶದ ವಿರುದ್ಧ ಹೈಕೋರ್ಟ್‌ ಮೊರೆ ಹೋಗಿದ್ದರು.

ಬಿಜೆಪಿ ಮುಖಂಡರಿಂದಲೇ ಪಕ್ಷಕ್ಕೆ ಸೋಲು: ಸಂಸದ ಮುನಿಸ್ವಾಮಿ ಬೇಸರ

ವಿಭಜನೆ ಆದೇಶ ವಾಪಸ್‌: ಇದನ್ನು ಪರಿಶೀಲಿಸಿದ ಹೈಕೋರ್ಟ್‌, ಸರ್ಕಾರ ಹೊರಡಿಸಿದ್ದ ಒಕ್ಕೂಟದ ವಿಭಜನೆ ಆದೇಶಕ್ಕೆ ತಡೆಯಾಜ್ಞೆ ನೀಡಿ ಯಥಾಸ್ಥಿತಿ ಪಾಲಿಸುವಂತೆ ಸೂಚಿಸಿತ್ತು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಉಸ್ತುವಾರಿ ಸಚಿವರಾಗಿದ್ದ ಡಾ.ಕೆ.ಸುಧಾಕರ್‌ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸುವ ಉದ್ದೇಶದಿಂದ ಕೋಚಿಮುಲ್‌ ವಿಭಜನೆಗೆ ಮುಂದಾಗಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೂನ್‌ 26ರಂದು ಸಹಕಾರ ಇಲಾಖೆ ಜಂಟಿ ನಿಬಂಧಕರು ಕೋಚಿಮುಲ್‌ ವಿಭಜನೆ ಆದೇಶವನ್ನು ವಾಪಸ್‌ ಪಡೆದು ಮತ್ತೊಂದು ಆದೇಶ ಹೊರಡಿಸಿದ್ದಾರೆ.

ಜೂನ್‌ 27ರ ಮಂಗಳವಾರ ಹೈಕೋರ್ಟ್‌ನಲ್ಲಿ ಕೋಚಿಮುಲ್‌ ವಿಭಜನೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳುತ್ತಿದ್ದಂತೆ ರಾಜ್ಯ ಸರ್ಕಾರದ ಪರ ವಕೀಲರು ಸಹಕಾರ ಇಲಾಖೆ ಜಂಟಿ ನಿಬಂಧಕರು ವಿಭಜನೆ ಆದೇಶವನ್ನು ವಾಪಸು ಪಡೆದಿರುವ ಪ್ರತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಇದನ್ನು ಹೈಕೋಟ್‌ ಪರಿಗಣಿಸಿದ್ದರಿಂದ ಕೋಚಿಮುಲ್‌ ಅಸ್ತಿತ್ವ ಯಥಾಪ್ರಕಾರ ಮುಂದುವರಿಯಲಿದೆ. ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದ ಚಿಮುಲ್‌ ಮಾನ್ಯತೆ ಕಳೆದುಕೊಂಡಂತಾಗಿದೆ.

ಕೋಲಾರ ಒಕ್ಕೂಟದಿಂದ ಆಸ್ತಿ ವಿಭಜನೆ ಜತೆಗೆ ಸಿಬ್ಬಂದಿಯನ್ನೂ ವರ್ಗಾವಣೆ ಮಾಡಿ ಪ್ರತ್ಯೇಕವಾಗಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಸ್ವತಂತ್ರ ಕಾರ್ಯನಿರ್ವಹಣೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಕಳೆದ ಮೂರು ದಶಕಗಳಿಂದ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಹೈನೋದ್ಯಮವೇ ಕಾಪಾಡುತ್ತಿದೆ. ಸತತ ಬರಗಾಲದ ನಡುವೆಯೂ ಅವಳಿ ಜಿಲ್ಲೆಯನ್ನು ಕೋಚಿಮುಲ್‌ ರಕ್ಷಣೆ ಮಾಡಿತ್ತು. ಆದರೆ ಹಿಂದಿನ ರಾಜ್ಯ ಸರ್ಕಾರ ಪೂರ್ವಸಿದ್ಧತೆ ಇಲ್ಲದೆ ಅವಸರದಲ್ಲಿ ಒಕ್ಕೂಟವನ್ನು ವಿಭಜನೆ ಮಾಡುವ ಮೂಲಕ ಎರಡೂ ಜಿಲ್ಲೆಯ ಹೈನುಗಾರರ ಭವಿಷ್ಯಕ್ಕೆ ಕುತ್ತು ತರುವ ಕೆಲಸ ಮಾಡಿತ್ತು ಎಂದು ಕೋಚಿಮುಲ್‌ ಚಿಂತಾಮಣಿ ತಾಲೂಕಿನ ನಿರ್ದೇಶಕ ಕೆ.ಎ.ಅಶ್ವತ್ಥನಾರಾಯಣ ಬಾಬು ಹೇಳಿದರು.

ಸರ್ಕಾರದ ಆತುರ ನಿರ್ಧಾರ: ಹೈಕೋರ್ಟ್‌ ತೀರ್ಪಿನ ನಂತರ ಕೋಚಿಮುಲ್‌ ಅಧ್ಯಕ್ಷ ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಒಕ್ಕೂಟದ ವಿಭಜನೆ ಕುರಿತು ಹಿಂದಿನ ಸರ್ಕಾರ ಕೈಗೊಂಡಿದ್ದ ಆತುರದ ನಿರ್ಧಾರ ರಾಜಕೀಯ ಸ್ವಾರ್ಥ ಸಾಧನೆಯ ಅಜೆಂಡಾದ ಅನುಮಾನ ಹುಟ್ಟಿಸಿತ್ತು. ವಿಭಜನೆಗೆ ನಾವುಗಳು ವಿರೋಧಿಸಿರಲಿಲ್ಲ. ಆದರೆ ವಿಭಜನೆಗೆ ಮುನ್ನ ಎರಡೂ ಒಕ್ಕೂಟಗಳ ಹಿತರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳದೇ ಇದ್ದುದು ನೋವು ತಂದಿತ್ತು. ಅದನ್ನು ವಿರೋಧಿಸಿ ಪ್ರಾಥಮಿಕ ಹಾಲು ಸಹಕಾರ ಸಂಘಗಳ ಅಧ್ಯಕ್ಷರೇ ನ್ಯಾಯಾಲಯದ ಮೊರೆ ಹೋಗಿದ್ದರು ಎಂದು ವಿವರಿಸಿದರು.

Kolar: ಸಾಲ ವಸೂಲಿಗೆ ಬಂದ್ರೆ ಹುಷಾರ್‌!: 'ಸ್ತ್ರೀ ಶಕ್ತಿ' ಎಚ್ಚರಿಕೆ

ಹೈನುಗಾರರ ಹಿತರಕ್ಷಣೆಗೆ ಕ್ರಮ: ಜೂನ್‌ 26ರಂದು ರಾಜ್ಯ ಸಹಕಾರ ಸಂಘಗಳ ಜಂಟಿ ನಿಬಂಧಕರು ಕೋಚಿಮುಲ್‌ ವಿಭಜನೆ ಆದೇಶ ವಾಪಸ್‌ ಪಡೆದಿರುವುದರಿಂದ ಕೋಚಿಮುಲ್‌ ಅಸ್ತಿತ್ವ ಮುಂದುವರೆಯಲಿದೆ ಮತ್ತು ಎರಡೂ ಜಿಲ್ಲೆಗಳಲ್ಲಿ ಒಕ್ಕೂಟದ ಮತ್ತು ಹೈನುಗಾರರ ಹಿತರಕ್ಷಣೆಗೆ ಕೋಚಿಮುಲ್‌ ಕ್ರಮ ಜರುಗಿಸಲಿದೆ ಎಂದು ಕೋಚಿಮುಲ್‌ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ತಿಳಿಸಿದ್ದಾರೆ. ಕೋಲಾರದಲ್ಲಿ ಹೊಸದಾಗಿ ಎಂವಿಕೆ ಡೇರಿ ನಿರ್ಮಾಣ ಹಾಗೂ ಚಿಕ್ಕಬಳ್ಳಾಪುರದಲ್ಲಿ ಮೆಗಾ ಡೇರಿಗೆ ಅಗತ್ಯ ಸೌಕರ್ಯಗಳ ವೃದ್ಧಿಯ ಜತೆಗೆ ಅವಳಿ ಜಿಲ್ಲೆಯ ಹಾಲು ಉತ್ಪಾದಕರು ಮತ್ತು ಅವರ ಕುಟುಂಬಗಳ ಹಿತರಕ್ಷಣೆಗಾಗಿ ಕೋಚಿಮುಲ್‌ ಯಥಾಪ್ರಕಾರ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ನಂಜೇಗೌಡ ತಿಳಿಸಿದರು.

Latest Videos
Follow Us:
Download App:
  • android
  • ios