ಅರಸೀಕೆರೆ [ಮಾ.07]:  ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದಲ್ಲಿ ಮಾ.10, 11 ಹಾಗೂ 12ರಂದು ಮೂರು ದಿನಗಳ ಕಾಲ ಶ್ರೀಮಹದೇಶ್ವರ ಜಾತ್ರಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದು ಶ್ರೀಕ್ಷೇತ್ರ ಆಜ್ಞಾನಧಾರಕ ಭಕ್ತ ಮಂಡಲಿ ವ್ಯವಸ್ಥಾಪಕ ಜಿ.ಎಸ್‌.ದಕ್ಷಿಣಾಮೂರ್ತಿ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ತಾಲೂಕಿನ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಪೀಠಾಧ್ಯಕ್ಷ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ಅಪ್ಪಣೆ ಮೇರೆಗೆ ಬೆಳಗಾವಿ ಜಿಲ್ಲಾ ನಿಡಸೂಸಿ ಸಿದ್ಧಸಂಸ್ಧಾನ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಮಾ.10ರಂದು ಮಂಗಳವಾರ ಬೆಳಗ್ಗೆ 5 ಗಂಟೆಗೆ ಹುಣ್ಣಿಮೆ ಕಟ್ಟಳೆ, ಜಗದ್ಗುರು ಜಂಗಮ ಮಾಹಾಪೂಜೆ, ಸುಕ್ಷೇತ್ರ ಕೋಡಿಮಠ ಪೀಠವನ್ನು ಅಲಂಕರಿಸಿದ 55 ಜಗದ್ಗುರುಗಳ ದಿವ್ಯ ಸ್ಮರಣಾರ್ಥ ಕರ್ತೃ ಗದ್ದುಗೆ ಮಹಾಪೂಜೆ, ಧ್ವಜಾರೋಹಣ ಸಿಂಹಾಸನ ಪೂಜೆ, ರಜತ ಪಲ್ಲಕ್ಕಿ ಪೂಜೆ ನಂತರ ಗದಗ ಅಸುಂಡಿ ಆಧ್ಯಾತ್ಮ ವಿದ್ಯಾಶ್ರಮದ ಡಾ.ಶಿವಶರಣೆ ನೀಲಮ್ಮ ತಾಯಿಯವರ ಸಾನಿಧ್ಯದಲ್ಲಿ ಮಹಿಳಾ ಸಮಾವೇಶ ನಡೆಯಲಿದೆ ಎಂದರು.

11ಕ್ಕೆ ಧಾರ್ಮಿಕ ಸಭೆ:  ಮಾ.11ರಂದು ಬೆಳಗ್ಗೆ ಪುರಾಣ ಶ್ರವಣ, ನಂತರ ಸವದತ್ತಿ ಶ್ರೀಸಂಗಮೇಶ್ವರ ಭಜನಾ ಮಂಡಲಿ ಮತ್ತು ಅಸುಂಡಿ ಶ್ರೀಸಿದ್ದಲಿಂಗೇಶ್ವರ ಭಜನಾ ಮಂಡಲಿ ಹಾಗೂ ವಿವಿಧ ಕಲಾತಂಡಗಳ ನೃತ್ಯ ಪ್ರದರ್ಶನದೊಂದಿಗೆ ಹಾರನಹಳ್ಳಿ ಗ್ರಾಮದಲ್ಲಿ ಸ್ವಾಮೀಜಿಗಳು ಸಂಪ್ರದಾಯದಂತೆ ಭಿಕ್ಷಾಟನೆ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಮಠದಲ್ಲಿ ನಿಡಸೂಸಿ ಸಿದ್ಧಸಂಸ್ಧಾನ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ಸಮಾರಂಭ ನಡೆಯಲಿದೆ. ರಾತ್ರಿ 10 ಗಂಟೆಗೆ ಮಹದೇಶ್ವರ ಬೆಟ್ಟದಲ್ಲಿ ಹಾನಗಲ್‌ ಬೊಮ್ಮನಹಳ್ಳಿ ವಿರಕ್ತಮಠದ ಶಿವಯೋಗಿ ಸ್ವಾಮೀಜಿಗಳ ಪಾದಪೂಜೆ ನೆರವೇರಲಿದೆ ಎಂದು ಹೇಳಿದರು.

ಸರ್ಕಾರದ ಬಗ್ಗೆ ಭವಿಷ್ಯ ನುಡಿದ ಕೋಡಿಮಠ ಶ್ರೀ : BSY ಸೇಫಾ?...

ಮಾ.12 ರಂದು ಗುರುವಾರ ಬೆಳಗ್ಗೆ 6.30ಕ್ಕೆ ಶಿವಲಿಂಗಸ್ವಾಮಿಗಳ ಗದ್ದುಗೆಗೆ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ಪೂಜೆ ನಡೆಯಲಿದ್ದು, ಶ್ರೀ ಮಠದ ಪದ್ಧತಿಯಂತೆ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪಲ್ಲಕ್ಕಿ ಉತ್ಸವ ಹಾರನಹಳ್ಳಿ ಗ್ರಾಮದ ಪುರ ಪ್ರವೇಶದ ನಂತರ ಮಹದೇಶ್ವರ ಬೆಟ್ಟದಲ್ಲಿ ಮಧ್ಯಾಹ್ನ 12 ಗಂಟೆಗೆ ಗುಗ್ಗಳ ಸೇವೆ ಹೆಜ್ಜೆ ನಮಸ್ಕಾರ, ಡಿಂಡುರುಳು ಸೇವೆ, ಜಂಗಮಪೂಜೆ, ಮತ್ತೈದೆ ಸೇವೆ ನಂತರ ಮಹಾ ದಾಸೋಹ ಜರುಲಿದೆ. ಸಂಜೆ ಮಠದ ಆವರಣದಲ್ಲಿ ನಡೆಯುವ ಧಾರ್ಮಿಕ ಸಮಾರಂಭದ ಸಾನ್ನಿಧ್ಯವನ್ನು ನಿಡಸೂಸಿ ಸಿದ್ಧಸಂಸ್ಧಾನ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ವಹಿಸಲಿದ್ದು, ಶಿರಹಟ್ಟಿಶ್ರೀಫಕೀರೇಶ್ವರ ಸಂಸ್ಥಾನ ಮಠದ ಶ್ರೀಫಕೀರ ಸಿದ್ದರಾಮೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರಿಸಿದರು.

ಕಡೂರು ಮೂರು ಕಳಸ ಮಠದ ಶ್ರೀಜ್ಞಾನಪ್ರಭು ಸಿದ್ದರಾಮದೇಶಿ ಕೇಂದ್ರ ಸ್ವಾಮೀಜಿ, ಮಾಡಾಳು ವಿರಕ್ತಮಠದ ಶ್ರೀರುದ್ರಮುನಿ ಸ್ವಾಮೀಜಿ, ಕೊಳಗುಂದ ಕೇದಿಗೆ ಮಠದ ಶ್ರೀಜಯಚಂದ್ರಶೇಖರ ಸ್ವಾಮೀಜಿ ಸೇರಿದಂತೆ ಹರಗುರು ಶಿವಮೂರ್ತಿಗಳು ಈ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ. ಆದ್ದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಧಾರ್ಮಿಕ ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ದಕ್ಷಿಣಮೂರ್ತಿ ಮನವಿ ಮಾಡಿದರು.