ಅದೊಂದು ಆಯುಧವೆಂದು ಬಳಕೆ ಮಾಡುವ ಕೋವಿಗೂ ಇಲ್ಲಿಗೆ ಹೂ ಮುಡಿಸಿ, ದೀಪ, ಊದುಬತ್ತಿಗಳ ಹೆಚ್ಚಿ ಪೂಜೆ ಸಲ್ಲಿಸಿದ್ರು. ಅಷ್ಟೇ ಏಕೆ ಎಲ್ಲರೂ ಹೆಗಲ ಮೇಲೇರಿಸಿ ಅದೇ ಕೋವಿಗೆ ಮೆರವಣಿಗೆಯನ್ನೂ ಮಾಡಿದರು.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣನ್ಯೂಸ್
ಕೊಡಗು (ಡಿ.18): ಅದೊಂದು ಆಯುಧವೆಂದು ಬಳಕೆ ಮಾಡುವ ಕೋವಿಗೂ ಇಲ್ಲಿಗೆ ಹೂ ಮುಡಿಸಿ, ದೀಪ, ಊದುಬತ್ತಿಗಳ ಹೆಚ್ಚಿ ಪೂಜೆ ಸಲ್ಲಿಸಿದ್ರು. ಅಷ್ಟೇ ಏಕೆ ಎಲ್ಲರೂ ಹೆಗಲ ಮೇಲೇರಿಸಿ ಅದೇ ಕೋವಿಗೆ ಮೆರವಣಿಗೆಯನ್ನೂ ಮಾಡಿದರು. ಅರೆ ಇದೇನು ಕೋವಿಯನ್ನು ಎಲ್ಲಾದರೂ ಪೂಜಿಸ್ತಾರಾ ಎಂದು ಅಚ್ಚರಿಯಿಂದ ನೋಡ್ತಾ ಇದ್ದೀರಾ. ಹಾಗಾದರೆ ಇಂತಹ ವಿಶಿಷ್ಟ ಸಂಸ್ಕೃತಿ ಇರುವುದಾದರೂ ಎಲ್ಲಿ ಅಂತೀರಾ. ನೀವೆ ನೋಡಿ. ಒಪ್ಪ ಓರಣವಾಗಿ ಜೋಡಿಸಲ್ಪಟ್ಟಿರುವ ಕೋವಿಗಳು, ಕೋವಿಗೂ ಹೂವಿಟ್ಟು, ಧೂಪ, ದೀಪಗಳಿಂದ ಪೂಜೆ ಸಲ್ಲಿಸುತ್ತಿರುವ ಕೊಡವರು.
ಅದೇ ಗನ್ನನ್ನು ಹೆಗಲ ಮೇಲೇರಿಸಿ ಭಕ್ತಿ ಭಾವದಿಂದ ಮೆರವಣಿಗೆ ನಡೆಸುತ್ತಿರುವ ಕೊಡವ, ಕೊಡವತ್ತಿಯರು. ಎಸ್. ಇಂತಹ ಅಪರೂಪದ ಹಾಗೂ ವಿಶಿಷ್ಟ ದೃಶ್ಯಗಳು ಕಂಡು ಬಂದಿದ್ದು ಕೊಡಗು ಜಿಲ್ಲೆಯಲ್ಲಿ. ವಿಶ್ವ ಅಲ್ಪಸಂಖ್ಯಾತರ ದಿನದ ಅಂಗವಾಗಿ ಇಲ್ಲಿನ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮಡಿಕೇರಿ ತಾಲ್ಲೂಕಿನ ಮೂರ್ನಾಡಿನಲ್ಲಿ ಕೋವಿ ಹಬ್ಬ ನಡೆಯಿತು. ಮಂದ್ನಲ್ಲಿ ಕೋವಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕೊಡಗು ಎಂದರೆ ವಿಶಿಷ್ಟ ಸಂಸ್ಕೃತಿಗಳ ಬೀಡು. ಎಲ್ಲೆಡೆ ಕೋವಿ ಎಂದರೆ ಅದೊಂದು ಆಯುಧವಾದರೆ, ಕೊಡಗಿನಲ್ಲಿ ಅದಕ್ಕೆ ದೈವತ್ವದ ಸ್ಥಾನವಿದೆ. ಹುಟ್ಟಿದರೂ ಗುಂಡು ಹಾರಿಸುವ, ಸತ್ತರೂ ಗುಂಡು ಹೊಡೆಯುವ ಕೊಡವರಿಗೆ ಕೋವಿ ಎಂದರೆ ತಮ್ಮ ಬದುಕಿನ ಅವಿಭಾಜ್ಯ ಅಂಗ.
ಅಂತಹ ಗನ್ನಿಗೂ ಕೂಡ ಒಂದು ವಿಶೇಷ ಹಬ್ಬವಿದೆ. ಅದೇ ಕೋವಿ ಹಬ್ಬ. ಇಂತಹ ವಿಶೇಷ ಹಬ್ಬವನ್ನು ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮಡಿಕೇರಿ ತಾಲ್ಲೂಕಿನ ಮೂರ್ನಾಡುವಿನಲ್ಲಿ 15 ನೇ ವರ್ಷದ ಕೋವಿ ಹಬ್ಬ ನಡೆಯಿತು. ಈ ಸಂದರ್ಭ ಮಾತನಾಡಿದ ಎನ್.ಯು. ನಾಚಪ್ಪ ಅವರು ಕೊಡಗಿನ ನೆಲ, ಜಲ ಮತ್ತು ಪರಿಸರ ರಕ್ಷಣೆಗಾಗಿ ನಾವು ಕಟಿಬದ್ಧರಾಗಿದ್ದೇವೆ. ಜೊತೆಗೆ ನಮ್ಮ ಆಜನ್ಮಸಿದ್ಧ ಹಕ್ಕಾಗಿರುವ ಕೋವಿಯ ಹಕ್ಕನ್ನು ಎಂದೆಂದಿಗೂ ಮುಂದುವರೆಯುವಂತೆ ಮಾಡಲು ಆಳುವ ಸರ್ಕಾರಗಳಿಗೆ ಮತ್ತು ವಿಶ್ವಕ್ಕೆ ತಿಳಿಸುವ ದೃಷ್ಟಿಯಿಂದ ಕಳೆದ 16 ವರ್ಷಗಳಿಂದ ನಾವು ಕೋವಿ ಹಬ್ಬ ಆಚರಿಸುತ್ತಿದ್ದೇವೆ. ನಮ್ಮ ಹಕ್ಕುಗಳನ್ನು ಸರ್ಕಾರಗಳು ಅಬಾಧಿತವಾಗಿ ಮುಂದುವರಿಸಿಕೊಂಡು ಹೋಗಬೇಕು. ಜೊತೆಗೆ ಕೊಡವರ ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಕೊಡವರ ಭಕ್ತಿಯ ಸಂಕೇತವಾದ ಅಲ್ಲಿನ ಮಂದ್ ನಲ್ಲಿ ತಮ್ಮ ತಮ್ಮ ಮನೆಗಳಿಂದ ತಂದಿದ್ದ ಹಲವು ಕೋವಿಗಳನ್ನು ಶುದ್ಧಗೊಳಿಸಿ ಒಂದೆಡೆ ಒಪ್ಪಓರಣವಾಗಿ ಜೋಡಿಸಿ ಇರಿಸಲಾಗಿತ್ತು. ಅದರ ಪಕ್ಕದಲ್ಲೇ ಅವರು ಹಿಂದಿನಿಂದಲೂ ಬಳಸುವ ಕತ್ತಿ, ಕುಡುಗೋಲು, ಭರ್ಜಿ, ಈಟಿ ಸೇರಿದಂತೆ ಹಲವು ಆಯುಧಗಳನ್ನು ಜೋಡಿಸಿ ಇರಿಸಲಾಗಿತ್ತು. ಮತ್ತೊಂದೆಡೆ ಅವರ ಕೃಷಿ ಪರಿಕರಗಳು ಸೇರಿದಂತೆ ಗೃಹ ಬಳಕೆಯ ವಸ್ತುಗಳನ್ನು ಇರಿಸಲಾಗಿತ್ತು. ಕೋವಿ ಸೇರಿದಂತೆ ಇತರೆ ಆಯುಧಗಳು ಮತ್ತು ವಸ್ತುಗಳಿಗೆ ಹೂವಿಟ್ಟು, ಪೂಜೆ ಸಲ್ಲಿಸಲಾಯಿತು. ಬಳಿಕ ಪ್ರತಿಯೊಬ್ಬರು ಒಂದೊಂದು ಕೋವಿ ಎತ್ತಿಕೊಂಡು ಮಂದ್ ನಲ್ಲಿ ದುಡಿಕೊಟ್ಟು ಪಾಟ್ ವಾದ್ಯದೊಂದಿಗೆ ಮೂರು ಸುತ್ತು ಮೆರವಣಿಗೆ ಸಾಗಿದರು. ಬಳಿಕ ಬಾಳೆ ಕಂದುಗಳನ್ನು ಕಡಿದು ಕೋವಿ ಹಬ್ಬಕ್ಕೆ ಚಾಲನೆ ನೀಡಲಾಯಿತು.
ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ
ಬಳಿಕ ಮಹಿಳೆಯರು, ಮಕ್ಕಳು ಮತ್ತು ಪುರುಷರು ಎನ್ನುವ ಬೇಧ ಭಾವವಿಲ್ಲದೆ ಎಲ್ಲರೂ ತೆಂಗಿನ ಕಾಯಿಗೆ ಗುಂಡು ಹೊಡೆದು ಸಂಭ್ರಮಿಸಿದರು. ಜೊತೆಗೆ ಎಲ್ಲರೂ ಸಾಮೂಹಿಕ ನೃತ್ಯ ಮಾಡುವ ಮೂಲಕ ಕೋವಿ ಹಬ್ಬವನ್ನು ವಿಶೇಷವಾಗಿ ಆಚರಿಸಿದರು. ಮೀನಾ ಕಾರಿಯಪ್ಪ ಅವರು ನಮ್ಮ ಹಕ್ಕುಗಳಿಗಾಗಿ ನಾವು ಹಿಂದಿನಿಂದ ಹೋರಾಡುತ್ತಲೇ ಇದ್ದೇವೆ. ಇದೇ ಉದ್ದೇಶದಿಂದಲೇ ನಾವು ಕೋವಿ ಹಬ್ಬವನ್ನು ಆಚರಿಸುತ್ತಿದ್ದೇವೆ. ಬೇಟೆ ಇಂದು ನಿಷಿದ್ಧವಾಗಿರುವುದರಿಂದ ಅದರ ಸಂಕೇತವಾಗಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯೂ ನಡೆಯುತ್ತಿದೆ ಎಂದಿದ್ದಾರೆ. ಒಟ್ಟಿನಲ್ಲಿ ವಿಶಿಷ್ಟ ಆಚರಣೆಯನ್ನು ಹೊಂದಿರುವ ಕೊಡವರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಕೋವಿಗೂ ಒಂದು ಹಬ್ಬ ಮಾಡಿದ್ದು ವಿಶೇಷವಾಗಿತ್ತು.


