ಹವಾಮಾನ ವೈಪರೀತ್ಯಗಳ ನಡುವೆ ರೈತರು ಕೃಷಿ ಮಾಡುವುದೆಂದರೆ ಅತ್ಯಂತ ಸವಾಲಿನ ಕೆಲಸ. ಈ ಸವಾಲುಗಳ ಎದುರಿಸಿ ಬೆಳೆ ಬೆಳೆದರೂ ಅವರ ಬೆಳೆಗಳಿಗೆ ಉತ್ತಮ ಬೆಲೆ ಸಿಗುವುದಂತೂ ತೀರ ಕಷ್ಟವೇ. ಇಷ್ಟೆಲ್ಲಾ ಸಮಸ್ಯೆಗಳ..

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

Add Asianetnews Kannada as a Preferred SourcegooglePreferred

ಕೊಡಗು (ಏ.30): ಹವಾಮಾನ ವೈಪರೀತ್ಯಗಳ ನಡುವೆ ರೈತರು ಕೃಷಿ ಮಾಡುವುದೆಂದರೆ ಅತ್ಯಂತ ಸವಾಲಿನ ಕೆಲಸ. ಈ ಸವಾಲುಗಳ ಎದುರಿಸಿ ಬೆಳೆ ಬೆಳೆದರೂ ಅವರ ಬೆಳೆಗಳಿಗೆ ಉತ್ತಮ ಬೆಲೆ ಸಿಗುವುದಂತೂ ತೀರ ಕಷ್ಟವೇ. ಇಷ್ಟೆಲ್ಲಾ ಸಮಸ್ಯೆಗಳ ಎದುರಿಸಿ ಬೆಳೆ ಬೆಳೆಯುವ ರೈತರಿಗೆ ರಸಗೊಬ್ಬರ ಕಂಪೆನಿಗಳಿಂದ ಮೋಸ ಮಾಡುವ ಕೆಲಸ ಆಗಿದೆ. ಹೌದು ಕೊಡಗು ಜಿಲ್ಲೆಗೆ ಏಪ್ರಿಲ್ ತಿಂಗಳಿನಲ್ಲಿ ಇಂಡಿಯನ್ ಪೊಟಾಷ್ ಲಿಮಿಟೆಡ್ ಕಂಪೆನಿಯಿಂದ ಹಲವು ಲೋಡುಗಳ ರಸಗೊಬ್ಬರ ಪೂರೈಕೆಯಾಗಿದೆ.

ಇದರಲ್ಲಿ ಅಪಾರ ಪ್ರಮಾಣದ ಚೀಲಗಳಲ್ಲಿ ನಿಗಧಿತ ಪ್ರಮಾಣಕ್ಕಿಂತ ಕಡಿಮೆ ರಸಗೊಬ್ಬರ ಇರುವುದು ಪತ್ತೆಯಾಗಿದೆ. ಹೌದು 50 ಕೆ.ಜಿ. ರಸಾಗೊಬ್ಬರ ಇರುವ ಚೀಲದಲ್ಲಿ 46 ಕೆ.ಜಿ., 47 ಕೆ.ಜಿ. ಇನ್ನು ಕೆಲವು ಚೀಲಗಳಲ್ಲಿ 48 ಕೆ.ಜಿ. ರಸಾಗೊಬ್ಬರ ಇದೆ. ಪೊನ್ನಂಪೇಟೆ ತಾಲ್ಲೂಕಿನ ಹಾತೂರಿನ ಕೆ. ಮಾಚಯ್ಯ ಅವರು ಅಲ್ಲಿನ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಿಂದ 50 ಚೀಲ ರಸಗೊಬ್ಬರ ಖರೀದಿಸಿದ್ದರು. ಅನುಮಾನಗೊಂಡು ಕೆಲವು ಚೀಲಗಳನ್ನು ತೂಕ ಮಾಡಿದಾಗ ಹಲವು ಚೀಲಗಳಲ್ಲಿ ಕಡಿಮೆ ರಸಗೊಬ್ಬರ ಇರುವುದು ಗೊತ್ತಾಗಿದೆ.

ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರೂ ಕೊಡಗು ಡಿಸಿಸಿ ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಕೆ ಗಣಪತಿ ಅವರು ತಮ್ಮ ಸಹಕಾರ ಸಂಘದಲ್ಲಿದ್ದ ರಸಗೊಬ್ಬರದ ನೂರು ಚೀಲಗಳನ್ನು ತೂಕ ಮಾಡಿದ್ದಾರೆ. ಅದರಲ್ಲಿ 50 ಚೀಲಗಳಲ್ಲಿ ಕಡಿಮೆ ರಸಗೊಬ್ಬರ ಇರುವುದು ಗೊತ್ತಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಗಣಪತಿ ಅವರು ರಸಗೊಬ್ಬರ ಚೀಲಗಳನ್ನು ವಾಪಸ್ ತುಂಬಿಸಿ ಮಡಿಕೇರಿಯಲ್ಲಿರುವ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ತಂದು ತೂಕ ಹಾಕಿಸಿದ್ದಾರೆ. ಆ ಮೂಲಕ ಐಪಿಎಲ್ ಕಂಪೆನಿಯಿಂದ ಕೊಡಗು ಜಿಲ್ಲೆಗೆ ಪೂರೈಕೆಯಾಗಿದ್ದ ಬರೋಬ್ಬರಿ 51 ಟನ್ ರಸಗೊಬ್ಬರವನ್ನು ವಾಪಸ್ ಪಡೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

ಹೀಗೆ ರೈತರಿಗೆ ರಸಗೊಬ್ಬರದ ತೂಕದಲ್ಲಿ ಮೋಸ ಮಾಡಿರುವ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ರೈತ ಮುಖಂಡರು ಆಗ್ರಹಿಸಿದ್ದಾರೆ. ಪ್ರತೀ ಚೀಲದಲ್ಲೂ ಮೂರರಿಂದ ನಾಲ್ಕು ಕೆ.ಜಿ. ಯಷ್ಟು ರಸಗೊಬ್ಬರ ಕಡಿಮೆ ಪೂರೈಕೆ ಮಾಡಿರುವ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮೋದಿ, ಕೇಂದ್ರ ಕೃಷಿ ಸಚಿವರು ಹಾಗೂ ರಾಜ್ಯ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರಿಗೆ ಪತ್ರ ಬರೆದು ದೂರು ಸಲ್ಲಿಸಿದ್ದಾರೆ.

ಈ ಕುರಿತು ಮಾತನಾಡಿರುವ ಕೊಡಗು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ. ಗಣಪತಿ ಅವರು ಪ್ರತೀ ಚೀಲದಲ್ಲಿ ಮೂರರಿಂದ ನಾಲ್ಕು ಕೆ.ಜಿ ಗೊಬ್ಬರ ಕಡಿಮೆ ಇರುವುದು ನಮ್ಮ ಗಮನಕ್ಕೆ ಬಂದ ಕೂಡಲೇ ಕೃಷಿ ಇಲಾಖೆ ಅಧಿಕಾರಿಗಳ ಕಚೇರಿ ತಂದು ಅದನ್ನು ಬಹಿರಂಗ ಪಡಿಸಿದ್ದೇವೆ. ಅವರು ಗೊಬ್ಬರ ಪೂರೈಕೆ ಮಾಡಿದ ಕಂಪೆನಿಗಳಿಗೆ ಏಳು ದಿನಗಳ ಒಳಗಾಗಿ ಉತ್ತರ ನೀಡುವಂತೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಕೂಡಲೇ ಕಂಪೆನಿಯವರು ಪೂರೈಕೆಯಾಗಿರುವ ಗೊಬ್ಬರವನ್ನು ವಾಪಸ್ ಪಡೆದು ಬೇರೆ ಗೊಬ್ಬರ ಪೂರೈಸುವುದಾಗಿ ಹೇಳಿದ್ದಾರೆ.

ಸರಿಯಾದ ಶಿಕ್ಷೆಯಾಗಬೇಕು

ಆದರೆ ಈಗಾಗಲೇ ಜಿಲ್ಲೆಯಲ್ಲಿ 51 ಟನ್ ಗೊಬ್ಬರ ಪೂರೈಕೆಯಾಗಿದ್ದು, ಸಾಕಷ್ಟು ರೈತರು ಬಳಕೆಯನ್ನು ಮಾಡಿದ್ದಾರೆ. ಜಿಲ್ಲೆಯ ಸಾವಿರಾರು ರೈತರಿಗೆ ಮೋಸವಾಗಿದೆ. ಪ್ರತೀ ಚೀಲದಲ್ಲಿ ನೂರು ಅಥವಾ ಇನ್ನೂರು ಗ್ರಾಂ ಗೊಬ್ಬರ ಕಡಿಮೆ ಬಂದಿದ್ದರೆ ಅದು ಸಾಗಾಟದ ಸಂದರ್ಭ ಆಗಿರುವ ಸಮಸ್ಯೆ ಎಂದುಕೊಳ್ಳಬಹುದಿತ್ತು. ಆದರೆ ಇದು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಲಾಗಿದೆ ಎನ್ನುವುದು ಗೊತ್ತಾಗುತ್ತಿದೆ. ಇದಕ್ಕೆ ಕಾನೂನಾತ್ಮಕ ಸರಿಯಾದ ಶಿಕ್ಷೆಯಾಗಬೇಕು. ಇದಕ್ಕಾಗಿ ಪ್ರಧಾನಿ, ಕೇಂದ್ರ ಮತ್ತು ರಾಜ್ಯ ಕೃಷಿ ಸಚಿವರಿಗೆ ದೂರು ನೀಡಿದ್ದೇವೆ ಎಂದಿದ್ದಾರೆ.

ಈ ಕುರಿತು ಮಾತನಾಡಿರುವ ರೈತ ಮುಖಂಡ ಕಿಲನ್ ಗಣಪತಿ ಅವರು ಸಹಕಾರ ಸಂಘಗಳಿಂದ ಮೋಸವಾದರೆ ಕೃಷಿ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮಕ್ಕೆ ಮುಂದಾಗುತ್ತಾರೆ. ಆದರೆ ಕಂಪೆನಿಗಳಿಂದ ಆಗಿರುವ ಮೋಸಕ್ಕೆ ಅಧಿಕಾರಿಗಳು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಇಂದು ಸಾವಿರಾರು ರೂಪಾಯಿ ಒಂದು ಚೀಲ ಗೊಬ್ಬರಕ್ಕೆ ಇದೆ. ಹೀಗಿರುವಾಗ ನಾಲ್ಕೈದು ಕೆ.ಜಿ. ಗೊಬ್ಬರ ಕಡಿಮೆ ಆದರೆ ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.