ಹೊನ್ನಾವರ(ಏ.20): ಹಲವಾರು ಹೃದಯ ರೋಗಿಗಳು ಕೋವಿಡ್‌ಗೆ ಮತ್ತು ಹೃದಯ ರೋಗಕ್ಕೆ ಸಂಬಂಧವಿದೆಯೇ ಎಂದು ದೂರವಾಣಿಯಲ್ಲಿ ಪ್ರಶ್ನಿಸುತ್ತಿದ್ದಾರೆ. ಈ ಎರಡೂ ರೋಗಗಳಿಗೆ ನೇರ ಸಂಬಂಧವಿಲ್ಲ. ಭಯ ಬೇಡ ಎಂದು ಮಂಗಳೂರು ಕೆಎಂಸಿಯ ಹೃದಯ ವಿಭಾಗದ ಮುಖ್ಯಸ್ಥ ಡಾ. ಪದ್ಮನಾಭ ಕಾಮತ್‌ ಹೇಳಿದ್ದಾರೆ.

ಅವರು ದೂರವಾಣಿಯಲ್ಲಿ ಸಂದರ್ಶನ ನೀಡಿದ್ದು, ವಯಸ್ಸು 70 ದಾಟಿದವರಿಗೆ, ಸಾಧಾರಣವಾಗಿ ಹೃದಯ ಸಮಸ್ಯೆ ಇರುತ್ತದೆ. ಇನ್ನೂ ಕೆಲವರಿಗೆ ಅನಿಯಂತ್ರಿತ ಮಧುಮೇಹ ಇರುತ್ತದೆ. ಕೆಲವರಿಗೆ ಅದಾಗಲೇ ಹೃದಯಾಘಾತ ಆಗಿರುತ್ತದೆ. ಇಂತಹವರಲ್ಲಿ ವಯಸ್ಸಿಗೆ ಮತ್ತು ಕಾಯಿಲೆಗೆ ಅನುಗುಣವಾಗಿ ರೋಗನಿರೋಧಕ ಶಕ್ತಿ ಕಡಿಮೆಯಿರುವುದರಿಂದ ಕೋವಿಡ್‌ ಸೋಂಕು ಬೇಗ ತಗುಲುವ ಸಾಧ್ಯತೆ ಇರುತ್ತದೆಯೇ ವಿನಃ ನೇರ ಸಂಬಂಧ ಇರುವುದಿಲ್ಲ. ಆದ್ದರಿಂದ ಈ ದೇಶದ ಪ್ರಧಾನಿಗಳೂ, ಎಲ್ಲ ವೈದ್ಯರೂ ಹೇಳುವುದು ಇಂತಹ ಸಮಸ್ಯೆಯುಳ್ಳವರು ಮನೆಯಲ್ಲಿಯೇ ಇರಿ ಎಂಬುದಾಗಿದೆ.

ಕೊರೋನಾ ಮಧ್ಯೆ ವಕ್ಕರಿಸಿದ ಮಂಗನ ಕಾಯಿಲೆ: ಆತಂಕದಲ್ಲಿ ಜನತೆ

ಹೃದಯ ಸಮಸ್ಯೆ ಉಂಟಾದರೆ ಎದೆ ನೋವು ಬರುತ್ತದೆ. ಮೊದಲು ಎದೆನೋವು ಎಂದು ಹೇಳುತ್ತ ಬರುತ್ತಿದ್ದವರು ಈಗ ದಮ್ಮು ಬಂದಿದೆ,ಉಸಿರು ಕಟ್ಟುತ್ತದೆ ಎಂದು ಹೇಳುತ್ತ ಬರುತ್ತಿದ್ದಾರೆ.ಇಂತವರನ್ನು ಮೊದಲು ಕೋವಿಡ್‌ ತಂಡ ಪರೀಕ್ಷೆ ಮಾಡುವುದು ಅನಿವಾರ್ಯವಾಗುತ್ತದೆ. ಒಂದು ದಿನದ ನಂತರ ಕೋವಿಡ್‌ ಇಲ್ಲ ಎಂದಾದ ಮೇಲೆ ಹೃದಯ ತಪಾಸಣೆಗೆ ಬರುತ್ತಾರೆ. ಶೇ.10ರಲ್ಲಿ 8ರಷ್ಟು ರೋಗಿಗಳು ದಮ್ಮು ಎಂದು ಹೇಳುತ್ತ ಬರುತ್ತಿರುವುದು ಹೆಚ್ಚಾಗಿದೆ.ಆದ್ದರಿಂದ ಗಾಬರಿಪಡದೆ, ತಮಗೆ ಆಗುವ ತೊಂದರೆಯನ್ನು ಗಮನವಿಟ್ಟು ಸಂಬಂಧಪಟ್ಟವೈದ್ಯರನ್ನು ಕಾಣಬೇಕು. ಹೃದಯ ಸಮಸ್ಯೆ,ಎದೆ ನೋವು ಇದ್ದವರಿಗೆ ನಮ್ಮ ತಂಡ ಎಲ್ಲ ಸಮಯದಲ್ಲಿ ಚಿಕಿತ್ಸೆ ನೀಡಲು ಸಿದ್ಧವಿದೆ, ಗಾಬರಿ ಬೇಡ ಎಂದು ಹೇಳಿದ್ದಾರೆ.