ರಾಮನಗರ (ಮಾ.15): ವಿದೇಶದಿಂದ ಮರಳಿರುವ ಉದ್ಯೋಗಿಗಳನ್ನು ಕೊರೋನಾ ವೈರಸ್ ಪರೀಕ್ಷೆಗೆ ಒಳಪಡಿಸಿ ಅವರ ಆರೋಗ್ಯದ ಬಗ್ಗೆ ಖಾತ್ರಿ ಪಡಿಸುವವರೆಗೆ ಸಂಸ್ಥೆಯ ಎಲ್ಲಾ ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡುವಂತೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಎಂಪ್ಲಾಯ್ಸ್ ಯೂನಿಯನ್ ಅಧ್ಯಕ್ಷರು ಟಿಕೆಎಂ ಪ್ರೈವೆಟ್ ಲಿಮಿಟೆಡ್ ನ ಮಾನವ ಸಂಪನ್ಮೂಲ ವಿಭಾಗದ ಮಹಾ ಪ್ರಬಂಧಕರಿಗೆ ಪತ್ರ ಬರೆದಿದ್ದಾರೆ.

ರಾಮನಗರ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಉಪನಿರ್ದೇಶಕರಿಗು ಪತ್ರದ ಪ್ರತಿಗಳನ್ನು ಲಗತ್ತಿಸಿರುವ ಯೂನಿಯನ್ ಅಧ್ಯಕ್ಷರು, ವಿದೇಶದಿಂದ ಮರಳಿರುವ ಉದ್ಯೋಗಿಗಳ ವೈದ್ಯಕೀಯ ಪರೀಕ್ಷೆಯ ವರದಿಗಳು ದೃಢಪಡುವವರೆಗೆ ಸಂಸ್ಥೆಯ ಎಲ್ಲಾ ಉದ್ಯೋಗಿಗಳಿಗೆ ವೇತನಸಹಿತ ರಜೆ ನೀಡಬೇಕೆಂದು ಮನವಿ ಮಾಡಿದ್ದಾರೆ. 

ಕಂಪನಿಯ ಪ್ರೊಡೆಕ್ಷನ್ ಪ್ಲಾಂಟ್ 1, ಅಸೆಂಬ್ಲಿ ವಿಭಾಗದ ಒಬ್ಬ ಉದ್ಯೋಗಿಯು ಕಳೆದ ತಿಂಗಳು ಜಪಾನ್‌ನಿಂದ ಮರಳಿದ್ದು, ಎಲ್ಲರ ಜೊತೆ ಕೆಲಸ ಮಾಡಿದ್ದಾರೆ. ಮೊನ್ನೆ ದಿವಸ ಅವರಿಗೆ ಕೊರೋನಾ ವೈರಸ್ ಸೋಂಕಿನ ಲಕ್ಷಣಗಳು ಕಾಣಿಸಿದೆ ಎಂಬ ಮಾಹಿತಿಯಿದೆ. ಅವರಿಗೆ ತಕ್ಷಣ ರಜೆ ಮೇಲೆ ಕಳುಹಿಸಿರುವುದು ಅನುಮಾನಕ್ಕೆ ಎಡೆ ಮಾಡಿದೆ. ಅನುಮಾನಸ್ಪದ ವ್ಯಕ್ತಿಯು ಕಳೆದ ತಿಂಗಳು ಜಪಾನಿನಿಂದ ಹಿಂದಿರುಗಿದ್ದಾರೆ.

ಮೊಟ್ಟೆ, ಮಾಂಸದಿಂದ ಬರುತ್ತಾ ಕೊರೋನಾ ..?...

ಇತ್ತೀಚೆಗೆ ಸಂಸ್ಥೆ ಉದ್ಯೋಗಿಗಳ ಕುಟುಂಬ ಸದಸ್ಯರು ವಿದೇಶದಿಂದ ರಜೆಗೆಂದು ಭಾರತ ದೇಶಕ್ಕೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯಲ್ಲಿ ಇರುವ ಸುಮಾರು 8 ಸಾವಿರ ಜನ ಕೆಲಸಗಾರರ ಬಗ್ಗೆ ತೀವ್ರ ಎಚ್ಚರಿಕೆ ವಹಿಸಬೇಕಾಗಿದೆ. ಆದ್ದರಿಂದ ತಕ್ಷಣ ವಿದೇಶದಿಂದ ಮರಳಿರುವ ಎಲ್ಲಾ ಉದ್ಯೋಗಿಗಳನ್ನು ಕೊರೋನಾ ವೈರಸ್ ಪರೀಕ್ಷೆಗೆ ಒಳಪಡಿಸಿ, ಆರೋಗ್ಯದ ಬಗ್ಗೆ ಖಾತ್ರಿ ಪಡಿಸಬೇಕಾಗಿದೆ. ಈ ಪರೀಕ್ಷೆ ವರದಿ ದೃಢಪಡುವ ವರೆಗೆ ಸಂಸ್ಥೆ ಉದ್ಯೋಗಿಗಳಿಗೆ ತಕ್ಷಣದಿಂದ ವೇತನ ಸಹಿತ ರಜೆ ನೀಡಲುಯೂನಿಯನ್ ಅಧ್ಯಕ್ಷರು ಪತ್ರದಲ್ಲಿ ಮನವಿ ಮಾಡಿದ್ದಾರೆ.