ಮಲ್ಲಿಕಾರ್ಜುನ ಹೊಸಮನಿ

ಬಾಗಲಕೋಟೆ(ಜೂ.14): ಅವರೆಲ್ಲಾ ಮಾಜಿ ದೇವದಾಸಿಯರ ಮಕ್ಕಳು, ಇವರನ್ನು  ಸಮಾಜದಲ್ಲಿ ಜನ ನೋಡುವ ನೋಡುವ ದೃಷ್ಟಿಯೇ ಬೇರೆಯಾಗಿತ್ತು. ಆದರೆ ಇಂತಹ ಮಾಜಿ ದೇವದಾಸಿಯರ ಮಕ್ಕಳಿಗಾಗಿ ಸಂಸ್ಥೆಯೊಂದು ಸಾಮೂಹಿಕ ವಿವಾಹ ಏರ್ಪಡಿಸಿ ಗಮನ ಸೆಳೆದಿದೆ.

ಬಾಗಲಕೋಟೆಯಲ್ಲಿ ಬರೋಬ್ಬರಿ 18 ಜೋಡಿ ಮಾಜಿ ದೇವದಾಸಿಯರ  ಮಕ್ಕಳಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ನಗರದ ಹೊರವಲಯದಲ್ಲಿರುವ ಗದ್ದನಕೇರಿ ಲಡ್ಡು ಮುತ್ಯಾ ಅಜ್ಜನ ಮಠದ ಸಭಾಭವನ ವಿಶಿಷ್ಟ ವಿವಾಹಕ್ಕೆ ಸಾಕ್ಷಿಯಾಗಿತ್ತು.

"

ಹಸೆಮಣೆ ಏರಿದ ನವಜೋಡಿಗಳಲ್ಲಿ ಇನ್ನಿಲ್ಲದ ಖುಷಿಯೋ ಖುಷಿ. ತಾಯಂದಿಯರು ದೇವದಾಸಿ ಅನ್ನೋ ಅನಿಷ್ಟ ಪದ್ಧತಿ ಬಿಟ್ಟಿದ್ರೂ ಸಹ  ತಮ್ಮ ಮಕ್ಕಳಿಗೆ ಮದುವೆ ಯಾರು ಮಾಡಿಕೊಳ್ತಾರೆ ಅನ್ನೋ ಚಿಂತೆ ಕಾಡುತ್ತಿತ್ತು.

ಹೀಗಾಗಿ ಸಮಾಜದಲ್ಲಿ ಹೊಸ ಭಾಷ್ಯ ಬರೆಯಲೆಂದೇ ಇಂದು  ಬಾಗಲಕೋಟೆಯ ಜ್ಯೋತಿ ಜಿಲ್ಲಾ ಮಟ್ಟದ ಮಹಿಳಾ ಅಭಿವೃದ್ಧಿ ಸಂಸ್ಥೆ 18 ಜೋಡಿಗಳಿಗೆ ಸಾಮೂಹಿಕ ವಿವಾಹ ಆಯೋಜಿಸಿತ್ತು.

"

ಇನ್ನು ಒಂದೇ ವೇದಿಕೆಯಲ್ಲಿ ಮಾಜಿ ದೇವದಾಸಿಯರ ಮಕ್ಕಳ 18 ಜೋಡಿಗಳು ಎಲ್ಲರಂತೆ  ಹಸೆಮಣೆ ಏರಿ ಸಂಭ್ರಮಿಸಿದ್ರು. ಇದನ್ನು ನೋಡ್ತಿದ್ದರೆ ಸಮಾಜ ಸುಧಾರಕರಿಗೆ ಮನದಲ್ಲಿ ಇನ್ನಿಲ್ಲದ ಸಂತಸ ಮನೆ ಮಾಡಿತ್ತು. ಇನ್ನು  ನವಜೋಡಿಗಳಿಗೆ ಸ್ವಾಮೀಜಿಗಳು, ಜನಪ್ರತಿನಿಧಿಗಳು,ಮಾಜಿ ದೇವದಾಸಿಯರು ಅಕ್ಷತೆ ಹಾಕುವ ಮೂಲಕ ಶುಭ ಹಾರೈಸಿದರು.

"

ಈ ಮಧ್ಯೆ ಹಿಂದೂ ಸಂಪ್ರದಾಯದಂತೆ ವಧುವರರಿಗೆ ಅರಿಷಿಣ ಶಾಸ್ತ್ರ, ಕಂಕಣ ಕಟ್ಟುವಿಕೆ, ಮದುವೆ ಮಂಟಪದಲ್ಲಿ 18ಜೋಡಿಗಳಿಗೆ ಏಕಕಾಲದಲ್ಲಿ ಮಾಂಗಲ್ಯ ಧಾರಣ ಜೊತೆಗೆ ಅಕ್ಷತೆ  ಹಾಕಲಾಯ್ತು. ಈ ವೇಳೆ ಮಾತನಾಡಿದ ನೂತನ ದಂಪತಿಗಳು ಹೊಸ ಬದುಕು ಕಟ್ಟಿಕೊಟ್ಟ ಜ್ಯೋತಿ ಸಂಸ್ಥೆಗೆ ಧನ್ಯವಾದ ಹೇಳಿದರು.

ಒಟ್ಟಿನಲ್ಲಿ ಸಮಾಜದಲ್ಲಿನ ವಕ್ರದೃಷ್ಠಿಗೆ ಒಳಗಾಗಿ ತಮ್ಮ ಬದುಕಿನ ಬಗ್ಗೆ ಚಿಂತೆಗೀಡಾಗಿದ್ದ ಮಾಜಿ ದೇವದಾಸಿಯರ ‌ಮಕ್ಕಳು ಇಂದು ತಮ್ಮ ಸಂಗಾತಿಗಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು ಮಾತ್ರ ಹೆಮ್ಮೆಯ ಸಂಗತಿ.