ವಿಜಯಪುರದಲ್ಲಿ ಮಾರಾಟವಾದ ಮಗು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಪತ್ತೆ
* ಮಗು ಖರೀದಿ ಮಾಡಿದ್ದ ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲು
* ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲೇ ಮಗು ಮಾರಾಟ
* ಮಗು ಮಾರಾಟ ಪ್ರಕರಣ ಸುಖಾಂತ್ಯ
ವಿಜಯಪುರ/ಹುಬ್ಬಳ್ಳಿ(ಸೆ.23): ವಿಜಯಪುರ ಜಿಲ್ಲಾಸ್ಪತ್ರೆ ಆವರಣದಲ್ಲಿ ಮಾರಾಟವಾದ ಮಗು ಇದೀಗ ಹುಬ್ಬಳ್ಳಿ ಕಿಮ್ಸ್‌ನಲ್ಲಿ(KIMS) ಪತ್ತೆಯಾಗಿದ್ದು, ಈ ಮೂಲಕ ಮಗು ಮಾರಾಟ ಪ್ರಕರಣ ಸುಖಾಂತ್ಯ ಕಂಡಿದೆ. ಈ ಸಂಬಂಧ ಮಗು ಖರೀದಿ ಮಾಡಿದ ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಮಗು ಜೋಪಾನ ಮಾಡಲು ಆಗದೇ ತನ್ನ ಎಂಟು ದಿನದ ಗಂಡು ಮಗುವನ್ನು ಹೆತ್ತ ತಾಯಿಯೇ ಆರು ಸಾವಿರ ರುಪಾಯಿಗೆ ಮಾರಾಟ ಮಾಡಿದ್ದಳು. ಈ ವಿಷಯ ಮಕ್ಕಳ ಸಹಾಯವಾಣಿ ಅವರಿಗೆ ತಿಳಿದು, ಅವರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ಪ್ರಕರಣ ಸಂಬಂಧಿಸಿದಂತೆ ತಾಯಿ ಹಾಗೂ ಇತರರ ವಿಚಾರಣೆ ಕೂಡಾ ಮಾಡಲಾಗಿತ್ತು. ಆದರೆ, ಪೊಲೀಸರು ಮಾತ್ರ ನಿರಂತರ ಕಾರ್ಯಾಚರಣೆ ಮೂಲಕ ಮಗು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯಪುರದಲ್ಲಿ ಮಕ್ಕಳ ಮಾರಾಟ ಜಾಲ ಸಕ್ರಿಯ..?
ಕಳೆದ ಆ. 26 ರಂದು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮಗುವನ್ನು ತಾಯಿ ಮಗು ಮಾರಾಟ ಮಾಡಿದ್ದಳು. ಈ ಪ್ರಕರಣ ಕುರಿತು ಸೆಪ್ಟೆಂಬರ್ 12 ರಂದು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಕ್ಕಳಿಲ್ಲದ ಕಾರಣ ಗಂಡು ಮಗುವನ್ನು ಸಿಂದಗಿ ಮೂಲದ ವ್ಯಕ್ತಿ ಖರೀದಿ ಮಾಡಿದ್ದರು. ಮಗು ಖರೀದಿಸಿದ್ದ ಆಟೋ ಡ್ರೈವರ್ ಮೇಲೂ ಪ್ರಕರಣ ದಾಖಲಿಸಲಾಗಿದೆ.
ಮಗು ಮಾರಾಟದಲ್ಲಿ ಜಿಲ್ಲಾ ಆಸ್ಪತ್ರೆ ಸ್ಟಾಫ್ ನರ್ಸ್ ಕಸ್ತೂರಿ ಕೈವಾಡದ ಹಿನ್ನೆಲೆ, ಸ್ಟಾಫ್ ನರ್ಸ್ ಅನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ನಗರದಲ್ಲಿ ಮಗು ಮಾರಾಟ ಪ್ರಕರಣವನ್ನು ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡು ಮಗು ಪತ್ತೆ ಹಚ್ಚಲಾಗಿದೆ. ಆದರೆ ಪ್ರಕರಣ ತನಿಖೆ ಹಂತದಲ್ಲಿರುವ ಕಾರಣಕ್ಕೆ ಯಾವುದೇ ಮಾಹಿತಿ ನೀಡಲು ಆಗುವುದಿಲ್ಲ. ನಂತರ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂದು ಮಾಹಿತಿ ನೀಡಲಾಗುವುದು ಎಂದು ಎಸ್ಪಿ ಎಚ್.ಡಿ. ಆನಂದಕುಮಾರ ಪ್ರತಿಕ್ರಿಯೆ ನೀಡಿದರು.
ಪ್ರಕರಣದ ಹಿನ್ನೆಲೆ:
ವಿಜಯಪುರ(Vijayapura) ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದ ಎಂಟು ದಿನದ ಗಂಡು ಮಗುವನ್ನು ಸಾಕಲಾಗದಂತಹ ಸ್ಥಿತಿಯಲ್ಲಿನ ತಾಯಿಯೇ ತನ್ನ ಕರುಳ ಕುಡಿಯನ್ನು ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಆಗಸ್ಟ್ 19ಕ್ಕೆ ಹೆರಿಗೆಯಾಗಿದ್ದ ಮಗುವನ್ನು 26ಕ್ಕೆ ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲೇ ಮಾರಾಟ ಮಾಡಲಾಗಿತ್ತು. ತಿಕೋಟಾ ತಾಲೂಕಿನ ಮಹಿಳೆ ತನ್ನ ಎಂಟು ದಿನದ ಗಂಡು ಮಗುವನ್ನು 6 ಸಾವಿರ ರು.ಗೆ ಮಾರಾಟ ಮಾಡಿದ್ದಳು. ಬಡತನದಲ್ಲಿದ್ದಾಳೆ. ಈಗಾಗಲೇ ಒಂದು ಹೆಣ್ಣು ಮಗು ಇರುವುದರಿಂದ ಎರಡನೇ ಮಗು ಸಾಕುವುದು ಕಷ್ಟ ಎಂಬ ಕಾರಣಕ್ಕೆ ಮಗುವನ್ನೇ ತಾಯಿ ಮಾರಾಟ ಮಾಡಿದ್ದಳಂತೆ.
ಎರಡು ದಿನದ ಬಳಿಕ ಮತ್ತೆ ಆಸ್ಪತ್ರೆಗೆ ಆಗಮಿಸಿದ ಬಿಜ್ಜರಗಿ ಮಹಿಳೆ ತನಗೆ ತನ್ನ ಮಗು ಮರಳಿಸಬೇಕೆಂದು ಪಟ್ಟು ಹಿಡಿದಿದ್ದಳು. ಆಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ವಿಷಯ ತಿಳಿದ ಮಕ್ಕಳ ಸಹಾಯವಾಣಿ ಕಾರ್ಯಕರ್ತರು ಸೆ.12 ರಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.