ಶುರುವಾಯ್ತು ಕೆಎಫ್‌ಡಿ ಅಬ್ಬರ, ಇರಲಿ ಎಚ್ಚರ..!
ಕಳೆದ 15 ವರ್ಷಗಳ ಅಂಕಿ ಅಂಶಗಳ ಪ್ರಕಾರ ಮಳೆ ಕಡಿಮೆ ಇರುವ ವರ್ಷಗಳಲ್ಲೇ ಕೆಎಫ್‌ಡಿ ಅಬ್ಬರ ಹೆಚ್ಚಿದೆ. 2019ರಲ್ಲಿ ಸಾಗರದಲ್ಲಿ ತಾಲೂಕಿನ ಅರಳಗೋಡುನಲ್ಲಿ ಕೆಎಫ್‌ಡಿ ಸ್ಫೋಟಗೊಂಡಿತ್ತು. 2018ರ ನವೆಂಬರ್‌ನುಂದ 2019ರ ಜೂನ್‌ವರೆಗೆ ಅರಳಗೋಡಿನಲ್ಲಿ ಭಾರೀ ಪ್ರಕರಣದ ಪ್ರಕರಣಗಳು ಕಂಡಿಬಂದಿದ್ದವು. ಅದೇ ವರ್ಷ ಬರೊಬ್ಬರಿ 15 ಮಂದಿ ಈ ಕಾಯಿಲೆಗೆ ಬಲಿಯಾಗಿದ್ದರು.
ಶಿವಮೊಗ್ಗ(ಫೆ.07): ಕೊರೋನಾ ಕಾಲದಲ್ಲಿ ತಣ್ಣಗಾಗಿದ್ದ ಕೆಎಫ್‌ಡಿ ಕಾಯಿಲೆ ಈ ವರ್ಷ ಆರಂಭದಲ್ಲೇ ಕಾಡಲಾರಂಭಿಸಿದೆ. ಅದರಲ್ಲೂ ಭಾನುವಾರ (ಫೆ.4) ಒಂದೇ ದಿನ 11 ಮಂದಿಯಲ್ಲಿ ಕೆಎಫ್‌ಡಿ ಸೋಂಕು ಕಾಣಿಸಿದ್ದು, 2019ರಲ್ಲಿ ಅರಳಗೋಡಿನಲ್ಲಿ ಮರಣ ಮೃದಂಗ ಬಾರಿಸಿದ್ದ ಕೆಎಫ್‌ಡಿ ಮತ್ತೆ ಜಿಲ್ಲೆಯಲ್ಲಿ ಮರುಕಳಿಸಲಿದೆಯೇ ಎಂಬ ಆತಂಕವನ್ನು ಹೆಚ್ಚಿಸಿದೆ.
ಕಳೆದ 15 ವರ್ಷಗಳ ಅಂಕಿ ಅಂಶಗಳ ಪ್ರಕಾರ ಮಳೆ ಕಡಿಮೆ ಇರುವ ವರ್ಷಗಳಲ್ಲೇ ಕೆಎಫ್‌ಡಿ ಅಬ್ಬರ ಹೆಚ್ಚಿದೆ. 2019ರಲ್ಲಿ ಸಾಗರದಲ್ಲಿ ತಾಲೂಕಿನ ಅರಳಗೋಡುನಲ್ಲಿ ಕೆಎಫ್‌ಡಿ ಸ್ಫೋಟಗೊಂಡಿತ್ತು. 2018ರ ನವೆಂಬರ್‌ನುಂದ 2019ರ ಜೂನ್‌ವರೆಗೆ ಅರಳಗೋಡಿನಲ್ಲಿ ಭಾರೀ ಪ್ರಕರಣದ ಪ್ರಕರಣಗಳು ಕಂಡಿಬಂದಿದ್ದವು. ಅದೇ ವರ್ಷ ಬರೊಬ್ಬರಿ 15 ಮಂದಿ ಈ ಕಾಯಿಲೆಗೆ ಬಲಿಯಾಗಿದ್ದರು.
ಸಂಸದ ಡಿ.ಕೆ.ಸುರೇಶ್ ಹೇಳಿಕೆಯಲ್ಲಿ ರಾಜಕೀಯ ಮಾಡಲ್ಲ: ಕೆ.ಎಸ್.ಈಶ್ವರಪ್ಪ
ಈ ವರ್ಷ 24 ಪ್ರಕರಣ ಪತ್ತೆ:
ಜಿಲ್ಲೆಯಲ್ಲಿ ಕಳೆದ ವರ್ಷ 17 ಕೆಎಫ್‌ಡಿ ಪ್ರಕರಣಗಳು ದಾಖಲಾಗಿದ್ದರೆ, ಈ ವರ್ಷ ಜನವರಿಯಿಂದ ಫೆ.4ರವರೆಗೆ 24 ಪ್ರಕರಣಗಳು ವರದಿಯಾಗಿವೆ. ಒಂದು ತಿಂಗಳ ಅವಧಿಯಲ್ಲೇ ಇಷ್ಟೊಂದು ಪ್ರಕರಣಗಳು ಕಾಣಿಸಿಕೊಂಡಿರುವುದು ಕಾಡಂಚಿನ ಗ್ರಾಮದ ಜನರಲ್ಲಿ ಕೆಎಫ್‌ಡಿ ಆತಂಕ ಮನೆ ಮಾಡಿದೆ.
24 ಪ್ರಕರಣಗಳ ಪೈಕಿ ತೀರ್ಥಹಳ್ಳಿಯಲ್ಲಿ 9, ಹೊಸನಗರದಲ್ಲಿ 13 ಹಾಗೂ ಸಾಗರದಲ್ಲಿ 2 ಪ್ರಕರಣಗಳು ದಾಖಲಾಗಿವೆ. ಭಾನುವಾರ ಒಂದೇ ದಿನ ಪತ್ತೆಯಾದ 11 ಪ್ರಕರಣದಲ್ಲಿ ತೀರ್ಥಹಳ್ಳಿಯಲ್ಲಿ 3, ಹೊಸನಗರದಲ್ಲಿ 8 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಅಂದು ಜ್ವರದಿಂದ ಬಳಲುತ್ತಿದ್ದ ಒಟ್ಟು18 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಹೊಸನಗರದ ಮಾರುತಿಪುರ- ಸಂತೇಕಟ್ಟೆ, ತೀರ್ಥಹಳ್ಳಿಯ ಕನ್ನಂಗಿ, ಗುಡ್ಡೇಕೊಪ್ಪ, ಮಾಳೂರು ಗ್ರಾಮಗಳಲ್ಲಿ ಕೆಎಫ್‌ಡಿ ಕಾಣಿಸಿಕೊಂಡಿದೆ. ಕೆಎಫ್‌ಡಿ ಸೋಂಕಿತ 24 ಜನ ಪೈಕಿ 11 ಮಂದಿ ಗುಣಮುಖರಾಗಿದ್ದು, 12 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವ್ಯಾಕ್ಸಿನ್ ಪೂರೈಕೆ ಆಗಿಲ್ಲ:
ಕಳೆದ ಎರಡು ವರ್ಷಗಳಿಂದ ಮಂಗನ ಕಾಯಿಲೆ ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ಕಾಡಂಚಿನ ಜನರಿಗೆ ನೀಡಬೇಕಾದ ವ್ಯಾಕ್ಸಿನ್‌ಗೆ ಆರೋಗ್ಯ ಇಲಾಖೆ ವಿರಾಮ ನೀಡಿರುವುದು ಇದೀಗ ತೀವ್ರ ಚರ್ಚೆಗೆ ಒಳಗಾಗಿದೆ. ಎರಡು ವರ್ಷಗಳಿಂದ ಸರ್ಕಾರ ಸಮರ್ಪಕವಾಗಿ ವ್ಯಾಕ್ಸಿನ್ ಪೂರೈಸದೆ ಇರುವುದೇ ಇಲಾಖೆ ವ್ಯಾಕ್ಸಿನ್ ನೀಡದಿರಲು ಕಾರಣ ಎಂಬುದು ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದಕ್ಕೆ ಇಲಾಖೆ ನೀಡುತ್ತಿರುವ ಸಮಜಾಯಿಷಿ ಎಂದರೆ, ಕಳೆದ ಎರಡು ವರ್ಷಗಳಿಂದ ಈ ಭಾಗದಲ್ಲಿ ಮಂಗನ ಕಾಯಿಲೆ ಪ್ರಕರಣ ಕಡಿಮೆಯಾಗಿದೆ ಎಂಬುದು ಇನ್ನೂ ಸೋಜಿಗ ವಿಚಾರ!
ಜಿಲ್ಲೆಯಲ್ಲಿ ಸಾಮಾನ್ಯವಾಗಿ ನವೆಂಬರ್‌ನಿಂದ ಮಳೆಗಾಲ ಆರಂಭ ಆಗುವವರೆಗೂ ಮಂಗನ ಕಾಯಿಲೆ ಪ್ರಕರಣ ಕಾಣಿಸಿಕೊಳ್ಳುತ್ತದೆ. ಬೇಸಿಗೆಯಲ್ಲಿ ಇದರ ಆರ್ಭಟ ಹೆಚ್ಚು. ಆದರೆ, ಕಳೆದೆರಡು ವರ್ಷದಿಂದ ಜನವರಿಯಲ್ಲಿ ಪ್ರಕರಣ ಕಾಣಿಸಿಕೊಳ್ಳುತ್ತಿದೆ. ಇದರ ನಡುವೆ ನವಂಬರ್ ಕೊನೆ ವಾರ ಅಥವಾ ಡಿಸೆಂಬರ್ ಮೊದಲಾರಂಭದಲ್ಲಿಯೇ ನೆರೆ ಜಿಲ್ಲೆ ಚಿಕ್ಕಮಗಳೂರಿನಲ್ಲಿ ವ್ಯಕ್ತಿಗೆ ಕೆಎಫ್‌ಡಿ ಪತ್ತೆಯಾಗಿತ್ತು.
ಕೆಎಫ್‌ಡಿಗೆ ಕಂಡುಹಿಡಿದಿಲ್ಲ ಮದ್ದು:
ಹಲವು ದಶಕದಿಂದ ಈ ಕಾಯಿಲೆ ಭಾದಿಸುತ್ತಿದ್ದರೂ ಈವರೆಗೆ ಕಾಯಿಲೆಗೆ ಮದ್ದು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಹೀಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಕಾಡಂಚಿನ ಜನರಿಗೆ ಕೆಎಫ್ ಡಿ ವ್ಯಾಕ್ಸಿನೇಶನ್ ಹಾಕಲಾಗುತ್ತದೆ. ಜೊತೆಗೆ ಮೈಗೆ ಹಚ್ಚಿಕೊಳ್ಳಲು ಡಿಎಂಪಿ ಆಯಿಲ್ ಅನ್ನು ನೀಡಲಾಗುತ್ತದೆ. ಈ ವ್ಯಾಕ್ಸಿನ್ ಪಡೆಯುವುದರಿಂದ ಈ ಕಾಯಿಲೆಯಿಂದ ಸ್ವಲ್ಪಮಟ್ಟಿನ ರಕ್ಷಣೆ ಸಿಗುತ್ತದೆ. ಹೀಗಾಗಿ, ಆರೋಗ್ಯ ಇಲಾಖೆ ನವಂಬರ್ ನಿಂದಲೇ ಕಾಡಂಚಿನ ಜನರಿಗೆ ಈ ವ್ಯಾಕ್ಸಿನ್ ನೀಡುತ್ತದೆ. ಕೆಲವು ವರ್ಷಗಳ ಕಾಲ ಬೂಸ್ಟರ್ ಡೋಸ್ ಕೂಡ ನೀಡಲಾಗುತ್ತದೆ. ಈಗ ವ್ಯಾಕ್ಸಿನ್ ನೀಡದಿರುವುದರಿಂದ 2019ರ ನೆನಪು ಮತ್ತೆ ಮರಕಳಿಸುವ ಆತಂಕ ಜನರಲ್ಲಿದೆ.
1957ರಲ್ಲಿ ಗುರುತಿಸಲಾದ ವೈರಾಣು:
ಕಾಡಿನಲ್ಲಿ ಇರುವ ಉಣುಗು ಈ ರೋಗ ಹರಡಲು ಕಾರಣ. ಇದು ಮಂಗಗಳ ಮೂಲಕ ಜನರಿಗೆ ಹರಡುತ್ತದೆ. ಕಾಡಿಗೆ ಜನರು ಮತ್ತು ಜಾನುವಾರುಗಳು ತೆರಳಿದ ವೇಳೆ ಉಣುಗಿನ ಮೂಲಕ ದೇಹ ಪ್ರವೇಶಿಸಿ, ಮಾರಣಾಂತಿಕ ರೋಗ ಉಂಟು ಮಾಡುತ್ತದೆ. 1957ರಲ್ಲಿ ಮೊದಲ ಬಾರಿಗೆ ಸೊರಬ ತಾಲೂಕಿನ ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ ಮೃತ ಮಂಗವೊಂದರ ಶರೀರದಲ್ಲಿ ಈ ವೈರಾಣು ಗುರುತಿಸಲಾಯಿತು. ಹೀಗಾಗಿ, ಕ್ಯಾಸನೂರು ಫಾರೆಸ್ಟ್ ಡಿಸೀಸ್ ಎಂದು ಕರೆಯಲಾಗುತ್ತಿದೆ.
ಕೆಎಫ್‌ಡಿ ಬಗ್ಗೆ ಇಲಾಖೆ ಈಗ ಗಂಭೀರ
ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆಎಫ್‌ಡಿ) ಅಥವಾ ಮಂಗನ ಕಾಯಿಲೆ ಬಗ್ಗೆ ತಡವಾಗಿಯಾದರೂ ಆರೋಗ್ಯ ಇಲಾಖೆ ಗಂಭೀರವಾಗಿ ಗಮನಿಸುತ್ತಿದೆ. ಇತ್ತೀಚೆಗೆ ಯುವತಿಯೊಬ್ಬಳು ಮಂಗನ ಕಾಯಿಲೆಯಿಂದ ಸಾವನ್ನಪ್ಪಿದ್ದರು. ಆನಂತರ ಶಿವಮೊಗ್ಗ ಜಿಲ್ಲಾ ಆರೋಗ್ಯ ಇಲಾಖೆ ಮಂಗನ ಕಾಯಿಲೆ ವಿಚಾರದಲ್ಲಿ ಸೀರಿಯಸ್ ಆಗಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು.
ಅಷ್ಟೇ ಅಲ್ಲದೇ, ಈ ಸಂಬಂಧ ಪ್ರತಿಭಟನೆಗಳು ಸಹ ನಡೆದಿದ್ದವು. ವಕೀಲ ಕೆ.ಪಿ.ಶ್ರೀಪಾಲ್ ಹಾಗೂ ಹಲವು ಮುಖಂಡರನ್ನ ಒಳಗೊಂಡ ಕೆಎಫ್‌ಡಿ ಜನಜಾಗೃತಿ ಒಕ್ಕೂಟ ಯುವತಿಯ ಸಾವು ಅಮಾನುಷ ಎಂದು ಗಂಭೀರವಾಗಿ ಆರೋಪಿಸಿತ್ತು. ಅಲ್ಲದೇ, ರಿಪೋರ್ಟ್ಗಳನ್ನು ಮುಚ್ಚುಮರೆ ಮಾಡಿ ತಿದ್ದಲಾಗುತ್ತಿದೆ ಎಂಬ ಆರೋಪ ಮಾಡಿದ್ದ ಸಂಘಟನೆ ಈ ಸಂಬಂಧ ಆರೋಗ್ಯ ಇಲಾಖೆ ಆಯುಕ್ತ ಡಿ.ರಣದೀಪ್ ಅವರಿಗೆ ಮನವಿಯನ್ನೂ ನೀಡಿತ್ತು.
2019-2023ರವರೆಗಿನ ಪ್ರಕರಣಗಳು
2019 ರಲ್ಲಿ ಜಿಲ್ಲೆಯಲ್ಲಿ 341 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 15 ಮಂದಿ ಕೆಎಫ್‌ಡಿಯಿಂದ ಸಾವನ್ನಪ್ಪಿದ್ದು ದೃಢಪಟ್ಟಿತ್ತು. 2020 ರಲ್ಲಿ 184 ಪ್ರಕರಣಗಳು ದಾಖಲಾಗಿದ್ದು, 4 ಮಂದಿ ಸಾವನ್ನಪ್ಪಿದ್ದರು. 2021ರಲ್ಲಿ 13 ಪ್ರಕರಣಗಳು ದಾಖಲಾಗಿದ್ದು, ಒಬ್ಬರು ಕೆಎಫ್‌ಡಿಗೆ ಬಲಿಯಾಗಿದ್ದರು. 2022ರಲ್ಲಿ 12 ಪ್ರಕರಣಗಳು ದಾಖಲಾಗಿದ್ದು, 2023ರಲ್ಲಿ 14 ಪ್ರಕರಣ ದಾಖಲಾಗಿದ್ದವು.
ಶಿವಮೊಗ್ಗ: ಖಬರ್‌ಸ್ಥಾನದಲ್ಲಿ ಮರ ಕಡಿದ ವಿಚಾರಕ್ಕೆ ಎರಡು ಕೋಮುಗಳ ನಡುವೆ ಭುಗಿಲೆದ್ದ ಸಂಘರ್ಷ!
ಹೊಸನಗರ ಸಂಪೆಕಟ್ಟೆ ಜನ ಹೇಳೋದೇನು?
ಆರೋಗ್ಯ ಇಲಾಖೆಯವರು ಬಂದು ಮಂಗನ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಎಲ್ಲೂ ಹೊರಗೆ ಹೋಗಬೇಡಿ ಎಂದು ಹೇಳುತ್ತಿದ್ದಾರೆ. ಆದರೆ ನಮ್ಮ ಜೀವನ ನಡೆಯಬೇಕು ಎಂದರೆ ದನ-ಕರು, ತೋಟ ನೋಡಿಕೊಂಡಿರಬೇಕು. ದನ- ಕರುಗಳಿಗೆ ಮೇವು ತರಲು ಹೋಗಲೇಬೇಕು. ಜಿಲ್ಲೆಯಲ್ಲಿ ಮಂಗನ ಕಾಯಿಲೆ ಪ್ರಕರಣಗಳ ಸಂಖ್ಯೆ 20 ದಾಟಿರುವುದು ಆತಂಕ ಮೂಡಿಸಿದೆ. ಲಸಿಕೆ ಕೂಡುವ ಬಗ್ಗೆ ಇನ್ನೂ ಯಾರು ಏನು ಹೇಳಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಹೊಸನಗರದ ಸಂಪೆಕಟ್ಟೆ ನಿವಾಸಿಗಳು ಒತ್ತಾಯಿಸಿದ್ದಾರೆ.
ಕಳೆದ ಎರಡು ವರ್ಷದಿಂದ ಜಿಲ್ಲೆಯಲ್ಲಿ ಕೆಎಫ್‌ಡಿ ಪ್ರಕರಣಗಳು ತಗ್ಗಿವೆ. ಜಿಲ್ಲೆಯಲ್ಲಿ ಜನವರಿಯಿಂದ ಕೆಎಫ್‌ಡಿ ಕಾಣಿಸಿಕೊಳ್ಳುವ ಸಾಧ್ಯತೆ ಇತ್ತು. ಹೀಗಾಗಿ, ಆರೋಗ್ಯ ಇಲಾಖೆಯಿಂದ ಮುನ್ನಚ್ಚರಿಕೆ ಕ್ರಮ ವಹಿಸಲಾಗಿದೆ. ಜ್ವರ ಕಾಣಿಸಿಕೊಂಡ ವ್ಯಕ್ತಿಯ ಮೇಲೆ ನಿಗಾ ಇಟ್ಟು, ಮೂರು ದಿನದ ಬಳಿಕವೂ ಜ್ವರ ಇದ್ದರೆ ಕೂಡಲೇ ಅಂತವರ ರಕ್ತದ ಮಾದರಿ ಪ್ರಯೋಗಾಲಯಕ್ಕೆ ಕಳಿಸಲಾಗುತ್ತಿದೆ. ಆರೋಗ್ಯ ಇಲಾಖೆ, ಜಿಲ್ಲಾಡಳಿತ ಸಹಯೋಗದಲ್ಲಿ ಜಿಲ್ಲೆಯ ಕೆಎಫ್‌ಡಿ ಕಾಯಿಲೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಶಿವಮೊಗ್ಗ ಡಿಎಚ್‌ಒ ಡಾ.ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ.