ದಯಾನಂದ ಸಾಗರ ಕಾಲೇಜಿನಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೇರಳದ ಕಣ್ಣೂರು ಮೂಲದ 19 ವರ್ಷದ ವಿದ್ಯಾರ್ಥಿನಿ ವಸತಿ ನಿಲಯದಲ್ಲಿ ಊಟಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ನೇಹಿತರು ವಿಷಯ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಕಾಲೇಜು ಆಡಳಿತ ಮಂಡಳಿಯ ಕಿರುಕುಳದ ಆರೋಪ ಕೇಳಿಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು (ಫೆ.06): ಪರೀಕ್ಷೆಯಲ್ಲಿ ಕಾಪಿ ಮಾಡಿದ್ದಕ್ಕೆ ಪೋಷಕರನ್ನು ಕರೆಸುವಂತೆ ಕಾಲೇಜಿನ ಆಡಳಿತ ಮಂಡಳಿ ತೀವ್ರ ಕಿರುಕುಳ ನೀಡಿತ್ತು. ಇದರ ಬೆನ್ನಲ್ಲಿಯೇ ಮಾನಸಿಕ ಒತ್ತಡಕ್ಕೆ ಸಿಲುಕಿದ್ದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪಟ್ಟಣದ ದಯಾನಂದ ಸಾಗರ ಕಾಲೇಜಿನಲ್ಲಿ ನಡೆದಿದೆ.
ಅನಾಮಿಕ ವಿನಿತ್ (19) ಮೃತ ದುರ್ದೈವಿ. ಈಕೆ ಕೇರಳದ ಕಣ್ಣೂರು ಗ್ರಾಮದ ನಿವಾಸಿಯಾಗಿದ್ದು, ಹಾರೋಹಳ್ಳಿಯ ದಯಾನಂದ ಸಾಗರ ಕಾಲೇಜಿನಲ್ಲಿ ಬಿ.ಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು. ವಸತಿ ನಿಲಯದಲ್ಲಿದ್ದ ಅನಾಮಿಕ ಊಟಕ್ಕೆ ಬಾರದಿದ್ದನ್ನು ಗಮನಿಸಿದ ಸ್ನೇಹಿತರು ಹಾಸ್ಟೆಲ್ ವಾರ್ಡನ್ ಗೆ ವಿಷಯ ತಿಳಿಸಿದ್ದಾರೆ. ಕೊಠಡಿಯ ಬಳಿ ಬಂದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಶವ ಇರುವುದು ಬೆಳಕಿಗೆ ಬಂದಿದೆ.
ವಿದ್ಯಾರ್ಥಿನಿ ಅನಾಮಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೊ ಇಲ್ಲವೊ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಾಗಿದೆ. ಕಾಲೇಜು ಪ್ರಾಂಶುಪಾಲರು ಅನಾಮಿಕಗೆ ಬ್ಲಾಕ್ ಲಿಸ್ಟ್‌ಗೆ ಹಾಕುವುದಾಗಿ ಹೆದರಿಸಿದ್ದರು. ಅಲ್ಲದೆ, ಆಡಳಿತ ಮಂಡಳಿಯ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂಬ ಆರೋಪವೂ ಕೇಳಿ ಬಂದಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಅನಾಮಿಕ ತಂದೆ ವಿನೀತ್ ಕುಮಾರ್ ಸಾವತ್ ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ವಿರುದ್ಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ರಾಯಚೂರಿನಲ್ಲಿ 2ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ; ಶಾಲೆ ಮ್ಯಾನೇಜರ್ ರಾಜು ತಾಳಿಕೋಟಿ ಅರೆಸ್ಟ್!
ಕಾಪಿ ಮಾಡಿದ್ದಕ್ಕೆ ಪೋಷಕರನ್ನು ಕರೆಸುವಂತೆ ಸೂಚನೆ:
ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನ ಮ್ಯಾನೇಜ್ಮೆಂಟ್ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ. ಹೀಗಾಗಿ, ಮೃತ ವಿದ್ಯಾರ್ಥಿನಿಯ ಸಹಪಾಠಿಗಳು ಕಾಲೇಜು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಈ ಹಿಂದೆ ವಿದ್ಯಾರ್ಥಿನಿ ಪರೀಕ್ಷೆಯೊಂದರಲ್ಲಿ ಕಾಪಿ ಮಾಡಿದ್ದಳು. ಈ ಹಿನ್ನೆಲೆ ಪೋಷಕರನ್ನು ಕರೆಸುವಂತೆ ಆಡಳಿತ ಮಂಡಳಿ ಒತ್ತಡ ಹೇರಿತ್ತು. ಇದರಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಅನಾಮಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಿಡಿಕಾರಿದ ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ. ಇದೀಗ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕ್ರಮವಹಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದಾರೆ.
