ರಾಯಚೂರು ಜಿಲ್ಲೆಯಲ್ಲಿ 2ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು, ಪೋಷಕರು ಶಾಲಾ ಆಡಳಿತ ಮಂಡಳಿ ಮತ್ತು ಆರೋಪಿಯ ವಿರುದ್ಧ ದೂರು ನೀಡಿದ್ದಾರೆ. ಶಾಲೆಯಿಂದ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿ ಮತ್ತು ಶಾಲಾ ವ್ಯವಸ್ಥಾಪಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಯಚೂರು (ಫೆ.06): ಶಾಲೆಗೆ ಹೋದ 2ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು, ಮಗುವಿನ ಪೋಷಕರು ಶಾಲಾ ಆಡಳಿತ ಮಂಡಳಿ ಹಾಗೂ ಅತ್ಯಾಚಾರ ಆರೋಪಿಯ ವಿರುದ್ಧ ಎರಡು ಪ್ರತ್ಯೇಕ ದೂರು ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಹಾಗೂ ಅಪರಾಧ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಅದರಲ್ಲಿಯೂ 2ನೇ ತರಗತಿ ಮಗುವನ್ನು ಶಾಲೆಯಿಂದ ಕರೆದೊಯ್ದು ಅತ್ಯಾಚಾರ ಮಾಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ವರದಿಯಾಗಿದೆ. ಎಂದಿನಂತೆ ಶಾಲೆಗೆ ಹೋದ 2ನೇ ತರಗತಿ ಬಾಲಕಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಶಾಲೆಯಿಂದ ಕರೆದೊಯ್ದು ಅತ್ಯಾಚಾರಗೈದ ಆರೋಪಿ ಶಿವನಗೌಡ ಎ1 ಆರೋಪಿ ಆಗಿದ್ದಾನೆ. ಈತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಖಾಸಗಿ ಶಾಲೆಯ ವ್ಯವಸ್ಥಾಪಕ ರಾಜು ತಾಳಿಕೋಟೆ ಎರಡನೇ ಆರೋಪಿ ಆಗಿದ್ದು ಪೊಲೀಸರು ಕೂಡ ಅವರನ್ನು ವಶಕ್ಕೆ ಪಡೆದು ವಿಚಾರಣೆ ವಿಚಾರಣೆ ಮಾಡುತ್ತಿದ್ದಾರೆ. ಪೋಷಕರ ಅನುಮತಿಯಿಲ್ಲದೆ ಅಪರಿಚಿತರೊಂದಿಗೆ ಮಗುವನ್ನ ಕಳುಹಿಸಿದ ಹಿನ್ನೆಲೆಯಲ್ಲಿ ಶಾಲೆಯ ಆಡಳಿತ ಮಂಡಳಿ ಮ್ಯಾನೇಜರ್ ರಾಜು ತಾಳಿಕೋಟಿ ಅವರನ್ನೂ ಸಹ ವಿಚಾರಣೆಗೆ ಒಳಪಡಿಸಲಾಗಿದೆ.
ಇದನ್ನೂ ಓದಿ: ಹಾಸನ: ಬುದ್ಧಿಮಾಂಧ್ಯೆ ಮೇಲೆ ಎರಡು ಮಕ್ಕಳ ತಂದೆಯಿಂದ ಅತ್ಯಾಚಾರ
ಬಾಲಕಿಯ ಪೋಷಕರು ಶಾಲೆಯವರ ನಿರ್ಲಕ್ಷ್ಯವೇ ನಮ್ಮ ಮಗಳ ಮೇಲೆ ಇಂತಹ ಹೇಯ ಕೃತ್ಯ ನಡೆಯಲು ಕಾರಣವೆಂದು ಶಾಲೆಯ ಮ್ಯಾನೇಜರ್ ರಾಜು ತಾಳಿಕೋಟೆ ವಿರುದ್ದ ದೂರು ದಾಖಲಿಸಿದ್ದಾರೆ. ಕೇವಲ 2ನೇ ತರಗತಿ ಓದುವ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಎ1 ಆರೋಪಿ ಶಿವನಗೌಡಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಬಾಲಕಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಮಗಳಿಗೆ ಆಗಿರುವ ಪರಿಸ್ಥಿತಿ ಬೇರೆ ಯಾವ ಮಕ್ಕಳಿಗೂ ಬರಬಾರದು ಎಂದು ಅಳಲು ತೋಡಿಕೊಂಡಿದ್ದಾರೆ. ಇನ್ನು ರಾಯಚೂರಿನ ಜಿಲ್ಲಾ ಆಸ್ಪತ್ರೆಯಲ್ಲಿ (ರಿಮ್ಸ್) ಸಂತ್ರಸ್ತ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ.
