ಆತ್ಮಭೂಷಣ್‌

ಮಂಗಳೂರು  [ಅ.06]:  ಕಳೆದ ವರ್ಷವಷ್ಟೇ ಗಡಿನಾಡು ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳಿಗೆ ಮಲಯಾಳ ಭಾಷಿಕ ಶಿಕ್ಷಕರನ್ನು ನೇಮಿಸಿ ಭಾರೀ ವಿರೋಧ ಕಟ್ಟಿಕೊಂಡಿದ್ದ ಕೇರಳ ಸರ್ಕಾರ ಇದೀಗ ನೇಮಕವಾದ ಕನ್ನಡ ಗೊತ್ತಿರದ ಮಲಯಾಳಿ ಶಿಕ್ಷಕರಿಗೆ ಕನ್ನಡ ಕಲಿಯಲು ಆದೇಶಿಸಿದೆ. ಈಗಾಗಲೇ ಕನ್ನಡ ಮಾಧ್ಯಮ ಹೈಸ್ಕೂಲ್‌ಗಳಿಗೆ ನೇಮಕಗೊಂಡ ಇಬ್ಬರು ಮಲಯಾಳಂ ಅಧ್ಯಾಪಕರನ್ನು ಕನ್ನಡ ಕಡ್ಡಾಯ ಕಲಿಕೆಗಾಗಿ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಗೆ 1 ವರ್ಷ ವೇತನ ಸಹಿತ ಕಳುಹಿಸಿದೆ.

ಕಳೆದ ವರ್ಷ ಆಗಸ್ಟ್‌ ವೇಳೆಗೆ ಸುಮಾರು 23 ಮಂದಿ ಶಿಕ್ಷಕರ ಪೈಕಿ ನಾಲ್ವರು ಮಲಯಾಳಿ ಶಿಕ್ಷಕರನ್ನು ಕೇರಳ ಲೋಕಸೇವಾ ಆಯೋಗದಿಂದ ಕನ್ನಡ ಮಾಧ್ಯಮ ಹೈಸ್ಕೂಲ್‌ಗಳಿಗೆ ನೇಮಕಗೊಳಿಸಲಾಗಿತ್ತು. ಆರಂಭದಲ್ಲಿ ಕಾಸರಗೋಡು ಮಂಗಲ್ಪಾಡಿ ಸರ್ಕಾರಿ ಪ್ರೌಢಶಾಲೆಗೆ ನೇಮಕಗೊಂಡ ಗಣಿತ ಶಿಕ್ಷಕರು ಕನ್ನಡ ಭಾಷೆ ಗೊತ್ತಿರದೆ ಕನ್ನಡಿಗರ ತೀವ್ರ ಪ್ರತಿಭಟನೆ ಗುರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಶಿಕ್ಷಣ ಇಲಾಖೆ ಸುದೀರ್ಘ ರಜೆ ಮೇಲೆ ಕಳುಹಿಸಿತ್ತು. ಆ ಶಿಕ್ಷಕರು ಈ ವರ್ಷ ಮಲಪ್ಪುರಂನ ಮಲಯಾಳಿ ಶಾಲೆಗೆ ವರ್ಗಾವಣೆ ಮಾಡಿಸಿಕೊಂಡಿದ್ದರು.

ಉಳಿದ ಇಬ್ಬರು ಶಿಕ್ಷಕರ ಪೈಕಿ ಒಬ್ಬರು ಪೊಲೀಸ್‌ ಹುದ್ದೆಯಿಂದ ಶಿಕ್ಷಕ ಹುದ್ದೆಗೆ ಆಯ್ಕೆಗೊಂಡಿದ್ದು ಪೆರಡಾಲ ಶಾಲೆಗೆ ನೇಮಕವಾಗಿದ್ದರು. ಅಲ್ಲಿಯೂ ಕನ್ನಡಿಗರ ವಿರೋಧದ ಹಿನ್ನೆಲೆಯಲ್ಲಿ ಇವರು ಮೂಲ ಪೊಲೀಸ್‌ ಇಲಾಖೆ ಉದ್ಯೋಗಕ್ಕೆ ವಾಪಸ್‌ ಹಿಂದಿರುಗಿದರು. ಇನ್ನಿಬ್ಬರು ಶಿಕ್ಷಕರಾದ ತಿರುವನಂತಪುರಂ ಮೂಲದ ರಾಡ್ರಿಗಲ್‌ ಮತ್ತು ಸುಹಿರಿನ್‌ ಅವರು ಪೈವಳಿಕೆ ಮತ್ತು ಬಂದಡ್ಕ ಶಾಲೆಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಅಲ್ಲಿಯೂ ವಿರೋಧ ವ್ಯಕ್ತವಾಗಿದ್ದರಿಂದ ಈ ಶಿಕ್ಷಕರೂ ರಜೆ ಮೇಲೆ ತೆರಳಿದ್ದರು.

ಮೈಸೂರಿನಲ್ಲಿ ಕನ್ನಡ ಕಲಿಕೆ:

ಇದೀಗ ಈ ಇಬ್ಬರು ಶಿಕ್ಷಕರಿಗೆ ಕನ್ನಡ ಪ್ರಾಥಮಿಕ ವಿದ್ಯಾಭ್ಯಾಸ ಕಲಿಯುವಂತೆ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಗೆ ಕಳುಹಿಸಲಾಗಿದೆ. ಒಂದು ವರ್ಷ ಕಾಲದ ಕನ್ನಡ ಕೋರ್ಸ್‌ ಪೂರೈಸಿ ಬರುವಂತೆ ವೇತನ ಸಹಿತ ಅವಕಾಶವನ್ನು ನೀಡಲಾಗಿದೆ. ಈ ಕುರಿತು ಜುಲೈ 1ರಂದು ಕೇರಳ ಶಿಕ್ಷಣ ಇಲಾಖೆ ಆದೇಶ ಪತ್ರವನ್ನು ಹೊರಡಿಸಿದೆ.

ಕನ್ನಡ ಸಂಘಟನೆಗಳಿಂದಲೂ ಪತ್ರ:

ಮಲಯಾಳ ಭಾಷಾ ಶಿಕ್ಷಕರು ಸರಿಯಾಗಿಯೇ ಕನ್ನಡ ಕಲಿತ ಬಳಿಕವೇ ಪಾಠ ಮಾಡಲು ತರಗತಿಗೆ ಹಾಜರಾಗಬೇಕು. ಕೆಲವು ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ಸರಿಯಾಗಿ ಕಲಿಯದೆ ನಾಮ್‌ಕೇವಾಸ್ತೆ ಸರ್ಟಿಫಿಕೇಟ್‌ ಪಡೆದುಕೊಳ್ಳುವಂತೆ ಆಗಬಾರದು. ಈ ನಿಟ್ಟಿನಲ್ಲಿ ಸೂಕ್ತ ಗಮನ ಹರಿಸುವಂತೆ ಕಾಸರಗೋಡು ಕನ್ನಡ ಹೋರಾಟ ಸಮಿತಿ ಹಾಗೂ ಕಾಸರಗೋಡು ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಸೇರಿ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಗೆ ಪತ್ರ ಬರೆದು ಮುನ್ನೆಚ್ಚರಿಕೆ ವಹಿಸುವಂತೆ ಕೋರಿದೆ.

ಮತ್ತೆ ಮಲಯಾಳಿ ಶಿಕ್ಷಕರ ನೇಮಕ?

ಕಳೆದ ವರ್ಷ ಕೆಪಿಎಸ್‌ಸಿ ನೇಮಕಾತಿಗೆ ಆಯ್ಕೆಯಾದ 23 ಮಂದಿ ಪೈಕಿ ಕೇವಲ ನಾಲ್ವರು ಶಿಕ್ಷಕರ ನೇಮಕ ಪ್ರಕ್ರಿಯೆ ನಡೆದಿತ್ತು. ಇನ್ನು ಉಳಿದ ಶಿಕ್ಷಕರ ನೇಮಕ ಪ್ರಕ್ರಿಯೆಯನ್ನು ಮತ್ತೆ ಕೆಪಿಎಸ್‌ಸಿ ಆರಂಭಿಸಿದೆ. ಪ್ರಸ್ತುತ ಮಂಜೇಶ್ವರ ಅಸೆಂಬ್ಲಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿರುವ ಸಂದರ್ಭ ಈ ನೇಮಕ ಪ್ರಕ್ರಿಯೆ ಮತ್ತೆ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಗಡಿನಾಡ ಕನ್ನಡಿಗರು ಹೇಳುತ್ತಿದ್ದಾರೆ.

ಈ ಮಧ್ಯೆ ಈ ಹಿಂದೆ ಮಲಯಾಳಿ ಶಿಕ್ಷಕರ ನೇಮಕ ವಿವಾದ ಕೇರಳ ಹೈಕೋರ್ಟ್‌ನಲ್ಲಿದೆ. ಈಗಾಗಲೇ ನೇಮಕಗೊಂಡಿರುವ ಮಲಯಾಳಂ ಶಿಕ್ಷಕರನ್ನು ಬೋಧಕೇತರ ಹುದ್ದೆಗೆ ವರ್ಗಾಯಿಸಬೇಕು. ಇಲ್ಲವೇ ಮಲಯಾಳಿ ಭಾಷೆ ಬೋಧಿಸುತ್ತಿರುವ ಶಾಲೆಗಳಿಗೆ ವರ್ಗಾಯಿಸಬೇಕು ಅಥವಾ ಆ ಶಿಕ್ಷಕರು ಕಡ್ಡಾಯ ಕನ್ನಡ ಕಲಿತು ಪಾಠ ಮಾಡುವಂತೆ ಆಗಬೇಕು ಎಂಬ ಬೇಡಿಕೆಯನ್ನು ಮುಂದಿರಿಸಿ ಗಡಿನಾಡ ಸಂಘಟನೆಗಳು ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದ್ದು, ಅದರ ತನಿಖೆ ಪ್ರಗತಿಯಲ್ಲಿದೆ. ಈ ನಡುವೆಯೇ ಉಳಿದ ಶಿಕ್ಷಕರ ನೇಮಕಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ ಎಂದು ಹೇಳಲಾಗಿದೆ.

ಮಲಯಾಳಿ ಶಿಕ್ಷಕರು ತರಾತುರಿಯಲ್ಲಿ ಕನ್ನಡ ಕಲಿತಿರುವುದಾಗಿ ಸರ್ಟಿಫಿಕೇಟ್‌ ತಂದರೆ ಮತ್ತೆ ಹೋರಾಟ ನಡೆಸಬೇಕಾಗುತ್ತದೆ. ಈ ಕುರಿತು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಗೆ ಪತ್ರ ಬರೆಯಲಾಗಿದೆ. ಪ್ರಸಕ್ತ ಹೈಕೋರ್ಟ್‌ನಲ್ಲಿ ಕೇಸು ನಡೆಯುತ್ತಿರಬೇಕಾದರೆ ಕೇರಳ ಸರ್ಕಾರ ಮತ್ತೆ ಮಲಯಾಳಿ ಶಿಕ್ಷಕರನ್ನು ಕನ್ನಡ ಶಾಲೆಗಳಿಗೆ ನೇಮಕ ಮಾಡಬಾರದು.

- ಮುರಳೀಧರ ಬಳ್ಳಕುರಾಯ, ಅಧ್ಯಕ್ಷ, ಕನ್ನಡ ಹೋರಾಟ ಸಮಿತಿ, ಕಾಸರಗೋಡು

ಏನಿದು ವಿವಾದ?

ಕರ್ನಾಟಕದ ಗಡಿ ಜಿಲ್ಲೆ ಕಾಸರಗೋಡಿನಲ್ಲಿರುವ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಗಳಿಗೆ ಕೇರಳ ಸರ್ಕಾರ ಕಳೆದ ವರ್ಷ ಮಲಯಾಳ ಭಾಷಿಕ ಗಣಿತ ಶಿಕ್ಷಕರನ್ನು ನಿಯೋಜಿಸಿತ್ತು. ಇದರಿಂದಾಗಿ ಕನ್ನಡ ಭಾಷಿಕ ಮಕ್ಕಳು ಮಲಯಾಳ ಮಾಧ್ಯಮದಲ್ಲಿ ಗಣಿತ ಕಲಿಯುವ ಅನಿವಾರ್ಯತೆಗೆ ಸಿಲುಕಿದ್ದರು. ಇದರ ವಿರುದ್ಧ ಭಾರೀ ಹೋರಾಟ ನಡೆದಿತ್ತು. ವಿರೋಧದಿಂದಾಗಿ ಈ ಶಿಕ್ಷಕರು ದೀರ್ಘ ರಜೆ ಮೇಲೆ ತೆರಳಿದ್ದರು. ಇದೀಗ ಕೇರಳ ಸರ್ಕಾರ, ಕನ್ನಡಿಗರ ಬೇಡಿಕೆಗೆ ಮಣಿದಿದ್ದು, ಮಲಯಾಳಿ ಗಣಿತ ಶಿಕ್ಷಕರನ್ನು ಕನ್ನಡ ಕಲಿಯಲೆಂದು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಗೆ ಕಳುಹಿಸಿಕೊಟ್ಟಿದೆ.