Asianet Suvarna News Asianet Suvarna News

Tumakur : ಜನೌಷಧ ಕೇಂದ್ರದಲ್ಲಿ ಅಗತ್ಯ ಔಷಧ ದಾಸ್ತಾನಿರಲಿ

ಜನೌಷಧ ಕೇಂದ್ರಗಳು ದಿನದ 24 ಗಂಟೆಯೂ ತೆರೆದಿರಬೇಕು ಮತ್ತು ಅಗತ್ಯ ಔಷಧಗಳ ದಾಸ್ತಾನು ಹೊಂದಿರಬೇಕು. ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರು ನಿಯಮಿತ ತಪಾಸಣೆ ನಡೆಸಬೇಕು ಮತ್ತು ಯಾವುದೇ ಲೋಪಕ್ಕೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದರು.

Keep stock of essential medicines in Janaushadha Kendra snr
Author
First Published Nov 15, 2022, 4:58 AM IST

 ತುಮಕೂರು :  ಜನೌಷಧ ಕೇಂದ್ರಗಳು ದಿನದ 24 ಗಂಟೆಯೂ ತೆರೆದಿರಬೇಕು ಮತ್ತು ಅಗತ್ಯ ಔಷಧಗಳ ದಾಸ್ತಾನು ಹೊಂದಿರಬೇಕು. ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರು ನಿಯಮಿತ ತಪಾಸಣೆ ನಡೆಸಬೇಕು ಮತ್ತು ಯಾವುದೇ ಲೋಪಕ್ಕೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದರು.

ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗಿನ ವಿವಿಧ ವಿಷಯಗಳಿಗೆ ಸಂಬಂಧಿಸಿದ ವಿಡಿಯೋ ಕಾನ್ಫರೆನ್ಸ್‌ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರವು ಸಾರ್ವಜನಿಕರಿಗೆ ಸದಾ ತೆರೆದಿರುವಂತೆ ಮತ್ತು ಅಗತ್ಯ ಔಷಧ ದಾಸ್ತಾನು ಇರುವ ಬಗ್ಗೆ ಡಿಎಚ್‌ಓ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರು ತಪಾಸಣೆ ನಡೆಸಬೇಕು ಮತ್ತು ಲೋಪದೋಷವಿದ್ದಲ್ಲಿ ನೋಟೀಸ್‌ ನೀಡಬೇಕು. ಆಭಾ ಕಾರ್ಡ್‌ ನೋಂದಣಿ ಕುರಿತಂತೆ ಪ್ರತಿ ತಾಲೂಕಿಗೆ ಗುರಿ ನಿಗದಿಪಡಿಸಲಾಗಿದೆ. ಪ್ರತಿ ದಿನ 1500 ನೋಂದಣಿಯಾಗಬೇಕು. ಇಓ ಹಾಗೂ ತಹಸೀಲ್ದಾರ್‌ಗಳು ಗ್ರಾಮ-ಒನ್‌ ಕೇಂದ್ರಗಳಿಗೆ ಪ್ರತ್ಯೇಕವಾಗಿ ಭೇಟಿ ನೀಡಬೇಕು. ಇಂದಿನಿಂದ ಅಭಾ ಕಾರ್ಡ್‌ ವಿತರಣೆ ಕುರಿತು ಪ್ರತಿ ದಿನ ಪರಿಶೀಲಿಸಲಾಗುವುದು. ಕೋರ್ಬೆ ವ್ಯಾಕ್ಸಿನ್‌, ಕೋವ್ಯಾಕ್ಸಿನ್‌, ಕೋವಿಶೀಲ್ಡ್‌ ಲಸಿಕೆಗಳು ಅವಧಿ ಮೀರದಂತೆ ನೋಡಿಕೊಂಡು, ನಿಗದಿತ ವೇಳಾಪಟ್ಟಿಯೊಳಗಾಗಿ ಲಸಿಕೆ ನೀಡಬೇಕು ಎಂದರು.

ತಾಲೂಕು ಆಸ್ಪತ್ರೆ, ಪಿಎಚ್‌ಸಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಅಧೀನ ಅಧಿಕಾರಿಗಳಿಗೆ ಡಿಎಚ್‌ಓ ಸೂಚಿಸಬೇಕು. ಆಸ್ಪತ್ರೆ ಆವರಣದೊಳಗಿನ ಸಾರ್ವಜನಿಕ ಶೌಚಾಲಯಗಳು ಸ್ವಚ್ಛವಾಗಿರಬೇಕು. ಸಣ್ಣಪುಟ್ಟದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಹರಿಸಬೇಕು. ವಾರಕ್ಕೊಮ್ಮೆ ತಹಸೀಲ್ದಾರ್‌, ಇ.ಓ.ಗಳು ಹಿಂದುಳಿದ ವರ್ಗಗಳ, ಪ.ಜಾತಿ/ಪ.ಪಂಗಡದ ಹಾಸ್ಟೆಲ್‌ಗಳ ಭೇಟಿ ಮಾಡಬೇಕು. ಅಲ್ಲಿ ವಿತರಿಸಲಾಗುವ ಊಟ ಸೇವಿಸಿ ಗುಣಮಟ್ಟಪರಿಶೀಲಿಸಬೇಕು. ಎಸ್‌ಡಬ್ಲ್ಯೂಎಂ ನಿವೇಶನಕ್ಕೆ ಸಂಬಂಧಿಸಿದಂತೆ ಯಾವುದೇ ತಕರಾರು ಇದ್ದಲ್ಲಿ ಬದಲಿ ನಿವೇಶನ ಗುರುತಿಸಿ, ಸಕಾರಣದೊಂದಿಗೆ ಪ್ರಸ್ತಾವನೆಯನ್ನು ಕಳುಹಿಸಿಕೊಡಬೇಕು ಎಂದು ತಹಸೀಲ್ದಾರ್‌ಗಳಿಗೆ ಸೂಚಿಸಿದರು.

ಉಪವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರರು ಕಂದಾಯ ಗ್ರಾಮಗಳಿಗೆ ಸಂಬಂಧಿಸಿದಂತೆ ಹಕ್ಕುಪತ್ರ ನೀಡುವ ಕಾರ್ಯಕ್ಕೆ ಪ್ರಮುಖ ಆದ್ಯತೆ ನೀಡಬೇಕು. ಕೆಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಬೇಕು. ಆರ್‌ಟಿಸಿ ಮಾಡಿ ಎನ್‌ಓಸಿ ನೀಡಬೇಕು. ತುಮಕೂರು ನಗರವೂ ಸೇರಿದಂತೆ ಎಲ್ಲಾ ತಾಲೂಕುಗಳಲ್ಲಿ ಅವಧಿ ಮುಗಿದಿರುವ ಫ್ಲೆಕ್ಸ್‌ ಬ್ಯಾನರ್‌ಗಳನ್ನು ತೆರವುಗೊಳಿಸಬೇಕು. ಕಾರ್ಯಕ್ರಮ ಮುಗಿದ ಮಾರನೇ ದಿನವೇ ಫ್ಲೆಕ್ಸ್‌ ಬ್ಯಾನರ್‌ಗಳನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕುವಿಕೆ(ಡಿಲೀಷನ್‌) ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಯಾ ರಾಜಕೀಯ ಪಕ್ಷಗಳ ಮುಖಂಡರನ್ನು ಕರೆದು ಮಾಹಿತಿ ನೀಡಬೇಕು. ಮರಣ ಹಾಗೂ ವಲಸೆ ಪ್ರಕರಣಗಳನ್ನು ಸರಿಪಡಿಸಬೇಕು. ತಹಸೀಲ್ದಾರ್‌ಗಳು ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಮರಣ ವಹಿ ಪರಿಶೀಲಿಸಿ, ಆಯಾ ಸ್ಥಳೀಯ ಸಂಸ್ಥೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮತಪಟ್ಟಿಪರಿಷ್ಕರಣೆಗೆ ಕ್ರಮವಹಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್‌, ಡಿಡಿಎಲ್‌ಆರ್‌ ಸುಜಯ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ್‌, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ವೀಣಾ, ವಾರ್ತಾಧಿಕಾರಿ ಎಂ.ಆರ್‌. ಮಮತಾ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಆಸ್ತಿಗಳ ನಿರ್ವಹಣೆಗೆ ಸೊಸೈಟಿ ರಚಿಸಿ: ಪಾಟೀಲ

ಸ್ಮಶಾನ ಹಸ್ತಾಂತರ, ಒತ್ತುವರಿ ಕುರಿತಂತೆ ತಹಸೀಲ್ದಾರ್‌ಗಳು ವರದಿ ಸಲ್ಲಿಸಬೇಕು. ಅಂಗನವಾಡಿ ನಿವೇಶನಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಗರಸಭೆಗಳಲ್ಲಿನ ಸಿ.ಎ.ನಿವೇಶನಗಳನ್ನು ಅಂಗನವಾಡಿ ಕಟ್ಟಡಗಳಿಗೆ ಕಾಯ್ದಿರಿಸಬೇಕು. ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿನ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ, ನಿಯಮಿತವಾಗಿ ಆಗಬೇಕು. ದಿನ ಬಿಟ್ಟು ದಿನ ತ್ಯಾಜ್ಯ ಸಂಗ್ರಹಣೆಗೆ ಪಾಲಿಕೆ ವತಿಯಿಂದ ವಾಹನ ಕಳುಹಿಸಬೇಕು ಮತ್ತು ಆಸ್ಪತ್ರೆಯ ಯುಜಿಡಿ ಸಮಸ್ಯೆ ತಲೆದೋರಿದಲ್ಲಿ ತಕ್ಷಣವೇ ಬಗೆಹರಿಸಬೇಕು. ಸ್ಮಾರ್ಚ್‌ ಸಿಟಿ ವತಿಯಿಂದ ಸೃಜಿಸಲಾಗಿರುವ ಆಸ್ತಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸೊಸೈಟಿ ರಚಿಸುವಂತೆ ನಗರಾಭಿವೃದ್ಧಿ ಆಯುಕ್ತರು, ಪಾಲಿಕೆ ಆಯುಕ್ತರಿಗೆ ಡೀಸಿ ಸೂಚಿಸಿದರು.

Follow Us:
Download App:
  • android
  • ios