ಕೋಲಾರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳಿಗೆ ಕೆ.ಸಿ.ವ್ಯಾಲಿ ಮತ್ತು ಎಚ್‌.ಎನ್‌.ವ್ಯಾಲಿ ಯೋಜನೆಗಳಲ್ಲಿ, ಮೂರು ಹಂತಗಳಲ್ಲಿ ಸಂಸ್ಕರಿಸಿದ ನೀರನ್ನು ಪೂರೈಸಲು ಕ್ರಮ ವಹಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್‌ ಆಗ್ರಹಿಸಿದರು.

ಚಿಕ್ಕಬಳ್ಳಾಪುರ (ಮಾ.27): ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳಿಗೆ ಕೆ.ಸಿ.ವ್ಯಾಲಿ ಮತ್ತು ಎಚ್‌.ಎನ್‌.ವ್ಯಾಲಿ ಯೋಜನೆಗಳಲ್ಲಿ, ಮೂರು ಹಂತಗಳಲ್ಲಿ ಸಂಸ್ಕರಿಸಿದ ನೀರನ್ನು ಪೂರೈಸಲು ಕ್ರಮ ವಹಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್‌ ಆಗ್ರಹಿಸಿದರು. ಲೋಕಸಭೆಯಲ್ಲಿ ಶುಕ್ರವಾರ ಶೂನ್ಯವೇಳೆಯಲ್ಲಿ ಕನ್ನಡದಲ್ಲೇ ವಿಷಯ ಪ್ರಸ್ತಾಪಿಸಿದರು.

Add Asianetnews Kannada as a Preferred SourcegooglePreferred

ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಲು ನಾನು 2007 ರಿಂದಲೂ ಪ್ರಯತ್ನ ಮಾಡುತ್ತಿದ್ದೇನೆ. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಭಾಗಕ್ಕೆ ಕೆ.ಸಿ.ವ್ಯಾಲಿ ಮತ್ತು ಎಚ್‌.ಎನ್‌.ವ್ಯಾಲಿ ಯೋಜನೆಗಳಲ್ಲಿ ಮೂರನೇ ಹಂತದಲ್ಲಿ ಸಂಸ್ಕರಣೆ ಮಾಡಿದ ನೀರನ್ನು ಹರಿಸುವ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು.

ಆರೋಗ್ಯದ ಮೇಲೆ ದುಷ್ಪರಿಣಾಮ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಹಿಂದಿನ ಅನೇಕ ಉತ್ತಮ ಯೋಜನೆಗಳನ್ನು ರದ್ದು ಮಾಡಿದೆ. ಅದೇ ರೀತಿ ಮೂರನೇ ಹಂತದ ಸಂಸ್ಕರಣೆಯ ಯೋಜನೆಯನ್ನು ಕೂಡ ರದ್ದು ಮಾಡಿದೆ ಎಂದರು. ಬಯಲುಸೀಮೆಗೆ ಈಗಾಗಲೇ ಪೂರೈಕೆಯಾಗುತ್ತಿರುವ ದ್ವಿತೀಯ ಹಂತದ ಸಂಸ್ಕರಣೆಯ ನೀರನ್ನು ಕೆಲವು ಸಂಸ್ಥೆಗಳು ಪರೀಕ್ಷೆ ಮಾಡಿದ್ದು, ಎರಡು ಹಂತದಲ್ಲಿ ಸಂಸ್ಕರಿಸಿದ ನೀರು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ವರದಿ ನೀಡಿವೆ.

ತ್ಯಾಜ್ಯ ನೀರನ್ನು ಮೂರು ಹಂತಗಳಲ್ಲೇ ಸಂಸ್ಕರಣೆ ಮಾಡಿ ಬಳಕೆ ಮಾಡಬೇಕೆಂದು ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಈಗಾಗಲೇ ತಿಳಿಸಲಾಗಿದೆ. ಮೊದಲಿಗೆ ಈ ನಿಯಮವನ್ನು ಕರ್ನಾಟಕ ಸರ್ಕಾರ ಅನುಷ್ಠಾನ ಮಾಡಬೇಕಿದೆ. ಜೊತೆಗೆ ಎತ್ತಿನಹೊಳೆ ಯೋಜನೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಶಾಶ್ವತ ನೀರಾವರಿ ಕಲ್ಪಿಸಲು ಕೃಷ್ಣ ನದಿಯಿಂದ ಕನಿಷ್ಠ 15 ಟಿಎಂಸಿ ನೀರನ್ನು ತಂದು ಬಯಲುಸೀಮೆಗೆ ನೀಡಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.