ಸಾಹಿತ್ಯ ಕ್ಷೇತ್ರಕ್ಕೆ ಕವಿತಾಕೃಷ್ಣರ ಸಾರ್ಥಕ ಕೊಡುಗೆ
ಹಿರಿಯ ಸಾಹಿತಿ ಡಾ. ಕವಿತಾಕೃಷ್ಣ ಅವರು 350 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಕನ್ನಡ ನಾಡು, ನುಡಿ, ನೆಲ, ಜಲದ ಹೋರಾಟಗಳಲ್ಲಿ ಗಟ್ಟಿ ಧ್ವನಿಯಾಗಿ ಹೋರಾಟ ನಡೆಸಿದ್ದಾರೆ. ಡಾ. ರಾಜ್‌ಕುಮಾರ್ ಅವರ ಜೊತೆಯಾಗಿ ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಡಾ. ಕವಿತಾಕೃಷ್ಣರ ನಿಧನದಿಂದ ಕನ್ನಡ ನಾಡಿಗೆ ಅಪಾರವಾದ ನಷ್ಟವಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಾ ಕುಮಾರ್ ಹೇಳಿದರು.
ತುಮಕೂರು : ಹಿರಿಯ ಸಾಹಿತಿ ಡಾ. ಕವಿತಾಕೃಷ್ಣ ಅವರು 350 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಕನ್ನಡ ನಾಡು, ನುಡಿ, ನೆಲ, ಜಲದ ಹೋರಾಟಗಳಲ್ಲಿ ಗಟ್ಟಿ ಧ್ವನಿಯಾಗಿ ಹೋರಾಟ ನಡೆಸಿದ್ದಾರೆ. ಡಾ. ರಾಜ್‌ಕುಮಾರ್ ಅವರ ಜೊತೆಯಾಗಿ ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಡಾ. ಕವಿತಾಕೃಷ್ಣರ ನಿಧನದಿಂದ ಕನ್ನಡ ನಾಡಿಗೆ ಅಪಾರವಾದ ನಷ್ಟವಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಾಕುಮಾರ್ ಹೇಳಿದರು.
ಸೋಮವಾರ ನಗರದ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾನುವಾರ ನಿಧನರಾದ ಹಿರಿಯ ಸಾಹಿತಿ ಡಾ. ಕವಿತಾಕೃಷ್ಣರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಮುಖಂಡರು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಮೌನಾಚರಣೆ ಮಾಡಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ಈ ವೇಳೆ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಗೌರವಪಡೆದಿದ್ದ ಡಾ. ಕವಿತಾಕೃಷ್ಣ ಅವರು, ತಮ್ಮ ಕೊನೆ ದಿನಗಳವರೆಗೂ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದರು. ಸುಮಾರು 350 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಕನ್ನಡ ಶಿಕ್ಷಕರಾಗಿ, ಅಪ್ಪಟ ಕನ್ನಡಾಭಿಮಾನಿಯಾಗಿದ್ದ ಅವರು, ಕನ್ನಡದ ಅಸ್ಮಿತೆಗೆ ಧಕ್ಕೆಯಾದಾಗ ಗಟ್ಟಿ ಧ್ವನಿಯಾಗಿ ನಿಲ್ಲುತ್ತಿದ್ದರು ಎಂದರು.
ಸಾಹಿತ್ಯ ಮಾತ್ರವಲ್ಲದೆ ಜಿಲ್ಲೆಯ ಹೇಮಾವತಿ ನೀರಿನ ಹೋರಾಟದಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು. ನಾಡು, ನುಡಿ ಪರವಾಗಿ ಯುವಜನರನ್ನು ಸಂಘಟಿಸಿ ಆವರ ಜೊತೆ ತಾವೂ ಶಕ್ತಿಯಾಗಿ ನಿಲ್ಲುತ್ತಿದ್ದರು. ಜಿಲ್ಲಾ ಕನ್ನಡ ಸೇನೆಯ ಗೌರವಾಧ್ಯಕ್ಷರಾಗಿ ಸದಾ ಬೆಂಬಲ ನೀಡಿದ್ದರು ಎಂದು ಅವರ ಸೇವೆ ಸ್ಮರಿಸಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಗೌರವಾಧ್ಯಕ್ಷ ಹಾಗೂ ರಾಜ್ಯ ಚೆಸ್ ಅಕಾಡೆಮಿ ಉಪಾಧ್ಯಕ್ಷ ಟಿ.ಎನ್. ಮಧುಕರ್ ಮಾತನಾಡಿ, ಸಾಮಾನ್ಯ ಹಿಂದುಳಿದ ವರ್ಗದ ಕುಟುಂಬದಲ್ಲಿ ಜನಿಸಿದ ಡಾ. ಕವಿತಾಕೃಷ್ಣ ಅವರು ವಿದ್ಯಾರ್ಥಿಗಳ ಮೆಚ್ಚಿನ ಕನ್ನಡ ಶಿಕ್ಷಕರಾಗಿ, ಉತ್ತಮ ಕೃತಿಗಳನ್ನು ರಚಿಸಿ, ನಾಡು, ನುಡಿ ಪರವಾದ ಹೋರಾಟಗಳನ್ನು ಸಂಘಟಿಸಿ ಹೆಸರಾಗಿದ್ದಾರೆ. ಅನೇಕ ಗಣ್ಯರ ಜೀವನ ಚರಿತ್ರೆಗಳ ಕೃತಿಗಳನ್ನು ಸಂಪಾದಿಸಿ, ಮಹನೀಯರ ಬದುಕನ್ನು ಶಾಶ್ವತವಾಗಿಸುವ ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಡಾ. ಕವಿತಾಕೃಷ್ಣರು ಇನ್ನಷ್ಟು ಕಾಲ ಬದುಕಿದ್ದರೆ ಮತ್ತಷ್ಟು ಶ್ರೇಷ್ಠ ಕೃತಿಗಳು ಹೊರಬರುತ್ತಿದ್ದವು. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು.
ಹಿರಿಯ ಕ್ರೀಡಾಪಟು ಟಿ.ಕೆ. ಆನಂದ್ ಅವರು ಕವಿತಾಕೃಷ್ಣರೊಂದಿಗಿನ ತಮ್ಮ ಒಡನಾಟ ಸ್ಮರಿಸಿಕೊಂಡು, ಕವಿತಾಕೃಷ್ಣರ ಸಾಹಿತ್ಯ, ಹೋರಾಟ, ಅವರ ಭಾಷಣ ವೈಖರಿಗೆ ಮನಸೋತ ಅಪಾರ ಜನ ಅವರ ಅಭಿಮಾನಿಗಳಾಗಿದ್ದಾರೆ. ಅಂತಹವರಲ್ಲಿ ನಾನೂ ಒಬ್ಬ. ಇವರ ಸಾಹಿತ್ಯ, ಸಾಮಾಜಿಕ ಕಳಕಳಿ ಯುವಪೀಳಿಗೆಗೆ ಮಾದರಿಯಾಗಲಿ ಎಂದರು.
ಪತ್ರಕರ್ತ ಸುದ್ಧಿಬಿಂಬ ಸತೀಶ್, ನಿವೃತ್ತ ಪ್ರಾಚಾರ್ಯ ವೆಂಕಟೇಶ್ ಕವಿತಾಕೃಷ್ಣರ ಸಾಹಿತ್ಯ ಸೇವೆ ಸ್ಮರಿಸಿದರು. ಮುಖಂಡರಾದ ಹೆಬ್ಬೂರು ಶ್ರೀನಿವಾಸಮೂರ್ತಿ, ಶಾಂತಕುಮಾರ್, ಸತೀಶ್‌ಕುಮಾರ್, ಗುರುರಾಘವೇಂದ್ರ ಮೊದಲದವರು ಭಾಗವಹಿಸಿದ್ದರು.
ಕವಿತಾಕೃಷ್ಣರ ಪುತ್ಥಳಿ ಸ್ಥಾಪಿಸಿ
ತಮ್ಮ ಸಾಹಿತ್ಯ, ಹೋರಾಟದ ಮೂಲಕ ಕೊಡುಗೆಯಾಗಿದ್ದ ಡಾ. ಕವಿತಾಕೃಷ್ಣರ ಸೇವೆ, ಕೊಡುಗೆ ಮುಂದಿನ ತಲೆಮಾರಿನವರಿಗೂ ಸ್ಫೂರ್ತಿಯಾಗಬೇಕು. ನಗರದಲ್ಲಿ ಇವರ ಪುತ್ಥಳಿ ಸ್ಥಾಪಿಸಬೇಕು. ಪ್ರಮುಖ ರಸ್ತೆ, ವೃತ್ತಕ್ಕೆ ಇವರ ಹೆಸರಿಟ್ಟು ಅವರ ಸೇವೆಯನ್ನು ಸ್ಮರಣೀಯವಾಗಿಸಬೇಕು ಎಂದು ಧನಿಯಾಕುಮಾರ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.