Asianet Suvarna News Asianet Suvarna News

ಭಾರತದ ಶಿರ ಕಾಶ್ಮೀರ ಕತ್ತರಿಸಲು ಬಿಡಲ್ಲ: ಸಾಧ್ವಿ ಪ್ರಜ್ಞಾ ಸಿಂಗ್‌

ಕಾಶ್ಮೀರ ಭಾರತ ದೇಶದ ಶಿರ. ಅದನ್ನು ಕತ್ತರಿಸಲು ನಾವು ಬಿಡುವುದಿಲ್ಲ. ಈ ಭೂಮಿ ನಮ್ಮ ತಾಯಿ, ಇಲ್ಲಿ ಜೀವಿಸುವುದಾದರೆ ಭಾರತಮಾತೆ ಮಕ್ಕಳಾಗಿ ಇರಬೇಕು ಎಂದು ಭೂಪಾಲ್‌ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್‌ ಠಾಕೂರ್‌ ಹೇಳಿದರು.

Kashmir Indias head should not be cut off says prajnasingh at shivamogga rav
Author
First Published Dec 26, 2022, 7:45 AM IST

ಶಿವಮೊಗ್ಗ (ಡಿ.26) : ಕಾಶ್ಮೀರ ಭಾರತ ದೇಶದ ಶಿರ. ಅದನ್ನು ಕತ್ತರಿಸಲು ನಾವು ಬಿಡುವುದಿಲ್ಲ. ಈ ಭೂಮಿ ನಮ್ಮ ತಾಯಿ, ಇಲ್ಲಿ ಜೀವಿಸುವುದಾದರೆ ಭಾರತಮಾತೆ ಮಕ್ಕಳಾಗಿ ಇರಬೇಕು ಎಂದು ಭೂಪಾಲ್‌ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್‌ ಠಾಕೂರ್‌ ಹೇಳಿದರು.

ನಗರದ ಎನ್‌ಇಎಸ್‌ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ 3ನೇ ತ್ರೈಮಾಸಿಕ ಪ್ರಾಂತೀಯ ಕಾರ್ಯಕರ್ತರ ಸಮಾಗಮ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಈ ನೆಲ ಹಿಂದೂಗಳಿಗೆ ಸೇರಿದ್ದು, ಸನಾತನ ಧರ್ಮ ಮಾತ್ರವೇ ಇಲ್ಲಿ ಉಳಿಯೋದು!

ಹಿಂದು ಉಗ್ರವಾದ, ಹಿಂದೂ ನೀಚ ಎಂದು ಹೇಳುವವರಿದ್ದಾರೆ. ಒಂದುವೇಳೆ ಹಿಂದೂ ಉಗ್ರವಾದಿಯೇ ಆಗಿದ್ದರೆ ಅನ್ಯಧರ್ಮಿಗಳು ಇವತ್ತು ಇರುತ್ತಿರಲಿಲ್ಲ. ಹಿಂದು ಹುಟ್ಟಿನಿಂದಲೇ ಹಿಂದು ಆಗಿರುತ್ತಾರೆ. ಈಗ ಹಿಂದು ಆಗಲು ಸಾಧ್ಯವಿಲ್ಲ, ದೇಶದಲ್ಲಿ ವಾಸಿಸಲು ಕಷ್ಟಅಂತ ಕೆಲ ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಅವರಿಗೆ ಇಲ್ಲಿ ಇರಿ ಎಂದು ಯಾರು ಒತ್ತಾಯ ಮಾಡಿಲ್ಲ. ದೇಶದಿಂದ ಹೊರಹೋಗಲು ಸಿದ್ಧವಿದ್ದರೆ ಹೋಗಲಿ ಎಂದು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಟಾಂಗ್‌ ನೀಡಿದರು.

ನಾನು ಸಂಸದೆ, ಹಿಂದುಗಳ ಪರವಾಗಿ ಮಾತನಾಡುತ್ತೇನೆ. ಹಿಂದುಗಳ ರಕ್ಷಣೆಗಾಗಿ ನಾನು ಹೋರಾಡುತ್ತಿದ್ದೇನೆ. ಜೀವ ಇರುವವರೆಗೂ ಸನಾತನ ರಕ್ಷಣೆಗೆ ಬದ್ಧನಾಗಿದ್ದೇನೆ. ಕೊಲ್ಲುವ ಬೆದರಿಕೆ ಬರ್ತಾನೇ ಇವೆ. ನಾವು ಹೆದರುವುದಿಲ್ಲ, ಹೆದರಿಸುತ್ತೇವೆ. ನನಗೆ ಸಂಸದ ಸ್ಥಾನ ಶಾಶ್ವತವಲ್ಲ, ಸನ್ಯಾಸತ್ವ ಶಾಶ್ವತ. ನನಗೆ ಪುನರ್ಜನ್ಮವಿದೆ. ಮತ್ತೆ ಹುಟ್ಟಿಬಂದು ಹಿಂದು ಧರ್ಮಕ್ಕಾಗಿಯೇ ಹೋರಾಡುತ್ತೇನೆ ಎಂದರು.

ಮೊಗಲರ ವಿರುದ್ಧ ಹೋರಾಡಿ ಬಲಿದಾನ ಮಾಡಿದವರು ಶಿವಾಜಿ ಮಹಾರಾಜರು. ಅದೇ ರೀತಿ ಹಿಂದು ಧರ್ಮಕ್ಕಾಗಿ ನಾವು ಜೀವ ಕೊಡಲೂ ಸಿದ್ಧ, ತೆಗೆಯಲೂ ಸಿದ್ಧ. ಕರ್ನಾಟಕದಲ್ಲೂ ಧರ್ಮಕ್ಕಾಗಿ ಹಲವು ಹಿಂದು ಕಾರ್ಯಕರ್ತರು ಹತ್ಯೆಯಾಗಿದ್ದಾರೆ. ಅದರಲ್ಲಿ ವಿಶ್ವನಾಥ ಶೆಟ್ಟಿ, ಶಿವಮೂರ್ತಿ, ಗೋವಿಂದ ರಾಜ್‌, ಗೋಕುಲ…, ಹಿಂದು ಹರ್ಷ, ಪ್ರವೀಣ್‌ ನೆಟ್ಟಾರ್‌, ಪ್ರಶಾಂತ್‌ ಪೂಜಾರಿ, ರುದ್ರೇಶ್‌, ಸೌಮ್ಯ ಭಟ್‌ ಮತ್ತಿತರರನ್ನು ಪ್ರಾಣತ್ಯಾಗ ಮಾಡಿದ್ದಾರೆ ಎಂದರು.

ನರೇಂದ್ರ ಮೋದಿ ಅವರು ಈ ದೇಶದ ಬಗ್ಗೆ ಸಮರ್ಪಣಾಭಾವ ಹೊಂದಿದ್ದಾರೆ. ಗೋಧ್ರಾ ಹತ್ಯಾಕಾಂಡದ ವಿಷಯದಲ್ಲಿ ಮೋದಿ ಸಾಕಷ್ಟುಸಂಕಟ ಅನುಭವಿಸಿದರು. ಆಗ ಅವರಿಗೆ ಅಮೆರಿಕ ವೀಸಾ ಕೊಟ್ಟಿರಲಿಲ್ಲ, ಈಗ ಅಮೆರಿಕ ಮೋದಿಯನ್ನು ಬಿಡುತ್ತಿಲ್ಲ. ದೇಶದ ಮೇಲೆ ದಾಳಿಯಾದರೆ ಹಿಂದಿನ ಆಡಳಿತ ಪಾಕಿಸ್ತಾನ ವಿರುದ್ಧ ಮಾತನಾಡುತ್ತಿರಲಿಲ್ಲ. ಈಗ ಮೋದಿ ಸೇನಾ ಪಾಕಿಸ್ತಾನದ ಮನೆಗೆ ನುಗ್ಗಿ ಹೋರಾಡುತ್ತಿದೆ ಎಂದು ಹೇಳಿದರು.

ನಾವು ಅತಿಥಿ ದೇವೋಭವ ಅನ್ನುತ್ತೇವೆ. ಆದರೆ, ಅತಿಥಿ ಯಜಮಾನನಾದರೆ ಸುಮ್ಮನಿರುವುದಿಲ್ಲ. ನಮ್ಮಲ್ಲಿ ಹೆಣ್ಣನ್ನು ದೇವರ ಜತೆ ಪ್ರೀತಿ ಮಾಡುತ್ತೇವೆ. ಲವ್‌ ಜಿಹಾದ್‌ ಮಾಡುವವರಿಗೆ ತಕ್ಕ ಉತ್ತರ ನೀಡಿ, ನಮ್ಮ ಹೆಣ್ಣುಮಕ್ಕಳ ರಕ್ಷಣೆ ಮಾಡುತ್ತೇವೆ. ನಮ್ಮ ಹೆಣ್ಣುಮಕ್ಕಳ ರಕ್ಷಣೆಗೆ ಮನೆಯಲ್ಲಿ ಶಸ್ತ್ರ ಇಟ್ಟುಕೊಳ್ಳಬೇಕಾಗಿದೆ. ಆದರೆ ಅದಕ್ಕೆ ಅಗತ್ಯ ಲೈಸೆನ್ಸ್‌ ಪಡೆದುಕೊಳ್ಳಬೇಕು. ಹೆಣ್ಣುಮಕ್ಕಳನ್ನು ತಿರುಗಾಡುವ ಅಟಂ ಬಾಂಬ್‌ ಮಾಡಬೇಕು. ಯಾರಾದರೂ ಅವರ ಶೀಲಕ್ಕೆ ಕೈ ಹಾಕಿದರೆ ಅಲ್ಲೇ ಉತ್ತರ ಕೊಡಬೇಕು ಎಂದು ಕರೆ ನೀಡಿದರು.

ಸಮ್ಮೇಳನದಲ್ಲಿ ಉದ್ಯಮಿ ರಾಮ್‌ ಮನೋಹರ್‌ ಶಾಂತವೇರಿ, ಹಿಂದು ಜಾಗರಣ ವೇದಿಕೆ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ್‌ ಕಾರಂತ್‌ ಸೇರಿದಂತೆ ಹಲವರು ಇದ್ದರು.

ಗಮನ ಸೆಳೆದ ಶೋಭಾಯಾತ್ರೆ

ಹಿಂದೂ ಜಾಗರಣ ವೇದಿಕೆಯ 3ನೇ ತ್ರೈವಾರ್ಷಿಕ ಪ್ರಾಂತ ಸಮಾವೇಶದ ಅಂಗವಾಗಿ ನಡೆದ ಶೋಭಾಯಾತ್ರೆ ಗಮನ ಸೆಳೆಯಿತು. ನಗÜದ ಎನ್‌ಇಎಸ್‌ ಮೈದಾನದಿಂದ ಆರಂಭವಾದ ಶೋಭಯಾತ್ರೆಯಲ್ಲಿ ಓಂ, ಶ್ರೀರಾಮರ ಸಾಂಕೇತಿಕವುಳ್ಳ ಕೇಸರಿ ಬಾವುಟಗಳನ್ನ ಹಿಡಿದು ಸಾವಿರಾರು ಸಂಖ್ಯೆಯ ಯುವಕರು ಮಹಿಳೆಯರು ಪಾಲ್ಗೊಂಡಿದ್ದರು. ನಗರದ ಕೃಷ್ಣಕೆಫೆ, ಸಾವರ್ಕರ್‌ ನಗರ, ರಾಮಣ್ಣ ಶ್ರೇಷ್ಠಿ ಪಾರ್ಕ್ ಗಾಂಧಿ ಬಜಾರ್‌, ಎ.ಎ. ವೃತ್ತ, ನೆಹರೂ ರಸ್ತೆಯ ಮೂಲಕ ಬಾಲರಾಜ್‌ ರಸ್ತೆ, ಡಿವಿಎಸ್‌ ರಸ್ತೆಯ ಮಾರ್ಗವಾಗಿ ಸಾಗಿದ ಶೋಭಾಯಾತ್ರೆ ಪುನಃ ಎನ್‌ಇಎಸ್‌ ಮೈದಾನ ತಲುಪಿತು.

ಶೋಭಾಯಾತ್ರೆ ಉದ್ದಕ್ಕೂ ‘ಜೈ ಭಾರತ ಮಾತೆ’ ಎಂಬ ಘೋಷಣೆಯ ನಡುವೆ ‘ಮೋದಿಯಾಗು, ಯೋಗಿಯಾಗು’ ಎಂಬ ಘೋಷಣೆ, ‘ರಾಮನ ಸಂತತಿ ನಾವೆಲ್ಲಾ, ಟಿಪ್ಪು ಸಂತತಿ ಬೇಕಿಲ್ಲ’, ‘ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರ’, ‘ರಕ್ತದ ಕಣ ಕಣ ಕೂಗುತ್ತಿವೆ ನಾವೆಲ್ಲಾ ಹಿಂದೂ ಎನ್ನುತ್ತಿದೆ’ ಎಂಬ ಘೋಷಣೆಗಳು ಮೊಳಗಿದವು.

ತುಳಸಿ ಮಾಲೆ ಧರಿಸಿದರೆ ಕೋವಿಡ್‌ಗೆ ತುತ್ತಾಗಲ್ಲ: ಸಂಸದೆ ಪ್ರಜ್ಞಾಸಿಂಗ್‌

ಶೋಭಯಾತ್ರೆ ಅಂಗವಾಗಿ ಗೋಪಿ ವೃತ್ತದಲ್ಲಿ ಬೃಹತ್‌ ರಂಗೋಲಿ ಹಾಕಲಾಗಿತ್ತು. ಶೋಭಾಯಾತ್ರೆ ಮಾರ್ಗ ಕೇಸರಿಮಯವಾಗಿದ್ದವು. ಭಗವಾಧ್ವಜ, ಕೇಸರಿ ಪತಾಕೆಯಿಂದ ಸಿಂಗಾರ, ಹುತಾತ್ಮ ಹಿಂದು ಯುವಕರ ಪೋಸ್ಟರ್‌ಗಳು ರಾರಾಜಿಸಿದವು. ಎನ್‌ಇಎಸ್‌ ಮೈದಾನದಲ್ಲಿ 4500 ಆಸನಗಳ ವ್ಯವಸ್ಥೆವುಳ್ಳ ಬೃಹತ್‌ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಸಮ್ಮೇಳನಕ್ಕೆ ಬಂದ ಪುರುಷರಿಗೆ ಹಣೆಗೆ ತಿಲಕವಿಟ್ಟು ಸ್ವಾಗತ ಮಾಡಿದರೆ, ಮಹಿಳೆಯರಿಗೆ ಅರಿಶಿನ-ಕುಂಕುಮ, ಹಸಿರು ಬಳೆ ಕೊಟ್ಟು ಸ್ವಾಗತ ಕೋರಲಾಯಿತು.

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಬರಬೇಕು. ಜನಸಂಖ್ಯೆ ನಿಯಂತ್ರಣ ಆಗಲೇಬೇಕು. ಆರೋಗ್ಯ ಪೂರ್ಣ ಸಮಾಜಕ್ಕೆ ಇದು ಅಗತ್ಯ. ಆದರೆ ಇದಕ್ಕೂ ಕೆಲವರು ವಿರೋಧ ಮಾಡ್ತಿದ್ದಾರೆ. ಭಾರತ ವಿಶ್ವಗುರುವಾಗುವ ಕಾಲ ಸನ್ನಿಹಿತವಾಗಿದೆ. ಹಿಂದೆ ಒಂದೇ ಪಕ್ಷವಿತ್ತು. ನಂತರ ರಾಷ್ಟ್ರಭಕ್ತ ಪಕ್ಷ ನಿರ್ಮಾಣವಾಯಿತು. ಈಗ ಹಿಂದು ರಾಷ್ಟ್ರ ನಿರ್ಮಾಣ ಆಗಲೇಬೇಕು. ಶಿವಾಜಿ ರಣನೀತಿ ಬಳಸುವಾಗ ಹಿಂದೆ ಸರಿಯಬಾರದು. ದೇಶದಲ್ಲಿ ಭವ್ಯ ಮಂದಿರಗಳು ನಿರ್ಮಾಣಗೊಳ್ಳುತ್ತಿವೆ. ಪ್ರಭು ರಾಮಚಂದ್ರನ ದೇಗುಲ ನಿರ್ಮಾಣಗೊಳ್ಳುತ್ತಿದೆ, ಕಾಶಿಯಲ್ಲೂ ಮಹಾದೇವನ ದೇಗುಲವಿದೆ. ದೇಶದಲ್ಲಿ ಅಚ್ಛೇ ದಿನ ಬಂದಿದೆ. ಹೀಗಾಗಿ ವಿರೋಧಿಗಳು ತಳಮಳಗೊಂಡಿದ್ದಾರೆ

- ಸಾಧ್ವಿ ಪ್ರಜ್ಞಾಸಿಂಗ್‌ ಠಾಕೂರ್‌, ಸಂಸ​ದೆ

Follow Us:
Download App:
  • android
  • ios