ಮಂಗಳೂರು[ಫೆ.18]: ಕಾಸರಗೋಡಿನ ಮುಸ್ಲಿಂ ದಂಪತಿ, ದಶಕದ ಹಿಂದೆ ತಾವು ದತ್ತು ಪಡೆದಿದ್ದ ಹಿಂದೂ ಬಾಲಕಿಯೊಬ್ಬಳನ್ನು ಹೆತ್ತ ಮಗಳಂತೆ ಸಾಕಿ-ಸಲಹಿ, ಇದೀಗ ಆಕೆಯ ಇಚ್ಛೆಯಂತೆಯೇ ಹಿಂದೂ ಸಂಪ್ರದಾಯದಂತೆ ಹಿಂದೂ ಯುವಕನಿಗೆ ನೀಡಿ ವಿವಾಹ ಮಾಡಿಕೊಟ್ಟು ಮಾದರಿಯಾಗಿದ್ದಾರೆ.

ಕಾಸರಗೋಡಿನ ಮೇಲ್ಪರಂಬ ನಿವಾಸಿಗಳಾದ ಎ.ಅಬ್ದುಲ್ಲಾ ಮತ್ತು ಖದೀಜಾ ಧರ್ಮ ಸಹಿಷ್ಣುತೆಯ ಆದರ್ಶವನ್ನು ಸಾರಿದ ದಂಪತಿ. ತಮ್ಮ ದತ್ತುಪುತ್ರಿ ರಾಜಶ್ರೀಯನ್ನು ಕಾಂಞಂಗಾಡ್‌ ನಿವಾಸಿ ವಿಷ್ಣುಪ್ರಸಾದ್‌ ಎಂಬುವರಿಗೆ ಧಾರೆ ಎರೆದುಕೊಟ್ಟಿದ್ದಾರೆ. ಕಾಂಞಂಗಾಡ್‌ನ ಮನ್ಯೋಟ್‌ ಕ್ಷೇತ್ರದಲ್ಲಿ ಕ್ಷೇತ್ರದ ಮುಖ್ಯ ತಂತ್ರಿಯ ನೇತೃತ್ವದಲ್ಲಿ ಸೋಮವಾರ ಈ ವಿವಾಹ ಕಾರ್ಯ ನೆರವೇರಿತು. ಜಾತಿ, ಮತ ಭೇದವಿಲ್ಲದೆ ನೂರಾರು ಮಂದಿ ಆಗಮಿಸಿ ಹೊಸ ಜೋಡಿಗೆ ಶುಭ ಹಾರೈಸಿದರು.

ಅನಾಥಳಾಗಿದ್ದವಳನ್ನು ಸಾಕಿದ್ದರು:

12 ವರ್ಷಗಳ ಹಿಂದೆ ರಾಜಶ್ರೀ ತನ್ನ ಹೆತ್ತವರನ್ನು ಕಳೆದುಕೊಂಡು ಅನಾಥಳಾಗಿದ್ದಳು. ಅಂದು ಯಾರೂ ಆಕೆಯನ್ನು ಸಾಕುವ ಅಪೇಕ್ಷೆ ವ್ಯಕ್ತಪಡಿಸದೇ ಹೋದಾಗ ಆಕೆಯ ಭವಿಷ್ಯದ ಕುರಿತು ನೆನೆದು ಮರುಕಪಟ್ಟಿದ್ದ ಅಬ್ದುಲ್ಲಾ- ಖದೀಜಾ ದಂಪತಿ ತಮ್ಮ ಮಕ್ಕಳಂತೆಯೇ ರಾಜಶ್ರೀಯನ್ನೂ ಸಾಕಿ ಸಲಹಿ, ವಿದ್ಯೆ ನೀಡಿ ದೊಡ್ಡವಳನ್ನಾಗಿ ಮಾಡಿದ್ದರು. ಇದೀಗ ರಾಜಶ್ರೀ ಅಪೇಕ್ಷೆಯಂತೆಯೇ ಹಿಂದೂ ಯುವಕನನ್ನು ಹುಡುಕಿ ಆಕೆ ವಿವಾಹ ಮಾಡಿಕೊಟ್ಟಿದ್ದಾರೆ.