ಕಾರವಾರದಲ್ಲಿ ಕಾರು ಪಾರ್ಕಿಂಗ್ ವಿಚಾರದಲ್ಲಿ ಗಲಾಟೆ ನಡೆದಿದ್ದು, ಪಾರ್ಕಿಂಗ್ ಸಿಬ್ಬಂದಿ ಮೇಲೆ ಇಬ್ಬರು ಯುವಕರು ಹಲ್ಲೆ ನಡೆಸಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಕಾರವಾರ (ಜೂ.18): ಕಾರು ಸರಿಯಾಗಿ ಪಾರ್ಕ್ ಮಾಡುವಂತೆ ತಿಳಿಸಿದ ಕಾರಣಕ್ಕಾಗಿ ಕಾರು ಪಾರ್ಕಿಂಗ್ ಸಿಬ್ಬಂದಿಗೆ ನಡುರಸ್ತೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ಬೆಳಕಿಗೆ ಬಂದಿದೆ. ಗೀತಾಂಜಲಿ ಟಾಕೀಸ್ ಮುಂದೆ ನಡೆದ ಈ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆ ಸಿಕ್ಕಿದ್ದು, ವಿಡಿಯೋ ವೈರಲ್ ಆಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಗೌರೀಶ್ ನಾಯ್ಕ್ ಮತ್ತು ವಿವೇಕ್ ದೇವಾಡಿಗ ಎಂಬ ಯುವಕ ಬಟ್ಟೆ ಖರೀದಿಗಾಗಿ ಕಾರವಾರಕ್ಕೆ ಆಗಮಿಸಿದ್ದರು. ಅವರು ತಮ್ಮ ಕಾರನ್ನು ಗೀತಾಂಜಲಿ ಟಾಕೀಸ್‌ಗೇಟ್ ಮುಂಭಾಗ ಪಾರ್ಕ್ ಮಾಡಿದ್ದರು. ಇದರಿಂದ ಟಾಕೀಸ್‌ನ ಕಾರು ನಿಲುಗಡೆ ವ್ಯವಸ್ಥೆಗೆ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪಾರ್ಕಿಂಗ್ ಸಿಬ್ಬಂದಿಯಾದ ರಾಜೇಶ್ ಅವರು ಕಾರು ಸ್ವಲ್ಪ ಬೇರೆ ಕಡೆ ಪಾರ್ಕ್ ಮಾಡಲು ವಿನಂತಿಸುತ್ತಾರೆ.

ಇದರಿಂದ ಕೋಪಗೊಂಡ ಗ್ರಾಹಕರಿಬ್ಬರೂ 'ನಾವು ಫಿಲ್ಮ್ ನೋಡಲು ಬಂದಿಲ್ಲ, ಬಟ್ಟೆ ಖರೀದಿಗೆ ಬಂದಿದ್ದೇವೆ, ನೀನು ನನಗೆ ಹೇಳಬೇಡ' ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ವಾದ ವಿವಾದ ನಡೆದಿದೆ. ಬಳಿಕ ಕೈ ಕೈ ಮೀಲಾಯಿಸುವ ಹಂತಕ್ಕೆ ಜಗಳ ಶುರುವಾಗಿದೆ. ನಂತರ ರಾಜೇಶ್ ಅವರ ಮೇಲೆ ಇಬ್ಬರು ಯುವಕರು ಸೇರಿ ಹಲ್ಲೆ ನಡೆಸಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ದಾಖಲಾಗಿವೆ. ರಾಜೇಶ್ ಕಾರವಾರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಸ್ತುತ ಪೊಲೀಸ್ ಇಲಾಖೆಯು ವಿಡಿಯೋ ಪುರಾವೆಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಈ ಘಟನೆ ಸಾರ್ವಜನಿಕ ಸ್ಥಳದಲ್ಲಿನ ನಡತೆಯ ಕುರಿತು ಪ್ರಶ್ನೆ ಎಬ್ಬಿಸಿದ್ದು, ಸಾರ್ವಜನಿಕರು ನಿಯಮ ಪಾಲನೆ ಮಾಡಬೇಕಾದ ಅಗತ್ಯತೆಯ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಕಾರು ಪಾರ್ಕಿಂಗ್ ಬಗ್ಗೆ ಎಚ್ಚರಿಕೆ ನೀಡಿದ ಪಾರ್ಕಿಂಗ್ ಸಿಬ್ಬಂದಿಗೆ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.