ಕಾರವಾರ [ಮಾ.14] : ಗೋವಾ ಗಡಿ ಪ್ರದೇಶವಾದ ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಮಾಜಾಳಿ ಕಡಲತೀರದಲ್ಲಿ ನೀಲಿ ಬೆಳಕಿನ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಜನತೆಯಲ್ಲಿ ಸಾಕಷ್ಟುಕುತೂಹಲ, ಬೆರಗು ಹುಟ್ಟಿಸಿವೆ.

ನೀಲಿ ಬೆಳಕಿನ ಅಲೆಗಳು ತೀರಕ್ಕೆ ಬರುವುದನ್ನು ಕಂಡು ಗುರುವಾರ ರಾತ್ರಿ ಮಾಜಾಳಿ ಬೀಚ್‌ನಲ್ಲಿದ್ದ ಜನರು ಅಚ್ಚರಿಪಟ್ಟರು. ಒಂದರ ಹಿಂದೆ ಒಂದರಂತೆ ಬೆಳಕಿನ ಅಲೆಗಳು ಬರುತ್ತಿದ್ದವು. 2017ರಿಂದ ಪ್ರತಿ ವರ್ಷ ಕಾರವಾರದ ಬಳಿ ಕಡಲತೀರದಲ್ಲಿ ಈ ರೀತಿ ಅಲೆಗಳು ಕಾಣಿಸುತ್ತಿವೆ. ಎರಡು ವರ್ಷಗಳ ಹಿಂದೆ ಟಾಗೋರ್‌ ಕಡಲತೀರದ ಅಲೆಗಳು ದಟ್ಟಹಸಿರು ಬಣ್ಣದಲ್ಲಿ ಗೋಚರಿಸಿದ್ದವು. ಕಳೆದ ವರ್ಷ ಚೆನ್ನೈ ಸಮುದ್ರ ತೀರದಲ್ಲೂ ಇದೇ ರೀತಿಯ ನೀಲಿ ಬೆಳಕಿನ ಅಲೆಗಳು ಗೋಚರಿಸಿದ್ದವು.

ಅಲೆಗಳು ಏಕೆ ನೀಲಿ?

ಈ ಬೆರಗಿನ ಹಿಂದಿರುವ ಜೀವಿ ಪಾಚಿ. ಏಕಕೋಶ ಜೀವಿಯಾದ ಇವು ಸಮುದ್ರದ ಮೇಲ್ಮೈನಲ್ಲಿರುತ್ತವೆ. ತಾವಾಗಿಯೇ ಚಲಿಸಲಾರವು. ಅಲೆಗಳ ಹೊಯ್ದಾಟಕ್ಕೆ ಸಿಲುಕಿ ಅಲೆಗಳೊಂದಿಗೆ ತೀರಕ್ಕೆ ಬರುತ್ತವೆ. ಈ ಪಾಚಿ ಸ್ರವಿಸುವ ರಾಸಾಯನಿಕದಿಂದ ಬೆಳಕು ಹೊರಹೊಮ್ಮುತ್ತದೆ. ವೈಜ್ಞಾನಿಕವಾಗಿ ಇದನ್ನು ಡೈನೋಪ್ಲಾಗಲೆಟ್‌ ಎಂದು ಕರೆಯಲಾಗುತ್ತದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗುರುವಾರ ರಾತ್ರಿ ವೇಳೆ ಪಾಚಿ ಹೇರಳವಾಗಿ ಕಡಲತೀರದತ್ತ ಬಂದಿದ್ದೇ ಬೆಳಕಿನ ಅಲೆಗಳಿಗೆ ಕಾರಣ ಎಂದು ಇಲ್ಲಿನ ಕಡಲ ಜೀವ ವಿಜ್ಞಾನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ್‌ ಹರಗಿ ವಿವರಿಸಿದ್ದಾರೆ.