ಹಿಂದಿನ ಸರ್ಕಾರ ಕೆಲಸಕ್ಕೆ ‘ಕೈ’ ಸರ್ಕಾರ ಕೊಕ್ಕೆ, ಈ ಹಿಂದೆ ಅನುಮೋದನೆ ನೀಡಲಾದ ಬಿಬಿಎಂಪಿ ಕಾಮಗಾರಿಗೆ ಕಾರ್ಯಾದೇಶ ನೀಡದಂತೆ ತಡೆ, ಹೊಸ ಸಚಿವರ ಆಗಮನ ಬಳಿಕ ನಿರ್ಧಾರ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಮೇ.21): ರಾಜ್ಯದಲ್ಲಿ ನೂತನವಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅನುಮೋದನೆ ನೀಡಲಾದ ಬಿಬಿಎಂಪಿಯ ಕಾಮಗಾರಿಗೆ ಕಾರ್ಯಾದೇಶ ನೀಡದಂತೆ ತಡೆಹಿಡಿಯಲು ಸೂಚಿಸಲಾಗಿದೆ. ಹೀಗಾಗಿ, ಚುನಾವಣೆ ನೀತಿ ಸಂಹಿತೆ ಮುಕ್ತಾಯಗೊಂಡು ಐದಾರು ದಿನ ಕಳೆದರೂ ಬಿಬಿಎಂಪಿಯ ಯಾವುದೇ ಕಾಮಗಾರಿಗೆ ಹೊಸದಾಗಿ ಕಾರ್ಯಾದೇಶ ನೀಡಿಲ್ಲ.
ಇದಲ್ಲದೇ, ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅನುದಾನ ನೀಡಲಾದ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಂಡು ಸರ್ಕಾರದಿಂದ ಅನುಮೋದನೆ ಪಡೆದು, ಇದೀಗ ಟೆಂಡರ್ ಆಹ್ವಾನಿಸಲು ಬಿಬಿಎಂಪಿ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದರು. ಆ ಯಾವುದೇ ಪ್ರಕ್ರಿಯೆ ನಡೆಸದಂತೆಯೂ ನಿರ್ದೇಶಿಸಲಾಗಿದೆ. ಹೀಗಾಗಿ, ತುರ್ತು ಕಾಮಗಾರಿ ಹೊರತುಪಡಿಸಿ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ನಡೆಸಲು ಪಾಲಿಕೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿಯ ಹಲವು ಕಾಮಗಾರಿಗಳಿಗೆ ಮರು ಟೆಂಡರ್ ಮತ್ತು ಯೋಜನೆ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇಂದಿರಾ ಕ್ಯಾಂಟೀನ್ ಪುನಾರಂಭಕ್ಕೆ ಸಿದ್ಧತೆ..!
ಬೆಂಗಳೂರು ಸಚಿವರೊಂದಿಗೆ ಚರ್ಚೆ:
ರಾಜ್ಯ ಸರ್ಕಾರವು 2023-24ನೇ ಸಾಲಿನ ಆಯವ್ಯಯದಲ್ಲಿ ಬಿಬಿಎಂಪಿಗೆ .3,632 ಕೋಟಿ ಸೇರಿದಂತೆ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ .9 ಸಾವಿರ ಕೋಟಿಗೂ ಅಧಿಕ ಮೊತ್ತದ ಅನುದಾನ ನೀಡಲಾಗಿದೆ. ಮಾ.29ಕ್ಕೆ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೊಂಡ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯ ಆಯವ್ಯಯದಲ್ಲಿ ಘೋಷಣೆ ಮಾಡಿದ ಯಾವುದೇ ಯೋಜನೆಗಳನ್ನು ಅನುಷ್ಠಾನ ಮಾಡಿಲ್ಲ. ನೌಕರರ ವೇತನ ಮತ್ತು ನಿರ್ವಹಣೆ ಹಾಗೂ ತುರ್ತು ಕಾಮಗಾರಿಗಳಿಗೆ ಮೀಸಲಿಟ್ಟಅನುದಾನ ಮಾತ್ರ ಬಳಕೆ ಮಾಡಿಕೊಳ್ಳಲಾಗಿದೆ.
ಈ ಅನುದಾನದ ಹಂಚಿಕೆ ಹಾಗೂ ಕಾಮಗಾರಿಗಳ ಬಗ್ಗೆ ನೂತನ ಸರ್ಕಾರದ ಬೆಂಗಳೂರು ಅಭಿವೃದ್ಧಿ ಸಚಿವರ ಬಳಿ ಚರ್ಚೆ ನಡೆಸಬೇಕಾಗಿದೆ. ಹೀಗಾಗಿ, ಬೆಂಗಳೂರು ಅಭಿವೃದ್ಧಿ ಸಚಿವರ ನೇಮಕ ಬಳಿಕ ಟೆಂಡರ್ ಪ್ರಕ್ರಿಯೆ ನಡೆಸಲು ಹಾಗೂ ಕಾರ್ಯಾದೇಶ ನೀಡಲು ಬಿಬಿಎಂಪಿ ಹಿರಿಯ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಮೇ 30ಕ್ಕೆ ಕ್ರಿಯಾ ಯೋಜನೆ ಸಲ್ಲಿಸಲು ಪಾಲಿಕೆಗೆ ಸೂಚನೆ
ರಾಜ್ಯ ಸರ್ಕಾರವು 2023-24ನೇ ಸಾಲಿನಲ್ಲಿ ಬಿಬಿಎಂಪಿಗೆ ನೀಡಿದ ಅನುದಾನ ಹಾಗೂ ಬಿಬಿಎಂಪಿ ಸ್ವಂತ ಸಂಪನ್ಮೂಲದಲ್ಲಿ ಕೈಗೊಳ್ಳುವುದಕ್ಕೆ ಆಯವ್ಯಯದಲ್ಲಿ ಉದ್ದೇಶಿಸಿದ ಯೋಜನೆಗಳಿಗೆ ಸಂಬಂಧಪಟ್ಟಂತೆ ಮೇ 30ರ ಒಳಗಾಗಿ ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸುವಂತೆ ಪಾಲಿಕೆಯ ಆಯಾ ವಿಭಾಗದ ಮುಖ್ಯಸ್ಥರಿಗೆ ನಿರ್ದೇಶಿಸಲಾಗಿದೆ. ಕ್ರಿಯಾ ಯೋಜನೆಯನ್ನು ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗುತ್ತದೆ. ಹೊಸ ಸರ್ಕಾರದ ಮುಂದಿನ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಯೋಜನಾ ವಿಭಾಗದ ವಿಶೇಷ ಆಯುಕ್ತ ರವೀಂದ್ರ ಮಾಹಿತಿ ನೀಡಿದ್ದಾರೆ.
Bengaluru ಆಸ್ತಿ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್! ಶೇ.5 ರಿಯಾಯಿತಿ ವಿಸ್ತರಣೆ ಸಾಧ್ಯತೆ
4,969 ಕೋಟಿಗೆ ಹಿಂದಿನ ಸರ್ಕಾರ ಅನುಮೋದನೆ
ಕಳೆದ 2022-23ನೇ ಸಾಲಿನಲ್ಲಿ ರಾಜ್ಯ ಸರ್ಕಾರವೂ ಅಮೃತ ನಗರೋತ್ಥಾನ ಯೋಜನೆಯಡಿ ನೀಡಿದ ಅನುದಾನದಲ್ಲಿ .5,850 ಕೋಟಿ ಮೊತ್ತದ 394 ಪ್ಯಾಕೇಜ್‌ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಈ ಪೈಕಿ .4,969 ಕೋಟಿ ಮೊತ್ತದ 354 ಪ್ಯಾಕೇಜ್‌ಗಳಿಗೆ ಹಿಂದಿನ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ಈ ಪೈಕಿ 25 ಪ್ಯಾಕೇಜ್‌ನ ಕಾಮಗಾರಿ ಪೂರ್ಣಗೊಂಡಿದೆ. 306 ಪ್ಯಾಕೇಜ್‌ನ ಕಾಮಗಾರಿ ಪ್ರಗತಿಯಲ್ಲಿವೆ. 36 ಪ್ಯಾಕೇಜ್‌ಗಳ ಕಾಮಗಾರಿ ಆರಂಭಿಸಬೇಕಿದೆ.
ಸರ್ಕಾರ ಬದಲಾವಣೆ ಆಗಿರುವ ಹಿನ್ನೆಲೆಯಲ್ಲಿ ಹೊಸದಾಗಿ ಯಾವುದೇ ಕಾಮಗಾರಿಗಳಿಗೆ ಕಾರ್ಯಾದೇಶ ನೀಡದಂತೆ ಮೌಖಿಕ ನಿರ್ದೇಶನ ಬಂದಿದೆ. ಹೀಗಾಗಿ, ಕಾರ್ಯಾದೇಶವನ್ನು ನೀಡುತ್ತಿಲ್ಲ. ಬೆಂಗಳೂರು ಅಭಿವೃದ್ಧಿ ಸಚಿವರ ನೇಮಕ ಬಳಿಕ ಚರ್ಚೆ ಮಾಡಿ ಅವರ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು ಅಂತ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
