ಸೆಲ್ಫಿ ತಂದಿಟ್ಟ ಫಜೀತಿ: ಕೆರೆಯಲ್ಲಿ ಜಾರಿ ಬಿದ್ದು 12 ಗಂಟೆ ನೀರಲ್ಲಿದ್ದರೂ ಬದುಕಿಬಂದ ಯುವತಿ!
ತುಮಕೂರಿನ ಮೈದಾಳ ಕೆರೆಯಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಜಾರಿ ಬಿದ್ದ ಯುವತಿಯನ್ನು 12 ಗಂಟೆಗಳ ಕಾರ್ಯಾಚರಣೆಯ ನಂತರ ರಕ್ಷಿಸಲಾಯಿತು. ಈಕೆ ಈಗ ಸಾವನ್ನೇ ಗೆದ್ದುಬಂದ ಯುವತಿ ಆಗಿದ್ದಾಳೆ.
ತುಮಕೂರು (ಅ.28): ತುಮಕೂರಿನ ಮೈದಾಳ ಕೆರೆಯ ಬಳಿ ಸೆಲ್ಫಿ ತೆಗೆದುಕೊಳ್ಳುವ ಯತ್ನದಲ್ಲಿ ಕೆರೆಗೆ ಜಾರಿ ಬಿದ್ದ ಯುವತಿಯೊಬ್ಬಳು ಭಯಾನಕ ಅನುಭವದಿಂದ ಪಾರಾಗಿದ್ದಾಳೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಶಿವರಾಂಪುರ ಗ್ರಾಮದ ಸೋಮನಾಥ್ ಅವರ ಪುತ್ರಿ ಹಂಸ (19), ತನ್ನ ಸ್ನೇಹಿತರೊಂದಿಗೆ ಮಂದರಗಿರಿ ಬೆಟ್ಟಕ್ಕೆ ವಿಹಾರಕ್ಕೆಂದು ಹೋಗಿದ್ದರು. ಈ ಪ್ರದೇಶದ ಬಳಿ ಕೋಡಿ ಬಿದ್ದಿದ್ದ ಮೈದಾಳ ಕೆರೆಗೆ ಹೋದಾಗ ಈ ಘಟನೆ ಸಂಭವಿಸಿದೆ.
ಹಂಸ ಕೆರೆಯ ಅಂಚಿಗೆ ಹೋಗಿ, ನೀರಿನ ಹಿನ್ನೆಲೆಯಲ್ಲಿ ನಿಂತುಕೊಂಡು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಳು. ಆದರೆ, ಈ ಸಂದರ್ಭದಲ್ಲಿ ಆಕೆ ಕಾಲು ಜಾರಿ ಬಿದ್ದು ನೀರಿನ ರಭಸಕ್ಕೆ ಕೊಚ್ಚಿಹೋದಳು. ಈ ಘಟನೆ ನಿನ್ನೆ ಸಂಜೆ ಸಂಭವಿಸಿದ್ದು, ಆಕೆಯ ಸ್ನೇಹಿತರು ಮತ್ತು ಸ್ಥಳದಲ್ಲಿದ್ದವರು ಆಕೆ ನೀರಿನಲ್ಲಿ ಕಣ್ಮರೆಯಾದಾಗ ಗಾಬರಿಗೊಂಡರು. ಕೂಡಲೇ ಅಲ್ಲಿದ್ದವರೆಲ್ಲಾ ಯುವತಿ ಹಂಸಳನ್ನು ಹುಡುಕುವುದಕ್ಕೆ ಭಾರಿ ಹರಸಾಹಸ ಪಟ್ಟರು. ಇನ್ನು ಯುವತಿಯ ತಂದೆ, ತಾಯಿ ಹಾಗೂ ಸ್ನೇಹಿತರು ಆಕೆಯನ್ನು ಹುಡುಕುವ ಜೊತೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರಿಗೂ ಕರೆ ಮಾಡಿ ಮಗಳನ್ನು ರಕ್ಷಣೆ ಮಾಡುವಂತೆ ಮನವಿ ಮಾಡಿದ್ದರು.
ಇದನ್ನೂ ಓದಿ: ಬೆಂಗಳೂರು: ಚಿನ್ನದ ಸರ ವಾಪಸ್ ಕೊಟ್ಟ ಪ್ರಾಮಾಣಿಕ ಆಟೋ ಚಾಲಕ
ಕೂಡಲೇ ಸ್ಥಳಕ್ಕೆ ಬಂದ ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಕಾಣೆಯಾದ ಯುವತಿಯನ್ನು ಪತ್ತೆಹಚ್ಚಲು 12 ಗಂಟೆಗಳ ಕಾಲ ನಿರಂತರ ಶೋಧ ನಡೆಸಿದರು. ಅದೃಷ್ಟವಶಾತ್, ಸತತ ಹನ್ನೆರೆಡು ಗಂಟೆಗಳ ನಂತರ, ರಕ್ಷಣಾ ತಂಡವು ಹಂಸಳನ್ನು ಜೀವಂತವಾಗಿ ಪತ್ತೆಹಚ್ಚಿ ರಕ್ಷಿಸುವಲ್ಲಿ ಯಶಸ್ವಿಯಾಯಿತು. ಕಠಿಣ ಪರಿಸ್ಥಿತಿಗಳಲ್ಲಿ ನಡೆಸಿದ ಕಾರ್ಯಾಚರಣೆಯು ರಕ್ಷಣಾ ತಂಡದ ಸಮರ್ಪಣೆಯನ್ನು ಎತ್ತಿ ತೋರಿಸಿದೆ.
ಸುಮಾರು 12 ಗಂಟೆಗಳ ಕಾಲ ನೀರಲ್ಲಿದ್ದ ಯುವತಿ: ಇನ್ನು ಯುವತಿ ಹಂಸ ನಿನ್ನೆ ಸಂಜೆ ವೇಳೆ ಕಾಲು ಜಾರಿ ಕೆರೆ ಕೋಡಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಕಲ್ಲು ಸಂದಿಗಳಲ್ಲಿ ಸಿಕ್ಕಿಕೊಂಡಿದ್ದಳು.ಸತತವಾಗಿ ಸುಮಾರು 12 ಗಂಟೆಗಳ ಕಾಲ ನೀರು ಆಕೆಯ ಮೇಲೆ ಬೀಳುತ್ತಿದ್ದರೂ ಅದನ್ನು ಸಹಿಸಿಕೊಂಡು ಜೀವಂತವಾಗಿದ್ದಾಳೆ. ಸಂಜೆಯಿಂದ ಬೆಳಕಾಗುವವರೆಗೆ ಕೆರೆ ಕೋಡಿಯ ನೀರನ್ನು ನಿಲ್ಲಿಸಲಾಗದೇ ಪರದಾಡಿದ್ದಾರೆ. ಇನ್ನು ಬೆಳಗ್ಗೆ ಸುಮಾರು 10 ಗಂಟೆಯ ನಂತರ ಕೆರೆ ಕೋಡಿಯ ನೀರನ್ನು ಬೇರೆಡೆ ಹರಿಯುವಂತೆ ಡೈವರ್ಟ್ ಮಾಡಿದ್ದಾರೆ.
ಕೆರೆಯ ಕೋಡಿ ನೀರು ತನ್ನ ಮೇಲೆ ನಿರಂತರವಾಗಿ ಬೀಳುತ್ತಿದ್ದರಿಂದ, ಆ ರಭಸದ ನೀರನ್ನು ಬೇಧಿಸಿ ಕಲ್ಲಿನ ಬಂಡೆಯನ್ನು ಹತ್ತಿಕೊಂಡು ಬರಲಾಗದೇ ಇನ್ನೇನು ತನ್ನ ಸಾವು ನಿಶ್ಚಿತವೆಂದು ನಿರ್ಧಾರ ಮಾಡಿದ್ದ ಯುವತಿಗೆ ಕೆರೆ ನೀರು ತನ್ನ ಮೇಲೆ ಬೀಳುವುದು ನಿಂತಾಗ ಬದುಕಿನ ಭರವಸೆ ಬಂದಿದೆ. ಆದರೆ, ಸತತವಾಗಿ ನೀರಿನಲ್ಲಿ ಒದ್ದೆಯಾಗಿ, ಊಟವೂ ಇಲ್ಲದೇ ಬಳಲಿದ್ದ ಯುವತಿ ಕಲ್ಲು ಬಂಡೆಗಳನ್ನು ಹತ್ತಿಕೊಂಡು ಮೇಲೆ ಬರಲಾಗದೇ ಅಲ್ಲಿಯೇ ಕುಳಿತಿದ್ದಾರೆ. ಇನ್ನು ರಕ್ಷಣಾ ತಂಡದವರು ಯುವತಿ ಇದ್ದ ಜಾಗಕ್ಕೆ ತಲುಪಿದಾಗ ಅಲ್ಲಿ ನಡುಗುತ್ತಾ ಕುಳಿತಿದ್ದ ಹಂಸಳಿಗೆ ಜಗತ್ತನ್ನೇ ಗೆದ್ದಷ್ಟು ಖುಷಿಯಾಗಿದ್ದಾಳೆ. ಆದರೆ, ಎದ್ದು ನಡೆಯಲಾಗದೇ ಸಹಾಯಕ್ಕೆ ಅಂಗಲಾಚಿದ್ದಾಳೆ. ಅಲ್ಲಿದ್ದ ರಕ್ಷಣಾ ಸಿಬ್ಬಂದಿ ಆಕೆಯನ್ನು ಎತ್ತಿಕೊಂಡು ಹೊರಗೆ ಕರದುಕೊಂಡು ಬಂದು, ಕಲ್ಲು ಬಂಡೆಗಳಮಧ್ಯದಿಂದ ಹಗ್ಗವನ್ನು ಕಟ್ಟಿ ಮೇಲಕ್ಕೆ ಕರೆತಂದಿದ್ದಾರೆ. ಸುಮಾರು 12 ಗಂಟೆಗಳ ನಿರಂತರ ಕಾರ್ಯಾಚರಣೆಯಿಂದ ಯುವತಿ ಬದುಕಿ ಬಂದಿದ್ದಾಳೆ.
ಈ ಘಟನೆ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಅಲ್ಲಿ ರಕ್ಷಣಾ ಪ್ರಯತ್ನಗಳ ಹೆಚ್ಚಿನ ವಿವರಗಳನ್ನು ದಾಖಲಿಸಲಾಗುತ್ತಿದೆ. ಇನ್ನು ಯುವತಿಯನ್ನು ಈಗ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲಿ ಯುವತಿಗೆ ಚಿಕಿತ್ಸೆ ನೀಡಿದ ನಂತರ ಆಕೆಯನ್ನು ತಂದೆ ತಾಯಿಯೊಂದಿಗೆ ಮನೆಗೆ ಕಳುಹಿಸಲಾಗುತ್ತದೆ. ಈ ಘಟನೆಯ ಬಗ್ಗೆ ಮಾತನಾಡಿದ ತುಮಕೂರು ಪೊಲೀಸ್ ಅಧಿಕಾರಿ, ಜಿಲ್ಲೆಯಲ್ಲಿ 100ಕ್ಕೂ ಅಧಿಕ ಕೆರೆ ಹಾಗೂ ಜಲ ವೀಕ್ಷಣಾ ತಾಣಗಳಿದ್ದು, ಎಲ್ಲೆಡೆ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಸುದೀಪ್ ತಾಯಿ ನಿಧನಕ್ಕೆ ಪ್ರಧಾನಿ ಮೋದಿ ಪತ್ರ ಬರೆದು ಸಂತಾಪ, ನನ್ನ ಹೃದಯ ತಟ್ಟಿದೆ ಎಂದ ಕಿಚ್ಚ