Karnataka weather forecast today: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ. ಮಾಣಿ-ಮೈಸೂರು ಹೆದ್ದಾರಿಗೆ ನೀರು ನುಗ್ಗಿ ವಾಹನ ಸವಾರರು ಪರದಾಡುವಂತಾಯಿತು. ಅಕ್ಟೋಬರ್ 24ರವರೆಗೆ ಕರಾವಳಿಯಲ್ಲಿ ಮಳೆ ಮುಂದುವರಿಯುವ ಮುನ್ಸೂಚನೆ ಇದೆ.

ಮಂಗಳೂರು/ಉಡುಪಿ (ಅ.22): ದಕ್ಷಿಣ ಕನ್ನಡ(Dakshina kannada) ಹಾಗೂ ಉಡುಪಿ(Udupi) ಜಿಲ್ಲೆಯ ಹಲವೆಡೆ ಗುರುವಾರ ಅಪರಾಹ್ನ ಗುಡುಗು ಸಹಿತ ಧಾರಕಾರ ಮಳೆಯಾಗಿದೆ.

ಭಾರೀ ಮಳೆಗೆ ಮಾಣಿ-ಮೈಸೂರು ಹೆದ್ದಾರಿಗೆ ನುಗ್ಗಿದ ನೀರು!

ದ.ಕ. ಜಿಲ್ಲೆಯ ಮಂಗಳೂರು ನಗರ ಸೇರಿದಂತೆ ಕಡಬ, ಪುತ್ತೂರು, ಬೆಳ್ತಂಗಡಿ, ಸುಳ್ಯ ಭಾಗದಲ್ಲಿ ಸಂಜೆ ವೇಳೆಗೆ ಗಾಳಿ, ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಮಂಗಳೂರು ನಗರದ ಕೆಲವೆಡೆ ಸಾದಾರಣ ಮಳೆಯಾಗಿದೆ. ಬಾರೀ ಮಳೆಗೆ ಮಾಣಿ-ಮೈಸೂರು ಹೆದ್ದಾರಿಯ ಸುಳ್ಯ ಸಮೀಪದ ಬೊಳುಬೈಲು ಬಳಿ ಹೆದ್ದಾರಿ ಮಳೆ ನೀರು ನುಗ್ಗಿ ವಾಹನ ಸವಾರರು ತೊಂದರೆ ಅನುಭವಿಸಿದರು. ಕರಾವಳಿ ಜಿಲ್ಲೆಗಳಲ್ಲಿ ಅ.24ರ ತನಕ ಮಳೆ ಮುಂದುವರಿಯುವ ಲಕ್ಷಣಗಳಿವೆ.

ಬಹಳ ದಿನಗಳ ನಂತರ ಉಡುಪಿಯಲ್ಲಿ ಭರ್ಜರಿ ಮಳೆ

ಬಹಳ ದಿನಗಳ ನಂತರ ಉಡುಪಿ ಜಿಲ್ಲೆಯಲ್ಲಿ ಗುರುವಾರ ಸಂಜೆ ಸಿಡಿಲು ಗುಡುಗಿನೊಂದಿಗೆ ಉತ್ತಮ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ಬಿರುಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಈ ಮಳೆ ಸ್ವಲ್ಪ ಸಮಾಧಾನಕ್ಕೆ ಕಾರಣವಾಗಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕಳೆದ ಕೆಲವು ದಿನಗಳಿಂದ ನಿತ್ಯವೂ ಸಂಜೆಯಾಗುತ್ತಿದ್ದಂತೆ ಮೋಡ ಕವಿಯುತಿದ್ದರೂ ಮಳೆಯಾಗುತ್ತಿರಲಿಲ್ಲ, ಬದಲಿಗೆ ಮರುದಿನ ಬಿಸಿಲಿ ಝಳ ಹೆಚ್ಚಾಗುತ್ತಿತ್ತು. ಆದರೆ ಗುರುವಾರ ಸಂಜೆ ಇದ್ದಕ್ಕಿದ್ದಂತೆ ಜೋರಾದ ಮಳೆ ಸುರಿದಿದೆ. ಇಂದು ಕೂಡ ಕರಾವಳಿಯಲ್ಲಿ ಗುಡುಗಮಿಂಚು ಸಹಿತ ಉತ್ತಮ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ, ಜೊತೆ ಸಮುದ್ರ ತೀರದಲ್ಲಿ 35 - 45 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಮುನ್ನೆಚ್ಚರಿಕೆ ನೀಡಿದೆ.