ಮೈಸೂರು, [ಮೇ.08]: ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯು ರಾಜ್ಯದಲ್ಲೇ ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಮತ್ತು ವಾಣಿಜ್ಯ  (science and commerce) ಬೋಧಿಸುವ ಏಕೈಕ ಪದವಿಪೂರ್ವ ಕಾಲೇಜನ್ನು ಪ್ರಾರಂಭಿಸುತ್ತಿದೆ.ಇದು ರಾಜ್ಯಕ್ಕೆ ಮೊದಲ ಕಾಲೇಜು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

 ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ, ಜೀವವಿಜ್ಞಾನ ಮತ್ತು ಗಣಕವಿಜ್ಞಾನ (Computer science) ವಿಷಯವನ್ನು ಕನ್ನಡದಲ್ಲೇ ಇರುವುದು ವಿಶೇಷವಾಗಿದ್ದು, ಇದೇ ಮೇ 19ರಂದು ಮಾಜಿ ಸಿಎಂ ಸಿದ್ದರಾಮಯ್ಯ ಕಾಲೇಜಿನ ತರಗತಿಗಳ ಆರಂಭಕ್ಕೆ ಚಾಲನೆ ನೀಡುವರು ಎಂದು ಸಂಸ್ಥೆಯ ಅಧ್ಯಕ್ಷ P. ಮಲ್ಲೇಶ್‌ ಮಾಹಿತಿ ನೀಡಿದರು.

ಕನ್ನಡದಲ್ಲೇ ಪಠ್ಯ
ಪ್ರಥಮ ವರ್ಷದ ಪಠ್ಯಪುಸ್ತಕಗಳನ್ನು ಈಗಾಗಲೇ ಪದವಿ ಪೂರ್ವ ಶಿಕ್ಷಣ ಇಲಾಖೆ ಕನ್ನಡದಲ್ಲೇ ಸಿದ್ಧಪಡಿಸಿದ್ದು, ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ಕಂಪ್ಯೂಟರ್‌ ಪಠ್ಯಪುಸ್ತಕ ಸಂಸ್ಥೆ ವತಿಯಿಂದಲೇ ಕಂಪ್ಯೂಟರ್ ತಜ್ಞರಿಂದ ಅನುವಾದಿಸಲಾಗಿದೆ. ವಿಜ್ಞಾನವನ್ನು ಕನ್ನಡದಲ್ಲಿ ಕಲಿಸುವ ಕಾಲೇಜು ನಿರ್ಮಾಣ ಮಾಡಬೇಕೆಂಬುದು ಬಹು ದಿನದ ಕನಸಾಗಿತ್ತು. ಇದು ರಾಜ್ಯಕ್ಕೆ ಮೊದಲ ಕಾಲೇಜು. ಈ ರೀತಿಯ ವ್ಯವಸ್ಥೆ ರಾಜ್ಯದ ಯಾವುದೇ ಸರಕಾರಿ, ಖಾಸಗಿ ಕಾಲೇಜುಗಳಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.

10 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ 
ವಿಜ್ಞಾನ ಮತ್ತು ವಾಣಿಜ್ಯ ವಿಭಾಗ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶುಲ್ಕ ನಿಗದಿಪಡಿಸಲಾಗಿದೆ. ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ 10 ಸಾವಿರ ರೂ. ಮತ್ತು ವಾಣಿಜ್ಯ ವಿಷಯ ಆಯ್ಕೆ ಮಾಡಿಕೊಳ್ಳುವವರಿಗೆ 8 ಸಾವಿರ ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.  ಆರ್ಥಿಕವಾಗಿ ಹಿಂದುಳಿದ 10 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ ಎಂದರು.

100 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಅವಕಾಶ
ನಿವೃತ್ತ ಪ್ರಾಶುಂಪಾಲ ಡಾ. ಭದ್ರಪ್ಪ ಎಸ್ ಅವರನ್ನು ಈ ಕಾಲೇಜಿನ ಪ್ರಿನ್ಸಿಪಾಲ್ ಆಗಿ ನೇಮಕ ಮಾಡಲಾಗಿದ್ದು, ಕನ್ನಡದಲ್ಲೇ ವಿಷಯ ಬೋಧಿಸಲು ನಿವೃತ್ತ  ಪರಿಣಿತ ಅಧ್ಯಾಪಕರನ್ನು ನೇಮಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. 

ಸುಸರ್ಜಿತ ಕ್ಲಾಸ್ ರೂಮ್, ವಿಜ್ಞಾನ ಪ್ರಯೋಗಾಲಯ ಮತ್ತು 40 ಕಂಪ್ಯೂಟರ್ ಗಳಿರುವ ಅಧುನಿಕ ಲ್ಯಾಬ್ ಇದ್ದು,  ಒಟ್ಟು 100 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಅವಕಾಶ ಇದ್ದು, ಈ ಪೈಕಿ ಈಗಾಗಲೇ 5 ವಿದ್ಯಾರ್ಥಿಗಳು ಪ್ರವೇಶಾತಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದರು. 

ಒಟ್ಟಿನಲ್ಲಿ ಇಂಗ್ಲೀಷ್ ಬರುವುದಿಲ್ಲ. ಆದ್ರೂ ಸೈನ್ಸ್ ಮಾಡಬೇಕು ಎನ್ನುವ ವಿದ್ಯಾರ್ಥಿಗಳಿಗೆ ಈ ಕಾಲೇಜು ಉತ್ತಮ ವೇದಿಕೆಯಾಗಿರುವುದಂತೂ ನಿಜಕ್ಕೂ ಸಂತಸ ವಿಷಯ.