Asianet Suvarna News Asianet Suvarna News

ಭಾರೀ ಮಳೆ: ಅಪಾಯಮಟ್ಟದಲ್ಲಿ ಕಾಳಿ, ಗಂಗಾವಳಿ, ಅಘನಾಶಿನಿ ನದಿಗಳು!

ಭಾರಿ ಮಳೆಯಿಂದ ಕಾಳಿ, ಗಂಗಾವಳಿ, ಅಘನಾಶಿನಿ ನದಿಗಳು ಅಪಾಯದ ಮಟ್ಟದಲ್ಲಿ ಪ್ರವಹಿಸುತ್ತಿವೆ. ಕದ್ರಾ ಜಲಾಶಯದಿಂದ ನಿರಂತರವಾಗಿ ನೀರನ್ನು ಹೊರಬಿಡಲಾಗುತ್ತಿದೆ. ನದಿ ತೀರದಲ್ಲಿ ಪ್ರವಾಹ ಭೀತಿ ತಲೆದೋರಿದೆ. ಕೆಲವೆಡೆ ಮನೆಗಳು ಕುಸಿದಿವೆ. ಇನ್ನು ಕೆಲವೆಡೆ ಸೇತುವೆ ಮುಳುಗಿ ಹಾಗೂ ಮರಗಳು ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಉತ್ತರ ಕನ್ನಡ ಜಲಮಯವಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ.

Karnataka rains heavy rain uttarakarnataka flood anxiety rav
Author
First Published Jul 24, 2023, 10:07 AM IST | Last Updated Jul 24, 2023, 10:07 AM IST

ಕಾರವಾರ (ಜು.24) :  ಭಾರಿ ಮಳೆಯಿಂದ ಕಾಳಿ, ಗಂಗಾವಳಿ, ಅಘನಾಶಿನಿ ನದಿಗಳು ಅಪಾಯದ ಮಟ್ಟದಲ್ಲಿ ಪ್ರವಹಿಸುತ್ತಿವೆ. ಕದ್ರಾ ಜಲಾಶಯದಿಂದ ನಿರಂತರವಾಗಿ ನೀರನ್ನು ಹೊರಬಿಡಲಾಗುತ್ತಿದೆ. ನದಿ ತೀರದಲ್ಲಿ ಪ್ರವಾಹ ಭೀತಿ ತಲೆದೋರಿದೆ. ಕೆಲವೆಡೆ ಮನೆಗಳು ಕುಸಿದಿವೆ. ಇನ್ನು ಕೆಲವೆಡೆ ಸೇತುವೆ ಮುಳುಗಿ ಹಾಗೂ ಮರಗಳು ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಉತ್ತರ ಕನ್ನಡ ಜಲಮಯವಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ.

ಕದ್ರಾ ಜಲಾಶಯದಿಂದ ಶನಿವಾರ ಬೆಳಗ್ಗೆಯಿಂದ ಸತತವಾಗಿ ನೀರನ್ನು ಹೊರಬಿಡಲಾಗುತ್ತಿದೆ. ಬೊಮ್ಮನಳ್ಳಿ ಹಾಗೂ ಕೊಡಸಳ್ಳಿ ಜಲಾಶಯಗಳಿಂದಲೂ ನೀರನ್ನು ಹೊರಬಿಡಲಾಗಿದೆ. ಇದರಿಂದ ಕಾಳಿ ನದಿ ತೀರದಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಗಂಗಾವಳಿ ನದಿಯಲ್ಲೂ ನೀರಿನ ಮಟ್ಟದಲ್ಲಿ ಭಾರೀ ಏರಿಕೆಯಾಗಿದೆ. ಮಳೆ ಹೆಚ್ಚಿದಲ್ಲಿ ಅದಕ್ಕೆ ಅನುಸಾರವಾಗಿ ನೀರನ್ನು ಹೊರ ಬಿಡುವ ಪ್ರಮಾಣ ಹೆಚ್ಚುವುದರಿಂದ ಈ ನದಿಗುಂಟ ಜನತೆ ನಿದ್ದೆಗೆಡುವಂತಾಗಿದೆ.

ಚಿಕ್ಕಮಗಳೂರಲ್ಲಿ ಮಳೆ ಆರ್ಭಟ: ರಸ್ತೆ ಸೇತುವೆಗಳ ಸಂಪರ್ಕ ಕಡಿತ, ಪ್ರವಾಹದ ಭೀತಿ

ಸಿದ್ದಾಪುರ ಹಾಗೂ ಶಿರಸಿಯಲ್ಲಿ ವ್ಯಾಪಕ ಮಳೆಯಿಂದ ಅಘನಾಶಿನಿ ಹಾಗೂ ವರದಾ ನದಿಯಲ್ಲಿ ಪ್ರವಾಹ ಭೀತಿ ಹೆಚ್ಚಿದೆ. ನದಿಯ ಇಕ್ಕೆಲಗಳಲ್ಲಿನ ಜನತೆ ಆತಂಕಗೊಂಡಿದ್ದಾರೆ.

ಹೊನ್ನಾವರದಲ್ಲಿ ಗುಂಡಬಾಳ ಹಾಗೂ ಭಾಸ್ಕೇರಿ ಹೊಳೆಗಳು ಅಪಾಯದ ಮಟ್ಟದಲ್ಲಿ ಪ್ರವಹಿಸುತ್ತಿವೆ. ಹೊಲ-ಗದ್ದೆಗಳು, ಅಡಕೆ ತೆಂಗಿನ ತೋಟಗಳು ಜಲಾವೃತವಾಗಿವೆ. ಈ ಎರಡೂ ಹೊಳೆಗಳ ಇಕ್ಕೆಲಗಳಲ್ಲಿ ನೀರು ಮನೆಗೆ ನುಗ್ಗುವ ಆತಂಕ ಎದುರಾಗಿದೆ.

ಶಿರಸಿಯ ಹನಮಂತಿಯಲ್ಲಿ ಮನೆಯೊಂದರ ಮೇಲೆ ಮರ ಉರುಳಿ ಶಿಶುವೊಂದು ಗಾಯಗೊಂಡಿದೆ. ಮನೆಗೂ ಹಾನಿ ಉಂಟಾಗಿದೆ. ಗಣೇಶ ನಗರದಲ್ಲಿ ಖೈರುಂಬಿ ಮೊಹಮ್ಮದ ಸಾಬ್‌ ಅವರ ಮನೆ ಗೋಡೆ ಕುಸಿದು ಹಾನಿ ಉಂಟಾಗಿದೆ. ಕಲ್ಗುಂಡಿಕೊಪ್ಪದಲ್ಲಿ ಸಾರ್ವಜನಿಕ ಬಾವಿ ಕುಸಿದಿದೆ.

ಜೋಯಿಡಾ ತಾಲೂಕಿನ ಕ್ಯಾಸೆಲರಾಕ್‌ ಹಾಗೂ ಅನಮೋಡ ನಡುವಣ ಸೇತುವೆ ಜಲಾವೃತವಾಗಿ ಸಂಪರ್ಕ ಕಡಿತಗೊಂಡಿದೆ. ಜೋಯಿಡಾದ ಹಲವೆಡೆ ಶನಿವಾರ ರಾತ್ರಿಯಿಂದ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

ಭಟ್ಕಳದಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಹಲವೆಡೆ ಮರಗಳು ಉರುಳಿ 18 ವಿದ್ಯುತ್‌ ಕಂಬಗಳು ಬಿದ್ದಿವೆ. ಎರಡು ಟ್ರಾನ್ಸಫಾರ್ಮಾರ್‌ಗಳು ಕೆಟ್ಟಿವೆ. ಹದ್ಲೂರಿನಲ್ಲಿ ಅಡಕೆ ತೋಟ ಜಲಾವೃತವಾಗಿದೆ.

ಯಲ್ಲಾಪುರದಲ್ಲೂ ಬೇಡ್ತಿ ನದಿ ಉಕ್ಕೇರುತ್ತಿದೆ. ಭಾರಿ ಮಳೆ, ಪ್ರವಾಹ ಹಿನ್ನೆಲೆಯಲ್ಲಿ ಸಾತೊಡ್ಡಿ ಜಲಪಾತಕ್ಕೆ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದೆ.

ಮುಂಡಗೋಡದಲ್ಲಿ ಸತತ ಮಳೆಯಿಂದ ಹೊಲಗದ್ದೆಗಳು ಜಲಾವೃತವಾಗಿವೆ. ಪಟ್ಟಣದ ಕಿಲ್ಲೆ ಓಣಿಯಲ್ಲಿ ಮನೆಯೊಂದು ಕುಸಿದಿದೆ. ಇಂದೂರ ಗ್ರಾಪಂ ವ್ಯಾಪ್ತಿಯಲ್ಲಿ ಅಂಗನವಾಡಿ ಬಿದ್ದಿದೆ.

ಕುಮಟಾದ ಉಪ್ಪಿನಗಣಪತಿಯ ಗುಮ್ಮನಕೇರಿಯಲ್ಲಿ ಆಲದ ಮರವೊಂದು ಎರಡು ಮನೆಗಳ ಮೇಲೆ ಉರುಳಿ ಮನೆ ಕುಸಿದಿದೆ. ಮನೆಯವರು ಅಪಾಯದಿಂದ ಪಾರಾಗಿದ್ದಾರೆ.

ಹಳಿಯಾಳದಲ್ಲಿ ತಟ್ಟಿಹಳ್ಳ ಅಪಾಯದ ಮಟ್ಟದಲ್ಲಿ ಪ್ರವಹಿಸುತ್ತಿದೆ. ಯಡೋಗಾದಲ್ಲಿ ಸೇತುವೆ ಜಲಾವೃತವಾಗಿದೆ. ಕೆಲವು ಊರುಗಳು ಸಂಪರ್ಕ ಕಡಿದುಕೊಂಡಿವೆ.

ದಿನವಿಡಿ ಮೋಡ ಕವಿದ ವಾತಾವರಣದೊಂದಿಗೆ ಮಳೆ ಸುರಿಯುತ್ತಿದೆ. ಆಗಾಗ ಭಾರಿ ಮಳೆ ಬೀಳುತ್ತಿದೆ.

ಮಳೆ ಕೊರತೆ ನಡುವೆಯೂ ಜಲಾಶಯ ಭರ್ತಿ, ಈ ವರ್ಷ ತುಂಬಿದ ರಾಜ್ಯದ ಮೊಟ್ಟ ಮೊದಲ ಡ್ಯಾಂಗೆ ಬಾಗಿನ ಅರ್ಪಣೆ

ಮಳೆಯ ವಿವರ:

ಶನಿವಾರ ಬೆಳಗ್ಗೆ 8 ಗಂಟೆಯಿಂದ ಆನಂತರದ 24 ಗಂಟೆಗಳಲ್ಲಿ ವಿವಿಧೆಡೆ ಉಂಟಾದ ಮಳೆಯ ಪ್ರಮಾಣ ಮಿ.ಮೀ.ಗಳಲ್ಲಿ ಹೀಗಿದೆ.

ಅಂಕೋಲಾ 61.0, ಭಟ್ಕಳ 133.4, ದಾಂಡೇಲಿ 112.4, ಹಳಿಯಾಳ 104.2, ಹೊನ್ನಾವರ 74.1, ಜೋಯಿಡಾ 90.4, ಕಾರವಾರ 77.9, ಕುಮಟಾ 117.6, ಮುಂಡಗೋಡ 32.4, ಸಿದ್ಧಾಪುರ 126.4, ಶಿರಸಿ 85.0 ಹಾಗೂ ಯಲ್ಲಾಪುರ 105.4 ಮಿ.ಮೀ. ಮಳೆಯಾಗಿದೆ.

Latest Videos
Follow Us:
Download App:
  • android
  • ios