ಬೆಂಗಳೂರು (ನ.25):  ಗೃಹ ಬಳಕೆ ಸಾಬೂನು ಮತ್ತು ಸೋಪಿನ ಪುಡಿಯಲ್ಲಿರುವ ರಂಜಕದ ಪ್ರಮಾಣವನ್ನು ಬ್ಯುರೋ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್‌ (ಬಿಐಎಸ್‌) ಪರಿಷ್ಕೃತಗೊಳಿಸಿರುವ ನಿಗದಿಯನ್ನೇ ರಾಜ್ಯದಲ್ಲಿಯೂ ಪಾಲಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸೂಚಿಸಿದೆ.

ಬೆಳ್ಳೂಂದೂರು, ವರ್ತೂರು ಮತ್ತು ಆಗ್ರಾ ಕೆರೆಗಳ ವಿಚಾರವಾಗಿ ರಂಜಕದ ಅಂಶಗಳನ್ನು ಕಡಿಮೆ ಮಾಡುವ ಕುರಿತು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ತೀರ್ಪು ನೀಡಿತ್ತು. ಈ ತೀರ್ಪಿನ ಪ್ರಕಾರ ಬಿಐಎಸ್‌ ಸಾಬೂನು ಪುಡಿಯಲ್ಲಿರುವ ರಂಜಕದ ಪ್ರಮಾಣ ಗ್ರೇಡ್‌-1,2 ಮತ್ತು 3ರಲ್ಲಿ ಶೇ.2.5ರಷ್ಟುಮೀರಬಾರದು. ಸೋಪಿನಲ್ಲಿ ಗ್ರೇಡ್‌-1ರಲ್ಲಿ ಶೇ.5, ಗ್ರೇಡ್‌-2ರಲ್ಲಿ ಶೇ.8 ಮತ್ತು ಗ್ರೇಡ್‌-3 ಮತ್ತು 4ರಲ್ಲಿ ಶೇ.5 ಮೀರಬಾರದು ಎಂದು ಸೂಚಿಸಿದೆ.

ಎಲೆಕ್ಟ್ರಿಕ್‌ ವಾಹನಗಳ ಹೆಚ್ಚು ಬಳಸಿ: ಸಾರಿಗೆ ಸಚಿವ ಲಕ್ಷ್ಮಣ್‌ ಸವದಿ .

ಬೆಳ್ಳಂದೂರು ಕೆರೆ ಕಾರ್ಖಾನೆಗಳ ತ್ಯಾಜ್ಯ ನೀರು, ಕಾರು, ಬಸ್ಸುಗಳು, ಬೈಕ್‌ ಸೇರಿದಂತೆ ವಿವಿಧ ವಾಹನಗಳ ಸರ್ವೀಸ್ ಸ್ಟೇಷನ್‌ಗಳ ಮಲಿನ ನೀರು ಒಳಗೊಂಡಂತೆ ರಾಸಾಯನಿಕಗಳಿಂದ ಕೆರೆಗಳು ಮಾಲಿನ್ಯವಾಗುವ ಜೊತೆಗೆ ಜಲಚರಗಳ ಅವನತಿಗೂ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಬಿಐಎಸ್‌ ಸಾಬೂನು ಹಾಗೂ ಡಿಟರ್ಜೆಂಟ್‌ಗಳಲ್ಲಿರುವ ರಂಜಕದ ಅಂಶಗಳನ್ನು ಸೀಮಿತಗೊಳಿಸಿದೆ.

ಎನ್‌ಜಿಟಿ ಸೂಚನೆ ಏನು?  ಬಟ್ಟೆಸ್ವಚ್ಛಗೊಳಿಸುವುದಕ್ಕಾಗಿ ಬಳಸುವ ಸಾಬೂನು ಹಾಗೂ ಸೋಪಿನ ಪುಡಿಯಲ್ಲಿರುವ ರಂಜಕದ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿದೆ. ರಂಜಕ ಮಿಶ್ರಿತ ಅಂಶಗಳು ಜಲಾಯನ ಪ್ರದೇಶಗಳಿಗೆ ಸೇರಿ ಕೆರೆ, ಕುಂಟೆಗಳಲ್ಲಿರುವ ನೀರು ಮಾಲಿನ್ಯವಾಗುತ್ತಿದೆ. ಇದರಿಂದ ಕೆರೆಗಳಲ್ಲಿ ಪಾಚಿ ಹೆಚ್ಚಳವಾಗುವುದು, ಜಲಚರಗಳಿಗೆ ಜೀವಕ್ಕೆ ಕಂಟಕವಾಗುತ್ತಿದೆ. ಇದರಿಂದ ಸಾಬೂನುಗಳಲ್ಲಿರುವ ರಂಜಕ ಪ್ರಮಾಣ ಕಡಿಮೆ ಮಾಡಲು ಬಿಐಎಸ್‌ಗೆ ಎನ್‌ಜಿಟಿ ಆದೇಶ ಮಾಡಿತ್ತು.

ಆ ಆದೇಶದ ಅನುಸಾರ ಇದೀಗ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಗೃಹ ಬಳಕೆ ಸಾಬೂನು ಮತ್ತು ಸೋಪಿನ ಪುಡಿಯಲ್ಲಿ ರಂಜಕದ ಪ್ರಮಾಣವನ್ನು ಪರಿಷ್ಕೃತಗೊಳಿಸಿ ಸಾರ್ವಜನಿಕ ಪ್ರಕಟಣೆ ನೀಡಿದೆ.