Karnataka Politics : ಭಯೋತ್ಪಾದಕರ ಬಗ್ಗೆ ಕಾಂಗ್ರೆಸ್ ಸಹಾನುಭೂತಿ : CM
ಭಯೋತ್ಪಾದಕರ ಬಗ್ಗೆ ಕಾಂಗ್ರೆಸ್ ಹಿಂದಿನಿಂದಲೂ ಸಹಾನುಭೂತಿ ತೋರಿಸಿಕೊಂಡೇ ಬರುತ್ತಿದೆ. ಇಂತಹವರಿಗೆ ಮತ್ತೆ ಅಧಿಕಾರ ಕೊಟ್ಟರೆ ರಾಜ್ಯದ ಗತಿ ಏನಾಗಲಿದೆ ಎನ್ನುವುದನ್ನು ಆಲೋಚಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮದ್ದೂರು (ಡೊ. 17): ಭಯೋತ್ಪಾದಕರ ಬಗ್ಗೆ ಕಾಂಗ್ರೆಸ್ ಹಿಂದಿನಿಂದಲೂ ಸಹಾನುಭೂತಿ ತೋರಿಸಿಕೊಂಡೇ ಬರುತ್ತಿದೆ. ಇಂತಹವರಿಗೆ ಮತ್ತೆ ಅಧಿಕಾರ ಕೊಟ್ಟರೆ ರಾಜ್ಯದ ಗತಿ ಏನಾಗಲಿದೆ ಎನ್ನುವುದನ್ನು ಆಲೋಚಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ತಾಲೂಕು ಬಿಜೆಪಿ (BJP) ಘಟಕದ ವತಿಯಿಂದ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಉದ್ಘಾಟಿಸಿ ಮಾತನಾಡಿ, ಕುಕ್ಕರ್ ಬಾಂಬ್ ಸ್ಫೋಟ ಆಕಸ್ಮಿಕ ಎಂದು ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ. ಕುಕ್ಕರ್‌ನಲ್ಲಿ ಅನ್ನ ಬೇಯಿಸುತ್ತಾರೆ. ಆದರೆ, ಅದರಲ್ಲಿ ಬಾಂಬ್ ಇಟ್ಟಿದ್ದರು. ಬೇರೆ ಹೆಸರಿನಲ್ಲಿ ಹಲವೆಡೆ ಸಂಚು ರೂಪಿಸಿದ್ದರು. ಅಂತಹವರನ್ನು ಸಾಕ್ಷಿ ಸಮೇತ ಹಿಡಿದರೆ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡುತ್ತಾರೆ ಎಂದು ಜರಿದರು.
ಹಿಂದುತ್ವದ ಬಗ್ಗೆ ಮಾತನಾಡಿದರೆ ಕಾಂಗ್ರೆಸ್ ಆಕ್ಷೇಪ ಮಾಡುತ್ತದೆ. ಈ ದೇಶದ ಅಖಂಡತೆಗೆ ಧಕ್ಕೆಯಾದಾಗ ಅದರ ವಿರುದ್ಧ ನಿಂತಿದ್ದು ಮೋದಿ. ಟೆರರಿಸ್ಟ್‌ಗಳಿಗೆ ಸಹಾನುಭೂತಿ ತೋರುವ ಕಾಂಗ್ರೆಸ್‌ನವರಿಂದ ರಾಷ್ಟ್ರ ರಕ್ಷಣೆ ಅಸಾಧ್ಯ. ದೇಶದ ಭದ್ರತೆ, ಅಖಂಡತೆಗೆ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಶೀಘ್ರದಲ್ಲೇ ಮಂಡ್ಯಕ್ಕೆ ಮೋದಿ: ಮಂಡ್ಯಕ್ಕೆ ಕೆಲವೇ ದಿನಗಳಲ್ಲಿ ಪ್ರಧಾನಿ ಮೋದಿ ಬರಲಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪರ ವಾತಾವರಣವಿದೆ. ಕಾಂಗ್ರೆಸ್, ಜೆಡಿಎಸ್ ಮಂಡ್ಯದಲ್ಲಿ ಆಡಳಿತ ಮಾಡಿದೆ. ಸಕ್ಕರೆ ನಾಡಿನ ಹೆಮ್ಮೆಯ ಮೈಷುಗರ್ ಕಾರ್ಖಾನೆ ಮುಚ್ಚಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ಎಂದು ಟೀಕಿಸಿದರು.
ಮಂಡ್ಯ ರೈತರು ಮೈಸೂರಿಗೆ ಕಬ್ಬು ರವಾನಿಸುವ ಪರಿಸ್ಥಿತಿ ನಿರ್ಮಾಣ ಮಾಡಿದರು. ಮುಚ್ಚಿದ್ದ ಮೈಷುಗರ್ ಕಾರ್ಖಾನೆಯನ್ನು ಆರಂಭಿಸಲು ಮತ್ತೆ ಬಿಜೆಪಿ ಸರ್ಕಾರವೇ ಬರಬೇಕಾಯಿತು. ಈಗ ಕಾರ್ಖಾನೆಯೂ ನಡೆಯುತ್ತಿದೆ, ರೈತರಿಗೆ ಹಣ ಪಾವತಿಯೂ ಆಗುತ್ತಿದೆ. ನೀವು ಅಧಿಕಾರ ಕೊಟ್ಟವರು ಈ ಕೆಲಸ ಏಕೆ ಮಾಡಲಿಲ್ಲ, ಕಾರ್ಖಾನೆ ಪುನಾರಂಭಿಸಲು ಸಾಧ್ಯವೇ ಇಲ್ಲ ಎಂದಿದ್ದರು. ಯಾವುದು ಅಸಾಧ್ಯವೋ ಅದನ್ನ ಬಿಜೆಪಿ ಮಾಡಿ ತೋರಿಸಿದೆ ಎಂದು ನುಡಿದರು.
ಅಧಿಕಾರದಲ್ಲಿದ್ದಾರೆ ಮರೆಯುವರು: ಅಧಿಕಾರದಲ್ಲಿದ್ದಾಗ ಮಂಡ್ಯ ಜನರನ್ನು ಮರೆಯುವ ಕೆಲಸ ಮಾಡುತ್ತಾರೆ. ಚುನಾವಣೆ ಬಂದಾಗ ನೆನಪಿಸಿಕೊಂಡು ಓಡೋಡಿ ಬರುತ್ತಾರೆ. ಕಾವೇರಿ ಹೋರಾಟ ನಡೆಯುವಾಗ ಸಿಎಂ ಆಗಿದ್ದ ಸಿದ್ದರಾಮಯ್ಯ ಮಂಡ್ಯ ಕಡೆ ತಿರುಗಿನೋಡಲಿಲ್ಲ. ಕಾಂಗ್ರೆಸ್ ಆಡಳಿತದಲ್ಲೇ ಅತಿ ಹೆಚ್ಚು ರೈತರು ಮಂಡ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡರೂ ಮೃತ ರೈತರಿಗೆ ಪರಿಹಾರ ನೀಡುವ ಕೆಲಸವನ್ನು ಸಿದ್ದರಾಮಯ್ಯ ಮಾಡಲಿಲ್ಲ ಎಂದು ಟೀಕಿಸಿದರು.
ಯಡಿಯೂರಪ್ಪನವರ ಹುಟ್ಟೂರು ಮಂಡ್ಯದಲ್ಲಿ ಬಿಜೆಪಿ ಕನಿಷ್ಠ 5 ಸ್ಥಾನಗಳಲ್ಲಿ ಗೆಲ್ಲಬೇಕು. ಮಂಡ್ಯದಲ್ಲಿ ಬಿಜೆಪಿಗೆ ಶಕ್ತಿ ನೀಡಿದರೆ ಸ್ಪಷ್ಟಬಹುಮತದೊಂದಿಗೆ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ. ಮುಂದಿನ 25 ವರ್ಷ ಬಿಜೆಪಿ ಅಮೃತ ರಾಜ್ಯದಲ್ಲಿ ಆರಂಭವಾಗಲಿದೆ ಎಂದು ನುಡಿದರು.
ಗಂಭೀರವಾಗಿ ಪರಿಗಣನೆ: 2023ರ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಮದ್ದೂರಿನಲ್ಲಿ ಎಸ್.ಪಿ.ಸ್ವಾಮಿ ಅವರು ಪಕ್ಷವನ್ನು ಸದೃಢವಾಗಿ ಕಟ್ಟಿಬೆಳೆಸಿದ್ದಾರೆ. ಮದ್ದೂರಿನಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು. ಇಷ್ಟುದೊಡ್ಡ ಸಂಖ್ಯೆಯಲ್ಲಿ ಬಂದ ನೀವು ನನ್ನ ಮನಸ್ಸನ್ನು ಗೆದ್ದಿದ್ದೀರಿ. ನಿಮಗೆ ಚಿರಋುಣಿ. ಮಂಡ್ಯ ಎಂದರೆ ಇಂಡಿಯಾ ಎಂಬ ಮಾತಿದೆ. ಮಂಡ್ಯದಲ್ಲಿ ಬಿಜೆಪಿ ಬಾವುಟ ಹಾರಿದರೆ ಕರ್ನಾಟಕ ಮತ್ತು ದೇಶದಲ್ಲಿ ಬಿಜೆಪಿ ಬಾವುಟ ಹಾರಲಿದೆ. ಬನ್ನಿ ಬದಲಾವಣೆ ತಂದು ಅಭಿವೃದ್ಧಿ ಮಾಡೋಣ. ನವ ಕರ್ನಾಟಕ, ನವ ಭಾರತ ನಿರ್ಮಾಣ ಮಾಡೋಣ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎನ್ .ರವಿಕುಮಾರ್ , ಸಚಿವರಾದ ನಾರಾಯಣಗೌಡ, ಕೆ.ಗೋಪಾಲಯ್ಯ, ಮಾಜಿ ಸಚಿವ ಬಿ.ಸೋಮಶೇಖರ್, ಬಿಜೆಪಿ ಜಿಲ್ಲಾ ಉಸ್ತುವಾರಿ ಜಗದೀಶ್ ಈರೇಮನೆ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಮುಖಂಡರಾದ ಡಾ.ಸಿದ್ಧರಾಮಯ್ಯ, ಎಸ್ .ಪಿ.ಸ್ವಾಮಿ, ತಾಲೂಕು ಅಧ್ಯಕ್ಷ ಪಣ್ಣೇದೊಡ್ಡಿ ರಘು, ಹನುಮಂತೇಗೌಡ, ಮನುಕುಮಾರ್, ಮನ್ಮುಲ್ ನಿರ್ದೇಶಕಿ ರೂಪಾ, ಜಿಪಂ ಮಾಜಿ ಸದಸ್ಯರಾದ ಬೋರಯ್ಯ, ಮರಿಹೆಗಡೆ, ಹಾಗಲಹಳ್ಳಿ ರಘು, ಸಾದೊಳಲು ಕೃಷ್ಣೇಗೌಡ, ರೈತ ಮೋರ್ಚಾದ ಶಿವದಾಸ್ ಸತೀಶ್ ಹಲವರು ಇದ್ದರು.
ಮದ್ದೂರು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಭಾರೀ ಗಾತ್ರದ ಹೂವಿನ ಹಾರ ಹಾಕಿ ಸನ್ಮಾನಿಸಲಾಯಿತು.