ಕಮಲನಗರ(ಏ.16): ಬಳ್ಳಾರಿ ಮೂಲದ 22 ಯುವಕರ ತಂಡವೊಂದು ಕೆಲಸವಿಲ್ಲದೆ ಮತ್ತು ಹೊಟ್ಟೆಗೆ ಅನ್ನ ಇಲ್ಲದೇ ಪ್ರಯಾಸಪಟ್ಟು ರೈಲು ಹಳಿ ಮೂಲಕ ಕಾಲ್ನಡಿಗೆಯಲ್ಲಿ ಕಮಲನಗರ ತಾಲೂಕಿನ ಡಿಗ್ಗಿ ಗ್ರಾಮ ಸೇರಿ ನೆಮ್ಮದಿಯ ಉಸಿರು ಬಿಡುವಷ್ಟರಲ್ಲಿಯೇ ಪಟ್ಟಣದ ಅಧಿಕಾರಿಗಳು ಅವರನ್ನು ಮತ್ತೆ ರಾಜ್ಯದ ಗಡಿ ದಾಟಿಸಿದ ಘಟನೆ ಜರುಗಿದೆ.

ಲಾತೂರ್, ಮುಂಬೈ, ಪುಣೆಯಿಂದ ಯಾರೇ ಬಂದರೂ ಜಿಲ್ಲೆಯೊಳಗೆ ಬರದಂತೆ ನೋಡಿಕೊಳ್ಳಿ ಎಂದು ಜಿಲ್ಲಾಡಳಿತ ಸ್ಪಷ್ಟ ಆದೇಶ ನೀಡಿದ್ದರಿಂದ ಕಮಲನಗರ ಅಧಿಕಾರಿಗಳು ಹಾಗೂ ಇಲ್ಲಿನ ಪೊಲೀಸರು 22 ಯುವಕರ ತಂಡವನ್ನು ಕಮಲನಗರ ಗಡಿ ದಾಟಿಸಿ ಬಿಟ್ಟು ಬಂದಿದ್ದಾರೆ.

ಲಾಕ್‌ಡೌನ್‌ ಎಫೆಕ್ಟ್‌: 'ಕೈಯಲ್ಲಿ ದುಡ್ಡಿಲ್ಲಾ, ಬಾಡಿಗೆ ಮನ್ನಾ ಮಾಡಿ ಮಾನವೀಯತೆ ತೋರಿ'

ತಹಶೀಲ್ದಾರ್ ಕಚೇರಿ ಸಿಬ್ಬಂದಿ, ಬಿಇಒ ಶಿವಕಾಂತ, ಸಿಪಿಐ ಪಾಲಕ್ಷಯ್ಯ ಹಿರೇಮಠ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕೂಲಿ ಮಾಡಿ ಬದುಕುವ ಬಡ ಕುಟುಂಬದ ಯುವಕರು ಗ್ರಾಮ ಅಥವಾ ಪಟ್ಟಣದ ‘ವನವೊಂದರಲ್ಲಿ ಇರಿಸಿ 14 ದಿನಗಳ ಗೃಹ ನಿರ್ಬಂಧ ನವೀಕರಿಸಿ ಎಂದು ಗ್ರಾಮಸ್ಥರು ಹಾಗೂ ಯುವಕರು ಮನವಿ ಮಾಡಿದರೂ ಅಧಿಕಾರಿಗಳು ಅನಿವಾರ್ಯ ಸ್ಥಿತಿಯಲ್ಲಿದ್ದರು.

ಮೂಲತಃ ಕರ್ನಾಟಕದವರೇ ಆದ ನಮ್ಮೆಲ್ಲರನ್ನೂ ಕರ್ನಾಟಕ ಗಡಿಯಿಂದ ಹೊರಗೆ ಕಳಿಸಿರುವುದು ಸರಿಯಲ್ಲ ಎಂದು ಯುವಕ ಮಾರುತಿ ಬೇಸರ ವ್ಯಕ್ತಪಡಿಸಿದರು. 22 ಯುವಕರ ತಂಡವು ಸದ್ಯ ಉದಗೀರ್ನ ವಿವೇಕಾನಂದ ಕಾಲೇಜ್‌ನಲ್ಲಿ ಗೃಹ ನಿರ್ಬಂಧಕ್ಕೆ ಒಳಪಡಿಸುವಂತೆ ಮಹಾರಾಷ್ಟ್ರದ ಪೊಲೀಸರು ಸೂಚಿಸಿದ್ದಾರೆಂದು ತಿಳಿದುಬಂದಿದೆ.

ಬಹುತೇಕ ಜನರು ಮಹಾರಾಷ್ಟ್ರದಿಂದ ರೈಲು ಹಳಿ ಮೂಲಕ ಕರ್ನಾಟಕ ಗಡಿ ದಾಟುತ್ತಿರುವುದರಿಂದ ಭಾಲ್ಕಿ ರೈಲ್ವೆ ಪೊಲೀಸ್ ಅಧಿಕಾರಿಗಳೊಂದಿಗೆ ರಾವಣಗಾಂವ್ ಮದನೂರು ಕ್ರಾಸ್ ಗಡಿ ಬಳಿ ರೈಲ್ವೆ ಚೆಕ್‌ಪೋಸ್ಟ್‌ ಮನವಿ ಮಾಡಲಾಗಿದೆ ಎಂದು ಹೇಳಲಾಗಿದೆ.