ತುಮಕೂರಿನ ಎಸ್‌ಐಟಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ವೆಂಕಟೇಶ್, ಬಿಸಿಎಂ ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಬರೆದಿಟ್ಟ ಡೆತ್ ನೋಟ್‌ನಲ್ಲಿ, ತನ್ನ ಕುಟುಂಬದ ಐದು ಮಂದಿ ಸದಾ ಒಟ್ಟಾಗಿರಬೇಕೆಂಬ ಕೊನೆಯಾಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆ ಕುಟುಂಬ ಕಲಹದ ಶಂಕೆಯನ್ನು ಹುಟ್ಟುಹಾಕಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತುಮಕೂರು: ವಿದ್ಯಾ ನಗರಿ ತುಮಕೂರಿನಲ್ಲಿ ಅತ್ಯಂತ ಕರುಣಾಜನಕ ಘಟನೆಯೊಂದು ಸಂಭವಿಸಿದೆ. ನಗರದ ಪ್ರಸಿದ್ಧ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಹಿಂದುಳಿದ ವರ್ಗಗಳ (BCM) ವಸತಿ ನಿಲಯದಲ್ಲಿ ಸಾವಿಗೆ ಶರಣಾಗಿದ್ದಾನೆ. ಅದಕ್ಕೂ ಮುನ್ನ ಆತ ಪೋಷಕರಿಗೆ ಬರೆದಿಟ್ಟಿರುವ ಡೆತ್ ನೋಟ್ ಮಾತ್ರ ಎಂತವರನ್ನೂ ಕಣೀರಲ್ಲಿ ಮುಳುಗುವಂತೆ ಮಾಡಬಹುದು.
ಕೊಠಡಿಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣು
ಮೃತರನ್ನು ಮೂಲತಃ ದಾವಣಗೆರೆ ಜಿಲ್ಲೆಯ ದೊಣ್ಣೆಹಳ್ಳಿ ಗ್ರಾಮದ ಜಿ. ಇ ವೆಂಕಟೇಶ್ (25) ಎಂದು ಗುರುತಿಸಲಾಗಿದೆ. ವೆಂಕಟೇಶ್ ತುಮಕೂರು ನಗರದ ಪ್ರಖ್ಯಾತ ಎಸ್‌ಐಟಿ (SIT) ಕಾಲೇಜಿನಲ್ಲಿ ಮೂರನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ನಗರದ ಉಪ್ಪಾರಹಳ್ಳಿಯಲ್ಲಿರುವ ಬಿಸಿಎಂ (BCM) ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ ಅವರು, ಕೊಠಡಿಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ನೋಡಿಕೊಂಡು ನೇಣು ಬಿಗಿದುಕೊಂಡಿದ್ದಾನೆ. ಇಂದು (ಸೋಮವಾರ) ಬೆಳಿಗ್ಗೆ ಸಹಪಾಠಿಗಳು ಕೊಠಡಿಗೆ ಬಂದು ನೋಡಿದಾಗ ಈ ಭೀಕರ ಘಟನೆ ಬೆಳಕಿಗೆ ಬಂದಿದೆ.
ನೀವು ಐದು ಜನ ಒಟ್ಟಿಗೆ ಇರಬೇಕು, ಮನ ಕಲಕುವ ಕೊನೆಯ ಆಸೆ!
ವಿದ್ಯಾರ್ಥಿ ವೆಂಕಟೇಶ್ ಆತ್ಮಹತ್ಯೆಗೆ ನಿಖರವಾದ ಕಾರಣವೇನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಆದರೆ, ಸಾವಿಗೂ ಮುನ್ನ ಅವರು ತಮ್ಮ ಹೆತ್ತ ಪೋಷಕರು ಹಾಗೂ ಕುಟುಂಬಸ್ಥರನ್ನು ಉದ್ದೇಶಿಸಿ ಭಾವನಾತ್ಮಕ ಡೆತ್ ನೋಟ್ (Death Note) ಒಂದನ್ನು ಬರೆದಿಟ್ಟಿದ್ದಾರೆ.
ಡೆತ್ ನೋಟ್‌ನಲ್ಲಿ ಏನಿದೆ?
ನನ್ನದು ಒಂದೇ ಒಂದು ಆಸೆ. ನೀವು ಐದು ಜನ ಯಾವಾಗಲೂ ಒಟ್ಟಿಗೆ ಇರಬೇಕೆಂಬುದೇ ನನ್ನ ಕೊನೆಯ ಆಸೆ. ಒಬ್ಬರನ್ನೊಬ್ಬರು ಯಾವುದೇ ಕಾರಣಕ್ಕೂ ಬಿಟ್ಟುಕೊಡಬೇಡಿ, ಯಾರೂ ಬೇರೆಯಾಗಬೇಡಿ. ಸದಾ ಹೀಗೆಯೇ ಒಗ್ಗಟ್ಟಿನಿಂದ ಇರಬೇಕು ಎನ್ನುವುದೇ ನನ್ನ ಕೊನೆಯ ಹಾರೈಕೆ... ಇಂತಿ ನಿಮ್ಮ ಪ್ರೀತಿಯ ಮಗ.
— ಮೃತ ವಿದ್ಯಾರ್ಥಿ ವೆಂಕಟೇಶ್ ಬರೆದಿರುವ ನೋಟ್
ಕುಟುಂಬದಲ್ಲಿ ಎಲ್ಲರೂ ಒಟ್ಟಾಗಿ ಇರಬೇಕೆಂದು ಮಗ ಕೊನೆಯದಾಗಿ ಕೇಳಿಕೊಂಡಿರುವ ಈ ಮಾತುಗಳು ಇಡೀ ಕುಟುಂಬವನ್ನು ಕಣ್ಣೀರಿನ ಕಡಲಲ್ಲಿ ಮುಳುಗಿಸಿದೆ. ಕುಟುಂಬದ ಆಂತರಿಕ ಕಲಹ ಅಥವಾ ಮತ್ಯಾವುದೋ ಗೊಂದಲಗಳು ವಿದ್ಯಾರ್ಥಿಯ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿದ್ದವೇ ಎಂಬ ಅನುಮಾನಗಳು ಈ ಡೆತ್ ನೋಟ್‌ನಿಂದ ಮೂಡುತ್ತಿವೆ.
ಸ್ಥಳಕ್ಕೆ ಜಯನಗರ ಪೊಲೀಸರ ಭೇಟಿ
ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಸಿಗುತ್ತಿದ್ದಂತೆಯೇ ತುಮಕೂರಿನ ಜಯನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ದಾವಣಗೆರೆಯಲ್ಲಿರುವ ಮೃತನ ಪೋಷಕರಿಗೆ ಅಧಿಕೃತ ಮಾಹಿತಿ ನೀಡಿದ್ದು, ಕಣ್ಣೀರು ಹಾಕುತ್ತಲೇ ಪೋಷಕರು ತುಮಕೂರಿನತ್ತ ಧಾವಿಸುತ್ತಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿಯ ಸಾವಿನ ಹಿಂದಿರುವ ನೈಜ ಕಾರಣವನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.


