ವಿಜಯನಗರ: ಕರಿ ಮೋಡಗಳಲ್ಲಿ ಮರೆಯಾಗುತ್ತಿರುವ ಮಳೆರಾಯ!
ಆಕಾಶದಲ್ಲಿ ನಿತ್ಯ ಕಂಡುಬರುವ ಕಾರ್ಮೋಡ ಭಾರಿ ಮಳೆ ಸುರಿಸಬಹುದು ಎಂಬ ನಿರೀಕ್ಷೆ ಹುಟ್ಟಿಸುತ್ತಿದೆ. ಆದರೆ ಭೂಮಿಗೆ ನೀರಿನ ರೂಪದಲ್ಲಿ ಬಂದು ಸೇರುತ್ತಿಲ್ಲ. ಮಳೆ ಈ ದಿನ ಬರುತ್ತದೆ, ನಾಳೆ ಬರುತ್ತದೆ ಎಂಬ ಆಶಾಭಾವನೆ ಹೊತ್ತು ದಿನನಿತ್ಯ ರೈತರು ಮುಗಿಲು ನೋಡುತ್ತ ನಿರಾಸೆಗೊಳ್ಳುತ್ತಿದ್ದಾರೆ.
ಜಿ. ಸೋಮಶೇಖರ
ಕೊಟ್ಟೂರು (ಜೂ.27) ಆಕಾಶದಲ್ಲಿ ನಿತ್ಯ ಕಂಡುಬರುವ ಕಾರ್ಮೋಡ ಭಾರಿ ಮಳೆ ಸುರಿಸಬಹುದು ಎಂಬ ನಿರೀಕ್ಷೆ ಹುಟ್ಟಿಸುತ್ತಿದೆ. ಆದರೆ ಭೂಮಿಗೆ ನೀರಿನ ರೂಪದಲ್ಲಿ ಬಂದು ಸೇರುತ್ತಿಲ್ಲ. ಮಳೆ ಈ ದಿನ ಬರುತ್ತದೆ, ನಾಳೆ ಬರುತ್ತದೆ ಎಂಬ ಆಶಾಭಾವನೆ ಹೊತ್ತು ದಿನನಿತ್ಯ ರೈತರು ಮುಗಿಲು ನೋಡುತ್ತ ನಿರಾಸೆಗೊಳ್ಳುತ್ತಿದ್ದಾರೆ.
ಜೂನ್ ಮುಗಿಯುತ್ತ ಬಂದರೂ ಇಲ್ಲಿಯವರೆಗೂ ಮೋಡದಲ್ಲಿ ಮಳೆಯ ಲಕ್ಷಣಗಳು ಹೆಚ್ಚಾಗಿ ಕಂಡುಬಾರದಿರುವುದು ರೈತ ಸಂಕುಲವನ್ನು ಸಂಕಷ್ಟಕ್ಕೆ ದೂಡಿದೆ. ಮೋಡದ ಕಣ್ಣುಮುಚ್ಚಾಲೆ ಆಟವನ್ನು ನೋಡಿ ನೋಡಿ ರೈತರಿಗೆ ಸಾಕಾಗಿ ಹೋಗಿದ್ದಾರೆ. ಮಳೆರಾಯನ ಮುನಿಸು ಕಂಡು ಕಂಗಾಲಾಗಿದ್ದಾರೆ. ಮುಂಗಾರು ಮಳೆ ಸಕಾಲಕ್ಕೆ ಬರಬಹುದು ಎಂದು ರೈತರು ಭೂಮಿ ಹದ ಮಾಡಿಕೊಂಡು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ದೊಡ್ಡ ಪ್ರಮಾಣದ ಮಳೆಯಾಗುತ್ತಿಲ್ಲ. ಅಲ್ಲಲ್ಲಿ ಹನಿ ಮಳೆಯಾಗುತ್ತಿದೆ.
ರಾಜ್ಯದಲ್ಲಿ ನಾಲ್ಕೈದು ದಿನ ಭಾರಿ ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ
ಹೋದ ವರ್ಷದ ಅತಿವೃಷ್ಟಿಯಾಗಿದ್ದು ಬಿಟ್ಟರೆ ರೈತರು ನಾಲ್ಕು ವರ್ಷ ಸತತ ಬರಗಾಲ ಕಂಡಿದ್ದಾರೆ. ಈ ವರ್ಷ ಉತ್ತಮ ಮಳೆಯಾಗಿ ಬರ ದೂರ ಸರಿಯಬಹುದು ಎಂದು ನಿರೀಕ್ಷೆ ಹೊಂದಿದ್ದರು. ಆದರೆ ಮಳೆಯು ಚೌಕಾಸಿ ತೋರುತ್ತಿರುವುದರಿಂದ ಮತ್ತೆ ಬರವನ್ನು ಎದುರಿಸಬೇಕಾಗುತ್ತದೆ ಎಂದು ಚಿಂತೆ ವ್ಯಕ್ತಪಡಿಸುತ್ತಿದ್ದಾರೆ.
ಮಳೆಗಾಗಿ ಪ್ರಾರ್ಥಿಸಿ ಕೊಟ್ಟೂರು ತಾಲೂಕಿನ ರೈತರು ಪಟ್ಟಣ ಹಳ್ಳಿ ಪ್ರದೇಶಗಳಲ್ಲಿ ವಿಶೇಷ ಪೂಜೆ, ಕತ್ತೆ ಮೆರವಣಿಗೆ ಮತ್ತಿತರ ಕೈಂಕರ್ಯ ಕೈಗೊಂಡಿದ್ದಾರೆ. ಇಷ್ಟಾದರೂ ವರುಣ ಕೃಪೆ ತೋರುತ್ತಿಲ್ಲ. ಇಷ್ಟರಲ್ಲೆ ಮಳೆ ಬಂದಿದ್ದರೆ ಮೆಕ್ಕೆಜೋಳ, ಸಜ್ಜೆ, ನವಣೆ ಬೆಳೆಯಬಹುದು. ಮಳೆಯ ಕೊರತೆ ಹೀಗೆಯೇ ಮುಂದುವರಿದರೆ ಜನ-ಜಾನುವಾರುಗಳಿಗೆ ತೀವ್ರ ತೊಂದರೆ ಆಗುವ ಆತಂಕ ಉಂಟಾಗಿದೆ. ಪರಿಸ್ಥಿತಿ ಹೀಗಾದರೆ ರೈತರು ಏನು ಮಾಡಬೇಕು? ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿದೆ. ಅನೇಕ ಜನ ರೈತಾಪಿ ಬದುಕು ಬಿಟ್ಟು ನಗರಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿಯಬಾರದು ಎಂಬುದು ರೈತರ ಅಳಲಾಗಿದೆ.
Cloud Seeding: ಯಶಸ್ವಿಯಾಗಿ ಮೋಡ ಬಿತ್ತನೆಯ ಪರೀಕ್ಷಾ ಹಾರಾಟ ನಡೆಸಿದ ಐಐಟಿ ಕಾನ್ಪುರ
ದಿನನಿತ್ಯ ಮಳೆ ಬರುತ್ತದೆ ಎಂಬ ನಿರೀಕ್ಷೆ ಹೊಂದಿ ನಿರಾಶರಾಗುತ್ತಿದ್ದೇವೆ. ಮುಂದಿನ ದಿನಗಳ ಭವಿಷ್ಯ ನೆನಸಿಕೊಂಡರೆ ಭಯವಾಗುತ್ತದೆ. ಭೂಮಿ ಬೆಳೆಯುವಂತಾಗಲೂ ವರುಣ ಕೃಪೆ ತೋರಿದರೆ ಮುಂದಿನ ಬದುಕು ಸಾಗಿಸಲು ದಾರಿಯಾಗುತ್ತದೆ.
ಬಸವರಾಜ, ರೈತ, ಕೊಟ್ಟೂರು
ಮಳೆ ಕೊರತೆಯ ಕಾರಣದಿಂದ ರೈತರು ಬಿತ್ತನೆ ಕಾರ್ಯವನ್ನು ಮುಂದೂಡುವುದು ಉತ್ತಮ. ಇಲ್ಲದಿದ್ದರೆ ಮಳೆಯ ಕೊರತೆಯಿಂದ ಬಿತ್ತನೆ ಕಾರ್ಯದ ನಷ್ಟವನ್ನು ಅನುಭವಿಸುವಂತಾಗುತ್ತದೆ. ಮಳೆ ಬಂದರೆ ರೈತರಿಗೆ ಬೇಕಾಗುವ ಎಲ್ಲ ಬಗೆಯ ಬಿತ್ತನೆ ಬೀಜಗಳನ್ನು ದಾಸ್ತಾನುರಿಸಿಕೊಂಡಿದ್ದೇವೆ.
ಶ್ಯಾಮಸುಂದರ್, ಕೃಷಿ ಸಹಾಯಕ ಅಧಿಕಾರಿ, ಕೊಟ್ಟೂರು