ಚಿಕ್ಕಬಳ್ಳಾಪುರ (ಏ.01):  ಯಾರಾರ‍ಯರು ಏನೇನು ಮಾಡಿದ್ದಾರೆ ಅದರಂತೆ ಅವರು ಊಟ ಮಾಡುತ್ತಾರೆ. ರಾಸಲೀಲೆ ಪ್ರಕರಣದಲ್ಲಿ ಇನ್ನೂ ಸತ್ಯಾಂಶ ಏನು ಅಂತ ಹೊರಗೆ ಬಂದಿಲ್ಲ. ಬಂಧನದ ಭೀತಿಯಿಂದ ರಮೇಶ್‌ ಜಾರಕಿಹೊಳಿ ಎಲ್ಲೂ ಕೂಡ ಅವಿತುಕೊಂಡಿಲ್ಲ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ ತಿಳಿಸಿದರು.

ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಂತ್ರಸ್ತೆ ಎನ್ನುತ್ತಿರುವ ಯುವತಿಗೆ ಮೊದಲು ವೈದ್ಯಕೀಯ ಪರೀಕ್ಷೆ ನಡೆಸಬೇಕು. ಸಂತ್ರಸ್ತೆ ನ್ಯಾಯಾಧೀಶರ ಮುಂದೆ ಅಥವಾ ಎಸ್‌ಐಟಿ ನೀಡಿರುವ ಹೇಳಿಕೆ ಯಾರಿಗೂ ಗೊತ್ತಿಲ್ಲ. ಆಗಲೇ ರಮೇಶ್‌ ಜಾರಕಿಹೊಳಿ ಬಂಧನಕ್ಕೆ ಒತ್ತಾಯಿಸುವುದು ಸರಿಯಲ್ಲ ಎಂದು ಕಾಂಗ್ರೆಸ್‌ ಹೇಳಿಕೆಗೆ ಸಚಿವ ನಾರಾಯಣಗೌಡ ತಿರುಗೇಟು ನೀಡಿದರು.

ಜಾರಕಿಹೊಳಿ ಎಲ್ಲೂ ಓಡಿ ಹೋಗಿಲ್ಲ:  ರಮೇಶ್‌ ಜಾರಕಿಹೊಳಿ ತಮ್ಮ ಸ್ವಂತ ಕ್ಷೇತ್ರದಲ್ಲಿ ಇದ್ದಾರೆ. ಮೊದಲನಿಂದಲೂ ಮಹಾರಾಷ್ಟ್ರಕ್ಕೆ ಅವರಿಗೂ ಸಂಬಂಧ ಇದೆ. ಆಗಾಗ ಹೋಗಿ ಬರುತ್ತಾರೆ. ಸದ್ಯಕ್ಕೆ ಮಹಿಳೆ ಕೊಟ್ಟಿರುವ ಹೇಳಿಕೆ ನೂರಕ್ಕೆ ನೂರಷ್ಟುಯಾರಿಗೂ ಗೊತ್ತಿಲ್ಲ. ಯಾರು ಮಾಡಿಸಿದ್ದಾರೆ. ಅವರೆಲ್ಲಾ ಅನುಭವಿಸುತ್ತಾರೆಂದು ಸಚಿವ ಡಾ.ಕೆ.ಸಿ.ನಾರಾಯಣಗೌಡ ಪರೋಕ್ಷವಾಗಿ ಮಹಾನಾಯಕನ ವಿರುದ್ಧ ಕಿಡಿಕಾರಿದರು.

ಸೀಡಿ ಲೇಡಿ - ಜಾರಕಿಹೊಳಿ ಏನೆಂದು ಕರೆಯುತ್ತಿದ್ದರು : ಏನೇನ್ ಉಡುಗೊರೆ ಕೊಟ್ಟಿದ್ದರು? .

ಸಿಡಿಯಲ್ಲಿ ಕಾಣಿಸಿಕೊಂಡಿರುವ ಮಹಿಳೆಗೆ ಮೊದಲು ವೈದ್ಯಕೀಯ ಪರೀಕ್ಷೆ ಅಗತ್ಯ. ಆಕೆ ಸಾಕಷ್ಟುಗೊಂದಲದಲ್ಲಿದ್ದಾಳೆ. ಒಂದೊಂದು ದಿನ ಒಂದೊಂದು ಹೇಳಿಕೆ ನೀಡಿದ್ದಾಳೆ. ಆಕೆ ಮಾನಸಿಕವಾಗಿ ಸದೃಢವಾಗಿದ್ದಾಳ ಎಂಬುದನ್ನು ಪರೀಕ್ಷೆ ನಡಸಬೇಕು ಆ ಬಳಿಕವಷ್ಟೇ ಸತ್ಯಾಂಶ ತಿಳಿಯಲಿದೆಂದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಗಳ ಮೇಲೆ ಸಿಡಿ ಪ್ರಕರಣ ಯಾವುದೇ ಪ್ರಭಾವ ಬೀರುವುದಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ನಿಶ್ಚಿತ ಎಂದರು.

ನಮ್ಮ ಸೀಡಿನೂ ಬಿಡಲಿ:  ತಮ್ಮ ವಿರುದ್ಧ ಯಾವುದೇ ಮಾನಹಾನಿ ದೃಶ್ಯಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯದಲ್ಲಿ ತಂದಿರುವ ತಡೆಯಾಜ್ಞೆ ಅಂತ್ಯವಾಗಲಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ನಾರಾಯಣಗೌಡ, ನಮಗೇನು ತೊಂದರೆ ಇಲ್ಲ. ರಸ್ತೆಯಲ್ಲಿ ಹೋಗುವಾಗ ಕೊಳೆಚೆಗೆ ಯಾರಾದರೂ ಕಲ್ಲು ಹಾಕಿದರೆ ನಮ್ಮ ಮೇಲೆ ಬೀಳಬಾರದೆಂಬ ಕಾರಣಕ್ಕೆ ನಾವು ನ್ಯಾಯಾಲಯದ ಮೊರೆ ಹೋಗಿದ್ದವು. ಸತ್ಯಾಂಶ ಇದ್ದರೆ ನಮ್ಮ ಮೇಲೆ ಏನಾದರೂ ಸಿಡಿ ಇದ್ದರೆ ಬೇಕಾದರೂ ಬಿಡುಗಡೆ ಮಾಡಲಿ. ನಮಗೆ ಭಯ, ತೊಂದರೆ ಏನು ಇಲ್ಲ ಎಂದು ಸಚಿವ ಡಾ.ಕೆ.ಸಿ.ನಾರಾಯಣಗೌಡ ಸವಾಲು ಹಾಕಿದರು.