'ಎಲ್ಲರೂ ಬಿಜೆಪಿ ಸೇರ್ಪಡೆಗೊಳ್ಳಿ : ಕಾಂಗ್ರೆಸ್ ಪಕ್ಷ ಅವಸಾನದ ಅಂಚಲ್ಲಿದೆ'
ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿ ಸೇರ್ಪಡೆಯಾಗಿದ್ದು, ಅದರಂತೆ ಎಲ್ಲರೂ ಬಿಜೆಪಿ ಸೇರ್ಪಡೆಯಾಗಿ . ಕಾಂಗ್ರೆಸ್ ಏನಿದ್ದರೂ ಮುಳುಗುವ ಹಡಗಾಗಿದೆ ಎಂದು ಬಿಜೆಪಿ ಮುಖಂಡರೋರ್ವರು ಕರೆ ನೀಡಿದ್ದಾರೆ.
ಶಿವಮೊಗ್ಗ (ಆ.25): ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿ ಸೇರಿದ್ದು, ಅವರಿಗೆ ನಮ್ಮ ಪಕ್ಷಕ್ಕೆ ಸ್ವಾಗತ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಅಣ್ಣಾಮಲೈ ಅಂತಹ ಪ್ರಾಮಾಣಿಕ ವ್ಯಕ್ತಿ ಬಿಜೆಪಿಗೆ ಸೇರುತ್ತಿರುವುದು ಸಂತಸ ತಂದಿದೆ ಎಂದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಈಶ್ವರಪ್ಪ, ಸ್ವತಂತ್ರ ಭಾರತದಲ್ಲಿ ಕಾಂಗ್ರೆಸ್ ಎಂದಾಕ್ಷಣ ಈ ಹಿಂದೆ ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್ ಆಜಾದ್, ಸಾವರ್ಕರ್ ಹೆಸರುಗಳು ನೆನಪಾಗುತ್ತದ್ದವು. ಆದರೆ ಇಂದು ಕಾಂಗ್ರೆಸ್ ಎಂದಾಕ್ಷಣ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಎರಡೇ ಹೆಸರು ಕೇಳುತ್ತವೆ.
ಅಣ್ಣಾಮಲೈ ಬಿಜೆಪಿಗೆಯೇ ಸೇರಿದ್ಯಾಕೆ? ಅವರ ಬಾಯಿಂದಲೇ ಕೇಳಿ...
ಕಾಂಗ್ರೆಸ್ ಒಡೆದ ಕನ್ನಡಿಯಾಗಿದೆ. ಚೂರು ಚೂರಾಗಿದೆ. ಕಾಂಗ್ರೆಸ್ನ್ನು ಒಟ್ಟಾಗಿಸಲು ಯಾರಿಂದಲೂ ಸಾಧ್ಯವಿಲ್ಲ. ರಾಜಕೀಯ ಪಕ್ಷವೆಂದ ಕೂಡಲೇ ಪಕ್ಷದ ಸಿದ್ಧಾಂತ ನಾಯಕತ್ವ ಅತಿ ಮುಖ್ಯ. ಆದರೆ ಕಾಂಗ್ರೆಸ್ ನಲ್ಲಿ 23 ಜನ ನಾಯಕರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಾಯಕತ್ವ ಬೇಡ ಎಂದು ಪತ್ರ ಬರೆದಿದ್ದಾರೆ.
ನರೇಂದ್ರ ಮೋದಿಯಂತಹ ನಾಯಕತ್ವ ಬೇಕು ಎನ್ನುವಂತಹ ಕಾಲದಲ್ಲಿ ಈ ರೀತಿ ಕಾಂಗ್ರೆಸ್ ಪರಿಸ್ಥಿತಿಯಾಗಿದೆ. ದೇಶವನ್ನು ಅಭಿವೃದ್ಧಿಗೊಳಿಸುವ ಸಿದ್ಧಾಂತ ಬಿಜೆಪಿಗಿದೆ. ಆದರೆ, ಕಾಂಗ್ರೆಸ್ ನಲ್ಲಿ ಸ್ವಾರ್ಥ ರಾಜಕಾರಣವಿದೆ.
ಇಡೀ ದೇಶದ ದೇಶ ಭಕ್ತರಿಗೆ ನಾನು ಕರೆ ನೀಡುತ್ತಿದ್ದೇನೆ. ಪ್ರತಿಯೊಬ್ಬರೂ ಬಂದು ಬಿಜೆಪಿಗೆ ಸೇರ್ಪಡೆಗೊಳ್ಳಿ ಎಂದು ಮನವಿ ಮಾಡುತ್ತೆನೆ. ಅಣ್ಣಮಲೈಯಂತಹ ಪ್ರಾಮಾಣಿಕ ವ್ಯಕ್ತಿಯೇ ಬಿಜೆಪಿಗೆ ಸೇರ್ಪಡೆಗೊಂಡಂತೆ ಎಲ್ಲರೂ ಸೇರಿಕೊಳ್ಳಿ. ಕಾಂಗ್ರೆಸ್ ಇವತ್ತಿಲ್ಲ ನಾಳೆ ಮುಳುಗುವ ಹಡಗಾಗಿದೆ.
ಕಾಂಗ್ರೆಸ್ ನ್ನು ವಿಸರ್ಜನೆ ಮಾಡಿ ಎಂದು ಸ್ವಾತಂತ್ರ್ಯ ಬಂದಾಕ್ಷಣ ಮಹಾತ್ಮ ಗಾಂಧಿಯವರು ಹೇಳಿದ್ದರು. ಆದರೆ, ಇಂದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್, ಮತ್ತು ಸಿದ್ಧರಾಮಯ್ಯನವರು, ಕಾಂಗ್ರೆಸ್ ಪಕ್ಷದವರು ವಿಸರ್ಜನೆ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಅಣ್ಣಾಮಲೈಗೆ ಹೃದಯಪೂರ್ವಕ ಸ್ವಾಗತ ಕೋರಿದ ಸಿ. ಟಿ. ರವಿ!..
ಎಐಸಿಸಿ ನಾಯಕತ್ವ ಮತ್ತು ಅಧ್ಯಕ್ಷ ಗಾದಿ ವಿಚಾರ. ಸಿದ್ಧರಾಮಯ್ಯ ರಾಹುಲ್ ಗಾಂಧಿ ಇರಲೀ ಎಂದು ಹೇಳುತ್ತಿದ್ದಾರೆ. ಸೋನಿಯಾ ಗಾಂಧಿ ನಾಯಕತ್ವ ಇರಲೀ ಎಂದು ಡಿ.ಕೆ. ಶಿವಕುಮಾರ್ ಹೇಳುತ್ತಿದ್ದಾರೆ. ಇತ್ತ ವೀರಪ್ಪ ಮೋಯಿಲಿಯವರು ಇವರಿಬ್ಬರು ಬೇಡ ಎಂದು ಹೇಳುತ್ತಿದ್ದಾರೆ.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಹೊಗಳಿದರೆ ಸ್ಥಾನಮಾನ ಸಿಗುತ್ತದೆ ಎಂಬ ಲೆಕ್ಕಾಚಾರದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಬಗ್ಗೆಯೇ ಗೊಂದಲವಿದೆ ಎಂದರು.
ಡಿ.ಕೆ. ಶಿವಕುಮಾರ್ ಫೋನ್ ಕದ್ದಾಲಿಕೆ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿದ ಈಶ್ವರಪ್ಪ, ಯಾವ ಗುಡ್ಡ ಕಡಿದು ಹಾಕಿದ್ದಾರೆ ಎಂದು ಅವರ ಫೋನ್ ಕದ್ದಾಲಿಕೆ ಮಾಡಬೇಕು. ಏನು ಮಾಡಿದ್ದಾರೆ ಇವರು ಎಂದು ಪ್ರಶ್ನಿಸಿದ್ದಾರೆ.