ಚಿಕ್ಕಬಳ್ಳಾಪುರ (ಅ.13):  ದಿಢೀರ್‌ ಬೆಳವಣಿಗೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರು ಆಗಿರುವ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ಗೆ, ಸಚಿವ ಬಿ.ಶ್ರೀರಾಮಲು ನಿರ್ವಹಿಸುತ್ತಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಖಾತೆಯ ಹೆಚ್ಚುವರಿ ಹೊಣೆಯನ್ನು ಸಚಿವ ಸುಧಾಕರ್‌ ವಹಿಸಿಕೊಂಡಿರುವುದು ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಅವರ ಬೆಂಬಲಿಗರಲ್ಲಿ ಹರ್ಷ ತಂದಿದೆ.

ವಿಶೇಷವೆಂದರೆ ಕೋಲಾರ ಜಿಲ್ಲೆಯಿಂದ ಬೇರ್ಪಟ್ಟು ಚಿಕ್ಕಬಳ್ಳಾಪುರ ಜಿಲ್ಲೆಯಾದ ಬಳಿಕ ಜಿಲ್ಲೆಯ ಸಚಿವರೊಬ್ಬರಿಗೆ ಎರಡು ಮಹತ್ವದ ಇಲಾಖೆಗಳನ್ನು ನಿರ್ವಹಿಸುವ ಅವಕಾಶ ರಾಜ್ಯ ಸಚಿವ ಸಂಪುಟದಲ್ಲಿ ಸಿಕ್ಕಿರುವುದು ಇದೇ ಮೊದಲು ಆಗಿದ್ದು, ಆರೋಗ್ಯ ಇಲಾಖೆ ಸಿಕ್ಕಿರುವುದರಿಂದ ಜಿಲ್ಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ.

ಖಾತೆ ಬದಲಾವಣೆ; ಸಿಎಂ ಮುಂದೆ ಶ್ರೀರಾಮುಲು ಹೊಸ ಪಟ್ಟು ..

ಈ ಹಿಂದೆ ಕಾಂಗ್ರೆಸ್‌, ಜೆಡಿಎಸ್‌ ಸಮ್ಮುಶ್ರ ಸರ್ಕಾರದಲ್ಲಿ ಗೌರಿಬಿದನೂರು ಶಾಸಕ ಎನ್‌.ಎಚ್‌.ಶಿವಶಂಕರರೆಡ್ಡಿಗೆ ಕೃಷಿ ಇಲಾಖೆ ಮಾತ್ರ ಸಿಕ್ಕಿತ್ತು. 2013ರಲ್ಲಿ ಕಾಂಗ್ರೆಸ್‌ಗೆ ಪೂರ್ಣ ಪ್ರಮಾಣದಲ್ಲಿ ಬಹುಮತ ಸಿಕ್ಕಿ ಅಧಿಕಾರ ಹಿಡಿದರೂ ಜಿಲ್ಲೆಯ ಯಾವೊಬ್ಬ ಕಾಂಗ್ರೆಸ್‌ ಶಾಸಕರಿಗೆ ಮಂತ್ರಿಗಿರಿ ಸಿಕ್ಕಿರಲಿಲ್ಲ. 2008ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಆಯ್ಕೆಗೊಂಡಿರಲಿಲ್ಲ. 

ಆದರೆ 2019 ರಾಜ್ಯ ರಾಜಕೀಯ ವಲಯದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಿಂದ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರ ಪತನಗೊಂಡು ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌, ಮೂರನೇ ಬಾರಿಗೆ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವರಾದರು.