ಲೇಡೀಸ್ ಹಾಸ್ಟೆಲ್‍ಗೆ ಕರ್ನಾಟಕ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಭೇಟಿ: ಪರಿಶೀಲನೆ
ನಗರದ ಸರ್ಕಾರಿ ಕಲಾ ಕಾಲೇಜು ಬಳಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಶುಕ್ರವಾರ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವರದಿ: ಕಿರಣ್.ಎಲ್.ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಆ.11): ನಗರದ ಸರ್ಕಾರಿ ಕಲಾ ಕಾಲೇಜು ಬಳಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಶುಕ್ರವಾರ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿ.ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಅಡುಗೆ ಕೋಣೆ, ಡೈನಿಂಗ್ ಹಾಲ್, ಸ್ಟೋರ್ ರೂಂನಲ್ಲಿ ಶೇಖರಿಸಿಟ್ಟ ಅಕ್ಕಿ, ಬೆಳೆ, ತರಕಾರಿ ಸೇರಿದಂತೆ ಇನ್ನಿತರೇ ಆಹಾರ ಪದಾರ್ಥಗಳ ವೀಕ್ಷಣೆ, ರೊಟ್ಟಿ ತಯಾರಿಸುವ ಯಂತ್ರ, ಮೆನು ಚಾರ್ಟ್ ವೀಕ್ಷಿಸಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಹಾಸ್ಟೆಲ್ ವ್ಯವಸ್ಥೆಯ ಮಾಹಿತಿ ಪಡೆದರು.
ಅಲ್ಲದೆ ಹಾಸ್ಟೆಲ್‍ನಲ್ಲಿನ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು. ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸಂವಿಧಾನ, ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು, ಸ್ವಚ್ಛತೆ, ಪರಿಸರ ಸಂರಕ್ಷಣೆ ಸೇರಿದಂತೆ ಮುಂತಾದ ವಿಷಯಗಳ ಕುರಿತು ಆಶುಭಾಷಣ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಉತ್ತಮ ಆಲೋಚನೆ, ಚಿಂತನೆಗಳನ್ನು ಬೆಳೆಸಬೇಕು. ರಾಷ್ಟ್ರದ ಸಂಪತ್ತು, ದೇಶದ ಸ್ವಾತಂತ್ರ್ಯದ ಇತಿಹಾಸ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಕುರಿತು ತಿಳುವಳಿಕೆ ಮೂಡಿಸುವ ಮೂಲಕ ದೇಶದ ಬಗ್ಗೆ ಗೌರವ, ಭಕ್ತಿ ಬೆಳೆಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ತಿಳಿಸಿದ ಅವರು, ಈ ಕುರಿತು ಕ್ರಿಯಾಯೋಜನೆ ರೂಪಿಸಿ ಕಾರ್ಯಕ್ರಮದ ವರದಿ ನೀಡಬೇಕು ಎಂದು ಸೂಚನೆ ನೀಡಿದರು.
ನಿರ್ಗತಿಕರ ಆಶಾಕಿರಣ, ತನ್ನ ಸ್ವಂತ ಜಾಗವನ್ನು ಅನಾಥರಿಗಾಗಿ ಮುಡಿಪಾಗಿಟ್ಟ ಆಯಿಶಾ ಬಾನು!
ಪ್ರಾಧ್ಯಾಪಕರು, ಸಂಪನ್ಯೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ನೀಡುವ ಮೂಲಕ ವಿದ್ಯಾರ್ಥಿ ದೆಸೆಯಿಂದಲೇ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಬೆಳೆಸಲು ಅಗತ್ಯ ಕ್ರಮವಹಿಸಬೇಕು ಎಂದು ಹೇಳಿದರು. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ಆತ್ಮರಕ್ಷಣಾ ಕಲೆ, ಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು. ಯೋಗ ಶಿಕ್ಷಕರನ್ನು ನಿಯೋಜಿಸಿ ಪ್ರತಿದಿನ ಬೆಳಿಗ್ಗೆ 5.30 ರಿಂದ 6.30 ರವರೆಗೆ 1 ಗಂಟೆ ಕಾಲ ಯೋಗ ಸೇರಿದಂತೆ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ಶಿಸ್ತುಬದ್ಧವಾಗಿ ಮುಂದುವರೆಸುವಂತೆ ಲೋಕಾಯುಕ್ತರು ಸಲಹೆ ನೀಡಿದರು.
ಬಳಿಕ ಚಿತ್ರದುರ್ಗ ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿದ ಅವರು, ಹೊರರೋಗಿ ಮತ್ತು ಒಳರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇಲ್ಲಿ ರೋಗಿಗಳಿಗೆ ನೀಡುವ ಔಷಧಿ ವಿತರಣೆ ವಹಿಯ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಸೂಚನೆ ನೀಡಿದರು. ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ ಅವರು, ತುರ್ತು ಚಿಕಿತ್ಸಾ ಘಟಕದ ಔಷಧಿ ವಿತರಣೆ ವಹಿಯಲ್ಲಿ ಕೇವಲ ಔಷಧಿ ಪೂರೈಕೆ ಆಗಿರುವ ಮಾಹಿತಿಯನ್ನು ಮಾತ್ರ ದಾಖಲು ಮಾಡಲಾಗುತ್ತಿದೆ.
ಇದರ ಜೊತೆಗೆ ರೋಗಿಗಳಿಗೆ ವಿತರಿಸುವ ಔಷಧಿ ಹೆಸರು, ಪ್ರಮಾಣ, ವಿವರವನ್ನೂ ಕೂಡ ರಿಜಿಸ್ಟರ್‍ನಲ್ಲಿ ದಾಖಲು ಮಾಡಬೇಕು ಎಂದು ತಾಕೀತು ಮಾಡಿದರು. ಭಾನುವಾರ ವೈದ್ಯರು ಸಿಗಲ್ಲ, ತುರ್ತು ಸಂದರ್ಭಗಳಲ್ಲಿ ಫೋನ್ ಮಾಡಿದರೂ ಸರಿಯಾಗಿ ಸ್ಪಂದಿಸುವುದಿಲ್ಲ. ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಹಾಗಾಗಿ ಪಾಳಿ ಪದ್ಧತಿಯಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಲೋಕಾಯುಕ್ತರ ಗಮನಸೆಳೆದರು. ಬಡವರಿಗೆ ಸಮರ್ಪಕವಾಗಿ ಆರೋಗ್ಯ ಸೇವೆ ಒದಗಿಸಬೇಕು. ತಕ್ಷಣ ಸ್ಪಂದಿಸುವ ಕೆಲಸವಾಗಬೇಕು.
ಕೊರೋನಾ ಸಾವು, ರೈತರ ಆತ್ಮಹತ್ಯೆಯಲ್ಲೂ ನಂ.1: ಇದೀಗ ಮದ್ರಾಸ್ ಐನಲ್ಲೂ ನಂ.1 ಜಿಲ್ಲೆ ಹಾವೇರಿ!
ಈ ಕುರಿತು ದೂರುಗಳು ಬಂದರೆ ಸೂಕ್ತ ಕ್ರಮವಹಿಸಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದೇವರಾಜ್ ಅವರಿಗೆ ಸೂಚನೆ ನೀಡಿದರು. ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು, ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ, ಹೊಸದಾಗಿ ನಿರ್ಮಿಸಲಾಗಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕ ವಾಸುದೇವರಾಮ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದೇವರಾಜ್ ಸೇರಿದಂತೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಇದ್ದರು.