ಗುತ್ತಿಗೆದಾರ ಸಂತೋಷ್ ರೀತಿ ಇನ್ನೂ ಎಷ್ಟು ಜನ ಸಾಯ್ಬೇಕು?: ಬಿಬಿಎಂಪಿಗೆ ಹೈಕೋರ್ಟ್ ತರಾಟೆ
* ಗುತ್ತಿಗೆದಾರರಿಗೆ ಹಣ ಪಾವತಿಗೆ ವಿಳಂಬ
* ಕಾಮಗಾರಿ ಪೂರ್ಣಗೊಂಡರೂ ಹಣ ನೀಡದ ಪಾಲಿಕೆ
* ಬಿಬಿಎಂಪಿ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ
ಬೆಂಗಳೂರು(ಏ.20): ಕಾಮಗಾರಿ ಪೂರೈಸಿದ ಗುತ್ತಿಗೆದಾರರಿಗೆ ಹಣ ಪಾವತಿಸಲು ವಿಳಂಬ ಮಾಡುತ್ತಿರುವ ಬಿಬಿಎಂಪಿಯ(BBMP) ಧೋರಣೆಯನ್ನು ಹೈಕೋರ್ಟ್(High Court) ತರಾಟೆಗೆ ತೆಗೆದುಕೊಂಡಿತು. ಅಲ್ಲದೆ, ಗುತ್ತಿಗೆ ಹಣ ಪಾವತಿಯಾಗದಕ್ಕೆ ಆತ್ಮಹತ್ಯೆ(Suicide) ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್(Santosh Patil) ಸಾವಿನ ಬಗ್ಗೆ ಪ್ರಸ್ತಾಪಿಸಿ, ಇನ್ನೆಷ್ಟು ಜನ ಸಾಯಬೇಯಬೇಕಿದೆ ಎಂದು ಬಿಬಿಎಂಪಿಯನ್ನು ಪ್ರಶ್ನಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ತಾವು ನಡೆಸಿದ ಕಾಮಗಾರಿಗೆ ಗುತ್ತಿಗೆ ಹಣ ನೀಡಲಾಗಿಲ್ಲ ಎಂದು ಆಕ್ಷೇಪಿಸಿ ಬಿ.ಬಿ.ಉಮೇಶ್ ಹಾಗೂ ಮತ್ತಿತರರು ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನ್ಯಾಯಪೀಠ ಬಿಬಿಎಂಪಿಯ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿತು.
Karnataka High Court: ಘನತ್ಯಾಜ್ಯ ತೆರವು ಮಾಡದ ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ಹಾಗೆಯೇ, ಅರ್ಜಿದಾರರು ಕಾಮಗಾರಿ ಪೂರ್ಣಗೊಳಿಸಿದ್ದರೂ ಅವರಿಗೆ ಏಕೆ ಇನ್ನೂ ಹಣ ಪಾವತಿ ಮಾಡಿಲ್ಲ ಎಂಬ ಬಗ್ಗೆ ಗುರುವಾರ ಸೂಕ್ತ ವಿವರಣೆ ನೀಡಬೇಕು. ತಪ್ಪಿದರೆ ವಿಚಾರಣೆಗೆ ಖುದ್ದು ಹಾಜರಾಗುವಂತೆ ಬಿಬಿಎಂಪಿ ಆಯುಕ್ತರು ಆದೇಶಿಸಲಾಗುವುದು ಎಂದು ಪಾಲಿಕೆ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಬಿಎಂಪಿಯಿಂದ ಕಾಮಗಾರಿ ಗುತ್ತಿಗೆ ಪಡೆದಿದ್ದರು. ಕಾಮಗಾರಿ ಪೂರ್ಣಗೊಳಿಸಿ, ಆ ಬಗ್ಗೆ ಪ್ರಮಾಣ ಪತ್ರ ಸಹ ಪಡೆದುಕೊಂಡಿದ್ದಾರೆ. ಆದರೆ, ಬಿಬಿಎಂಪಿ ಮಾತ್ರ ಅರ್ಜಿದಾರರಿಗೆ ಹಣ ಪಾವತಿ ಮಾಡುತ್ತಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಇದರಿಂದ ಬಿಬಿಎಂಪಿ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, ಒಂದೊಮ್ಮೆ ಗುತ್ತಿಗೆದಾರರು(Contractors) ಮಾಡಿರುವ ಕಾಮಗಾರಿಯಲ್ಲಿ ಲೋಪವಿದೆ ಎನ್ನುವುದಾದರೆ ಆ ಮಾತು ಬೇರೆ. ಆದರೆ , ಕಾಮಗಾರಿ ಪೂರ್ಣಗೊಂಡ ಬಗ್ಗೆ ಪ್ರಮಾಣ ಪತ್ರ ಇದ್ದರೂ ಹಣ(Money) ಪಾವತಿಸದೇ ಇರುವುದನ್ನು ಒಪ್ಪಲಾಗದು. ಇನ್ನೆಷ್ಟುಗುತ್ತಿಗೆದಾರರು ಸಾಯಬೇಕು ಎಂದುಕೊಂಡಿದ್ದೀರಿ? ಎಂದು ತೀಕ್ಷ್ಣವಾಗಿ ಪ್ರಶ್ನಿಸುವ ಮೂಲಕ ಪಾಲಿಕೆ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ ನ್ಯಾಯಪೀಠ, ಈ ಪ್ರಕರಣವನ್ನು ಸುಮ್ಮನೆ ಬಿಡುವುದಿಲ್ಲ. ತಾರ್ಕಿಕ ಅಂತ್ಯ ಕಾಣಿಸಲೇಬೇಕು ಎಂದು ನುಡಿಯಿತು.