ಟಿ. ನರಸೀಪುರ (ನ.21): ಹೈಕೋರ್ಟ್‌ನ ಏಕ ಸದಸ್ಯ ಪೀಠ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಯ ಮೀಸಲಾತಿ ಸಂಬಂಧ ಹೊರಡಿಸಿರುವ ಆದೇಶದಿಂದ ಈಗಷ್ಟೇ ಆಯ್ಕೆಗೊಂಡ ಪುರಸಭಾ ವರಿಷ್ಠರಲ್ಲಿ ಆತಂಕ ಮೂಡಿಸಿದೆ.

ಇತ್ತೀಚೆಗೆ ನಡೆದ ಪುರಸಭೆ ಚುನಾವಣೆಯಲ್ಲಿ ರೋಸ್ಟರ್‌ ಪದ್ದತಿ ಅನುಸರಿಸಿಲ್ಲವೆಂಬ ಕಾರಣದಿಂದ ಮೀಸಲಾತಿ ರದ್ದು ಪಡಿಸಿ ಆದೇಶ ಹೊರಡಿಸಿದ್ದು, 12 ದಿನಗಳ ಹಿಂದಷ್ಟೇ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಎನ್‌. ಸೋಮು ಹಾಗೂ ಪ್ರೇಮಾ ಮರಯ್ಯ ತಾಂತ್ರಿಕವಾಗಿ ಅಧಿಕಾರದಿಂದ ವಂಚಿತರಾದಂತಾಗಿದೆ.

ಅಧ್ಯಕ್ಯ-ಉಪಾಧ್ಯಕ್ಷರ ಆಯ್ಕೆ ವೇಳೆ ರೋಸ್ಟರ್‌ ಪದ್ದತಿ ಅನ್ವಯ ಮೀಸಲಾತಿ ನಿಗದಿಪಡಿಸಿಲ್ಲ ಎಂದು 25 ಅರ್ಜಿಗಳು ಸಲ್ಲಿಕೆಯಾದ ಹಿನ್ನೆಲೆ ಅರ್ಜಿಗಳ ಪರಿಶೀಲನೆ ನಡೆಸಿದ ಹೈ ಕೋರ್ಟ್‌ ಮೀಸಲಾತಿ ರದ್ದು ಪಡಿಸಿ, ನಾಲ್ಕು ವಾರಗಳೊಳಗಾಗಿ ಹೊಸ ಮೀಸಲಾತಿ ನಿಗದಿ ಪಡಿಸಿ ಆಯ್ಕೆ ಮಾಡುವಂತೆ ಹೊರಡಿಸಿರುವ ತೀರ್ಪು ನೂತನವಾಗಿ ಆಯ್ಕೆಯಾದ ಪುರಸಭೆ ವರಿಷ್ಠರ ಆಶಯಗಳಿಗೆ ತಣ್ಣೇರೆರಚಿದಂತಾಗಿದೆ.

ನಗರಸಭೆ, ಪುರಸಭೆ, ಪ.ಪ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ರದ್ದು: ಸರ್ಕಾರಕ್ಕೆ ಮುಖಭಂಗ ...

ಮೀಸಲಾತಿ ಪರಿಷ್ಕರಣೆ ಮಾಡುವುದಾಗಿ ಕಾನೂನು ಸಚಿವ ಮಾಧುಸ್ವಾಮಿ ನೀಡಿರುವ ಹೇಳಿಕೆ ಸಹ ಗೊಂದಲ ಮೂಡಿಸಿದ್ದು, ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು 10 ದಿನಗಳ ಕಾಲಾವಕಾಶ ನೀಡಿರುವ ಹಿನ್ನೆಲೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದರ ಮೇಲೆ ಅಧ್ಯಕ್ಷರ ಭವಿಷ್ಯ ನಿರ್ಧಾರಗೊಳ್ಳಲಿದೆ.

ಹೈಕೋರ್ಟ್‌ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುರಸಭಾ ಅಧ್ಯಕ್ಷ ಎನ್‌. ಸೋಮು ಹೈಕೋರ್ಟ್‌ನ ಆದೇಶದ ಸಂಬಂಧ ನಮಗೆ ಇನ್ನು ಸರ್ಕಾರದಿಂದ ಅಧಿಕೃತ ಮಾಹಿತಿ ಬಂದಿಲ್ಲ.ಇದೇ ಕೋರ್ಟ್‌ ಸರ್ಕಾರ ನಿಗದಿಪಡಿಸಿದ ಮೀಸಲಾತಿಯನ್ನು ಪರಿಗಣಿಸಿ ಚುನಾವಣೆ ಮಾಡುವಂತೆ ಸೂಚನೆ ನೀಡಿತ್ತು ಎಂದರು.