* ಶಾಸಕ ಎಸ್.ಆರ್.ವಿಶ್ವನಾಥ್‌ಗೆ ಹೈಕೋರ್ಟ್ ನೋಟಿಸ್* ಬಿಡಿಎ ಅಧ್ಯಕ್ಷ ಹುದ್ದೆ ಹೊಂದಿರುವ ಹಿನ್ನೆಲೆಯಲ್ಲಿ ಪಿಐಎಲ್ ವಿಚಾರಣೆ* ಎಸ್.ಆರ್. ವಿಶ್ವನಾಥ್ ಅವರನ್ನು ಬಿಡಿಎ ಅಧ್ಯಕ್ಷರಾಗಿ ನೇಮಕ ಮಾಡಿದ್ದ ರಾಜ್ಯ ಸರ್ಕಾರ
ಬೆಂಗಳೂರು(ಮೇ.27): ಲಾಭದಾಯಕವಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಹುದ್ದೆ ಹೊಂದಿರುವ ಹಿನ್ನೆಲೆಯಲ್ಲಿ ಎಸ್.ಆರ್.ವಿಶ್ವನಾಥ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿ ಕುರಿತು ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನ ವಕೀಲ ಎ.ಎಸ್. ಹರೀಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಶಾಸಕ ಎಸ್.ಆರ್.ವಿಶ್ವನಾಥ್‌ಗೆ ನೋಟಿಸ್ ಜಾರಿ ಮಾಡಿದೆ.
ACB Raids: ನನ್ನ ಮೇಲಿನ ದಾಳಿಗೆ ವಿಶ್ವನಾಥೇ ಕಾರಣ: ಮೋಹನ್
2018ರ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಯಲಹಂಕ ಕ್ಷೇತ್ರದಿಂದ ಎಸ್.ಆರ್.ವಿಶ್ವನಾಥ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಂವಿಧಾನದ ಪರಿಚ್ಛೇದ 191(1) (ಎ) ಪ್ರಕಾರ ಸಂಸದರು ಹಾಗೂ ಶಾಸಕರಾಗಿರುವವರು ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಯಾವುದೇ ಲಾಭದಾಯಕ ಹುದ್ದೆ ಹೊಂದುವಂತಿಲ್ಲ ಒಂದು ವೇಳೆ ಲಾಭದಾಯಕ ಹುದ್ದೆ ಹೊಂದಿದ್ದರೆ ಶಾಸಕ ಅಥವಾ ಸಂಸದ ಸ್ಥಾನದಿಂದ ಅನರ್ಹರಾಗುತ್ತಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಹೀಗಿರುವಾಗ ರಾಜ್ಯ ಸರ್ಕಾರ 2020ರ ನ.24ರಂದು ಎಸ್.ಆರ್. ವಿಶ್ವನಾಥ್ ಅವರನ್ನು ಬಿಡಿಎ ಅಧ್ಯಕ್ಷರಾಗಿ ನೇಮಕ ಮಾಡಿದೆ. ಬಿಡಿಎ ಅಧ್ಯಕ್ಷ ಹುದ್ದೆಯಲ್ಲಿ ವೇತನ ಮತ್ತು ಭತ್ಯೆ ಸೇರಿದಂತೆ ಪ್ರತಿ ತಿಂಗಳು ಒಟ್ಟು 1.92 ಲಕ್ಷ ರು. ಪಡೆದುಕೊಳ್ಳುತ್ತಿದ್ದಾರೆ. ಹಾಗಾಗಿ, ಒಂದು ಹುದ್ದೆಗೆ ಸರ್ಕಾರದಿಂದ ವೇತನ ಪಡೆದುಕೊಳ್ಳುತ್ತಿರುವ ಕಾರಣ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಎಸ್.ಆರ್. ವಿಶ್ವನಾಥ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಕೋರಿ 2021ರ ಅ.4ರಂದು ಸಲ್ಲಿಸಿರುವ ಮನವಿಯನ್ನು ರಾಜ್ಯಪಾಲರು ಈವರೆಗೂ ಪರಿಗಣಿಸಿಲ್ಲ. ಆದ್ದರಿಂದ ಅರ್ಜಿದಾರರು ಸಲ್ಲಿಸಿರುವ ಮನವಿ ಪತ್ರವನ್ನು ಪರಿಗಣಿಸಿ ಶಾಸಕ ಸ್ಥಾನದಿಂದ ವಿಶ್ವನಾಥ್ ಅವರನ್ನು ಅನರ್ಹಗೊಳಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
