ಬೆಂಗಳೂರು(ಮಾ.07): ನ್ಯಾಯಾಲಯದ ನಿರ್ದೇಶನದ ಹೊರತಾಗಿಯೂ ಘನತ್ಯಾಜ್ಯ ನಿರ್ವಹಣಾ ಗುತ್ತಿಗೆಗೆ ಸಂಬಂಧಿಸಿದಂತೆ ಬಿಡ್‌ ಅನ್ನು ಮೌಲ್ಯಮಾಪನ ಮಾಡಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಬಿಬಿಎಂಪಿಗೆ 75 ಸಾವಿರ ರು. ದಂಡ ವಿಧಿಸಿ ಹೈಕೋರ್ಟ್‌ ಆದೇಶ ನೀಡಿದೆ.

ಈ ಕುರಿತು ಪಿ.ಸರಸ್ವತಿ, ಹರ್ಷವರ್ಧನ ರೆಡ್ಡಿ ಮತ್ತು ಎ.ರಮಣ ರೆಡ್ಡಿ ಎಂಬುವವರು ಸಲ್ಲಿಸಿದ್ದ ಮೂರು ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ. ಜತೆಗೆ, ಬಿಡ್‌ ಮೌಲ್ಯಮಾಪನದ ವಿಳಂಬಕ್ಕೆ ಕಾರಣವಾದ ಅಧಿಕಾರಿಗಳಿಂದ ಈ 75 ಸಾವಿರ ರು. ವಸೂಲಿ ಮಾಡುವಂತೆ ಬಿಬಿಎಂಪಿಗೆ ನಿರ್ದೇಶಿಸಿದೆ.

ಘನತ್ಯಾಜ್ಯ ನಿರ್ವಹಣಾ ಗುತ್ತಿಗೆ ಸಂಬಂಧಿಸಿದಂತೆ ಮೂವರು ಅರ್ಜಿದಾರರು ಸಲ್ಲಿಸಿದ್ದ ಬಿಡ್‌ ಅನ್ನು ಆದಷ್ಟುಬೇಗ ಮೌಲ್ಯಮಾಪನ ಮಾಡುವಂತೆ ಹೈಕೋರ್ಟ್‌ ಏಕ ಸದಸ್ಯ ನ್ಯಾಯಪೀಠ 2019ರ ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿಗೆ ನಿರ್ದೇಶಿಸಿದೆ. ಆ ಆದೇಶ ಪಾಲಿಸದ ಹಿನ್ನೆಲೆಯಲ್ಲಿ 2020ರಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು. 2021ರ ಜನವರಿಯಲ್ಲಿ ಹೈಕೋರ್ಟ್‌ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿ ಮಾಡಿ ಒಂದು ತಿಂಗಳ ನಂತರ ಅರ್ಜಿದಾರರ ಬಿಡ್‌ ಅನ್ನು ಮೌಲ್ಯಮಾಪನ ಮಾಡಲಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ಅಲ್ಲದೆ, ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆಯ ಕಾರ್ಯಕಾರಿ ಎಂಜಿನಿಯರ್‌ ಎಚ್‌.ಭೀಮೇಶ್‌ ಪ್ರಮಾಣಪತ್ರ ಸಲ್ಲಿಸಿ, ಏಕ ಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ. ಇದರಿಂದ ಆದೇಶ ಪಾಲಿಸಲು ವಿಳಂಬವಾಗಿದೆ ಎಂದು ವಿವರಣೆ ನೀಡಿ ಬೇಷರತ್‌ ಕ್ಷಮೆ ಯಾಚಿಸಿದ್ದಾರೆ.

ಐ ಪ್ಯಾಡ್‌ ವಾಪಸ್‌ ನೀಡಲು ಬಿಬಿಎಂಪಿ ಮಾಜಿ ಸದಸ್ಯರ ಮೀನಮೇಷ

ದಂಡ ಪಾವತಿಗೆ ತಿಂಗಳ ಕಾಲಾವಕಾಶ:

ಆದರೆ, ಮೇಲ್ಮನವಿ ಸಲ್ಲಿಸಿದ ಮಾತ್ರಕ್ಕೆ ಆದೇಶ ಪಾಲಿಸಲು ಯಾವುದೇ ಅಡ್ಡಿ ಇರಲಿಲ್ಲ. ಹೀಗಾಗಿ, ವಿಳಂಬಕ್ಕೆ ಅವರು ನೀಡಿದ ಕಾರಣ ತೃಪ್ತಿಕರವಾಗಿಲ್ಲ ಎಂದು ತಿಳಿಸಿದ ನ್ಯಾಯಪೀಠ ಮೂವರು ಅರ್ಜಿದಾರರಿಗೆ ತಲಾ 25 ಸಾವಿರ ರು. ದಂಡ ಒಂದು ತಿಂಗಳಲ್ಲಿ ಪಾವತಿಸಬೇಕು. ಆದೇಶ ಪಾಲಿಸಲು ವಿಳಂಬ ಮಾಡಿದ ಅಧಿಕಾರಿಗಳಿಂದ ದಂಡ ಹಣ ವಸೂಲಿ ಮಾಡಬೇಕು ಎಂದು ಬಿಬಿಎಂಪಿಗೆ ಆದೇಶಿಸಿತು.

ನ್ಯಾಯಾಂಗ ನಿಂದನೆಯಿಂದ ಪಾಲಿಕೆ ಆಯುಕ್ತರು ಪಾರು

ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ ಹಾಗೂ ವಿಳಂಬದ ಬಗ್ಗೆ ಬೇಷರತ್‌ ಕ್ಷಮೆ ಯಾಚಿಸಿರುವುದರಿಂದ ಪ್ರಕರಣದ ಆರೋಪಿಗಳಾದ ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌, ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್‌, ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌ ಮತ್ತು ಕಾರ್ಯಕಾರಿ ಎಂಜಿನಿಯರ್‌-1 ವೈ.ಎನ್‌. ಶೇಷಾದ್ರಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕಿಯೆ ಕೈಬಿಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.