* ಎಫ್‌ಐಆರ್ ರದ್ದು ಮಾಡಲು ಹೈಕೋರ್ಟ್ ನಕಾರ* ಪುಂಡ ಪೋಕರಿ ಎಂದರೆ ಮಾನಹಾನಿಯಲ್ಲ* 2012ರ ಆ.16ರಂದು ಆತ್ಮಹತ್ಯೆಗೆ ಶರಣಾಗಿದ್ದ ಸುಮನಾ
ಬೆಂಗಳೂರು(ಮೇ.28): ಮಹಿಳೆಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಸಂಬಂಧ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧ ಯಲಹಂಕ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಶ್ರೀನಿವಾಸ ರಾಜು ಎಂಬಾತ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಕೆ. ನಟರಾಜನ್ ಅವರ ನ್ಯಾಯಪೀಠ ಆದೇಶಿಸಿದೆ.
ಲಾಭದಾಯಕ ಹುದ್ದೆ: ಬಿಜೆಪಿ ಶಾಸಕ ವಿಶ್ವನಾಥ್‌ಗೆ ಹೈಕೋರ್ಟ್ ನೋಟಿಸ್
ನಗರದ ಕೊಡಿಗೆಹಳ್ಳಿ ಸರ್ವೇ ನಂ 101/2ರಲ್ಲಿ ಸರ್ಕಾರಿ ಜಮೀನನ್ನು ವಿ.ಶ್ರೀನಿವಾಸ ರಾಜು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ 2012ರಲ್ಲಿ ಲೋಕಾಯುಕ್ತ ಮತ್ತು ಬಿಡಿಎಗೆ ನ್ಯಾಯಾಂಗ ಬಡಾವಣೆ ನಿವಾಸಿ ಎಚ್.ಎಂ. ವೆಂಕಟೇಶ್ ದೂರು ನೀಡಿದ್ದರು. ಇದರಿಂದ ಶ್ರಿನಿವಾಸ ರಾಜು, ದೂರುದಾರ ವೆಂಕಟೇಶ್ ಅವರ ಪತ್ನಿ ಸುಮನಾಗೆ ಪದೇ ಪದೇ ದೂರವಾಣಿ ಕರೆ ಮಾಡಿ ಹೆದರಿಸುತ್ತಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿ ಗಂಭೀರ ಸ್ಥಿತಿಗೆ ತಲುಪಿದ್ದ ಸುಮನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.
Karnataka High Court: ಎಸ್‌ಐಗೂ ಚಾರ್ಜ್‌ಶೀಟ್ ಸಲ್ಲಿಕೆ ಅಧಿಕಾರ: ಕೋರ್ಟ್
ತದನಂತರ ವೆಂಕಟೇಶ್ ಒಬ್ಬ ‘ಪುಂಡ ಪೋಕರಿ’ ಎಂಬುದಾಗಿ ಸುದ್ದಿವಾಹಿನಿಯಲ್ಲಿ ಶ್ರೀನಿವಾಸ ರಾಜು ಜರಿದಿದ್ದರು. ಇದರಿಂದ ವೆಂಕಟೇಶ್ ಸಂಬಂಧಿಕರು ಹಾಗೂ ಸ್ನೇಹಿತರು ವಿಚಾರಿಸ ತೊಡಗಿದಾಗ ಮನನೊಂದ ಸುಮನಾ 2012ರ ಆ.16ರಂದು ನೇಣು ಹಾಕಿಕೊಂಡು ಸಾವನ್ನಪ್ಪಿದ್ದರು. ಹಾಗಾಗಿ, ಯಲಹಂಕ ಠಾಣಾ ಪೊಲೀಸರಿಗೆ ವೆಂಕಟೇಶ್ ದೂರು ನೀಡಿದ್ದರು. ಆತ್ಮಹತ್ಯೆ ಪ್ರಚೋದನೆ ನೀಡಿದ ಆರೋಪ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಅದನ್ನು ರದ್ದುಪಡಿಸುವಂತೆ ಕೋರಿ ಶ್ರೀನಿವಾಸ ರಾಜು ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.
ಆ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ದೂರುದಾರರನ್ನು ಪುಂಡ ಪೋಕರಿ ಎಂದು ಶ್ರೀನಿವಾಸ ರಾಜು ಕರೆದಿರುವುದಾಗಿ ಅವರ ಪರ ವಕೀಲರೇ ಒಪ್ಪಿಕೊಂಡಿದ್ದಾರೆ ಹಾಗೂ ಅದು ಪ್ರಚೋದನೆಯಾಗುವುದಿಲ್ಲ ಎನ್ನುತ್ತಿದ್ದಾರೆ.
ವಾಸ್ತವವಾಗಿ ಬೈಗುಳ ಶಬ್ದವನ್ನು ಯಾರು, ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಆಧರಿಸುತ್ತದೆ. ಕೆಲವರು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಮತ್ತೆ ಕೆಲ ಸೂಕ್ಷ್ಮ ಮನಸ್ಸಿನವರು ತೀರಾ ಗಂಭೀರವಾಗಿ ಪರಿಗಣಿಸುತ್ತಾರೆ. ಆದ್ದರಿಂದ ಈ ಹಂತದಲ್ಲಿ ಆರೋಪಿ ಬಳಸಿರುವ ಶಬ್ದವು ದೂರುದಾರರ ಮಾನಹಾನಿ ಮಾಡಿದೆ ಎಂಬುದಾಗಿ ತೀರ್ಮಾನ ಮಾಡಲು ಸಾಧ್ಯವಾಗುವುದಿಲ್ಲ. ವಿಚಾರಣಾ ನ್ಯಾಯಾಲಯದ ವಿಚಾರಣೆಯಲ್ಲಿಯೇ ಇದು ನಿರ್ಧಾರವಾಗಬೇಕಿದೆ ಎಂದು ಅಭಿಪ್ರಾಯಪಟ್ಟು ಶ್ರೀನಿವಾಸ ರಾಜು ವಿರುದ್ಧದ ಎಫ್‌ಐಆರ್ ರದ್ದುಪಡಿಸಲು ನಿರಾಕರಿಸಿದೆ.
