ಮಂಡ್ಯ[ಅ.01]  ಉಪ ಚುನಾವಣೆ ಸಮೀಪಿಸುತ್ತಿದ್ದಂತೆ ಅನರ್ಹ ಶಾಸಕರ ಕ್ಷೇತ್ರಕ್ಕೆ ಭರಪೂರ ಅನುದಾನ ಹರಿದು ಬರುತ್ತಿದೆ. ಕೆ.ಆರ್.ಪೇಟೆ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಅನರ್ಹ ಶಾಸಕ ನಾರಾಯಣಗೌಡ ಮನವಿ ಮೇರೆಗೆ ಕೋಟ್ಯಂತರ ರೂ.ನೀಡಿದೆ. 

ರಸ್ತೆ ಅಭಿವೃದ್ಧಿ ಸೇರಿದಂತೆ ಕ್ಷೇತ್ರದ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ 33.70 ಕೋಟಿ ಅನುದಾನ ಮಂಜೂರಾಗಿದ್ದು ಈ ಲೂಲಕ ಎಚ್‌.ಡಿ.ಕುಮಾರಸ್ವಾಮಿಗೆ ನಾರಾಯಣ ಗೌಡ ಅನುದಾನದ ಟಾಂಗ್ ನೀಡಿದ್ದಾರೆ.

ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಾಕಾಗುತ್ತಿಲ್ಲ ಎಂದೇ ರಾಜೀನಾಮೆ ನಂತರ ನಾರಾಯಣ ಗೌಡ ಕಾರಣ ನೀಡಿದ್ದರು. ಅನುದಾನ ನೀಡುವಲ್ಲಿ ತಾರತಮ್ಯ, ಮೈತ್ರಿ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದೆ ಎಂದೇ ರಾಜೀನಾಮೆ ನೀಡಿದ್ದೇನೆ ಎಂದು ಹಲವು ಸಾರಿ ಹೇಳಿದ್ದರು.

ಬಿಜೆಪಿಗೆ ಎಚ್ಚರಿಕೆ ಸಂದೇಶ ಬಂದಿದ್ದು  ಎಲ್ಲಿಂದ

ಸರ್ಕಾರದ ಅಧೀನ ಕಾರ್ಯದರ್ಶಿ ಆರ್ಥಿಕ ಇಲಾಖೆಯ ಆದೇಶ ಪ್ರತಿಯನ್ನು ನಾರಾಯಣಗೌಡ ಬೆಂಬಲಿಗರು ಇದೀಗ ವೈರಲ್ ಮಾಡುತ್ತಿದ್ದಾರೆ. ಆದೇಶ ಪ್ರತಿ ವೈರಲ್ ಮಾಡೋ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿಗೆ ಸರಿಯಾದ ಟಾಂಗ್ ಅನ್ನೇ ನೀಡಿದ್ದಾರೆ.

‘ನಾರಾಯಣಗೌಡರು ರಾಜೀನಾಮೆ ಕೊಟ್ಟಿದ್ದು ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಎಂದು ಈಗಲಾದರೂ ತಿಳಿದುಕೊಳ್ಳಿ. ಹಿಂದೆ ಕುಮಾರಣ್ಣ ಅವರ ಸರ್ಕಾರವಿದ್ದಾಗ ಕೆಲವು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಯಾಗದಿದ್ದ ಕಾರಣ ತಾಲೂಕಿನ ಅಭಿವೃದ್ಧಿ ಕುಂಠಿತವಾಗಿತ್ತು. ಆದರೆ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ನವರು ನಾರಾಯಣಗೌಡರು ಸಲ್ಲಿಸಿದ್ದ ಅರ್ಜಿಗಳಿಗೆ ಸ್ಪಂದಿಸಿದ್ದು  ಕುಂಠಿತಗೊಂಡಿದ್ದ ಕೆಲಸಗಳಿಗೆ ಕ್ಷೇತ್ರದ ಕೆಲವು ರಸ್ತೆ ಸಂಚಾರ ಅಭಿವೃದ್ಧಿಗಾಗಿ ಒಟ್ಟು ರೂ. 33.70 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದಾರೆ’ ಎಂದು ನಾರಾಯಣ ಗೌಡ ಬೆಂಬಲಿಗರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.