ಡಿಕೆ ಸಹೋದರರ ನಾಡಲ್ಲಿ ಕುತೂಹಲ ಕೆರಳಿಸಿದ ರಾಜಕೀಯ!
ರಾಮನಗರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಮೀಸಲಾತಿ ಮಾರ್ಗಸೂಚಿಗಳನ್ನು ಪರಿಶೀಲನೆ ನಡೆಸಲು ಸರ್ಕಾರ ಆದೇಶ ನೀಡಿದ್ದು, ಆದರೆ ಈ ಮೀಸಲಾತಿ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ.
ವರದಿ : ಎಂ.ಅಫ್ರೋಜ್ ಖಾನ್
ರಾಮನಗರ (ಆ.31): ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ನಿಗದಿ ಪಡಿಸಲು ಮಾರ್ಗಸೂಚಿಗಳನ್ನು ಪರಿಷ್ಕರಿಸಲು ರಾಜ್ಯ ಸರ್ಕಾರ ಆದೇಶಿಸಿರುವುದು ಪುರಪಿತೃಗಳ ಪದಗ್ರಹಣ ಇನ್ನಷ್ಟುವಿಳಂಬವಾಗುವ ಸಾಧ್ಯತೆಗಳಿವೆ.
ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ನಿಗದಿ ಪಡಿಸಲು ಜಾರಿಯಲ್ಲಿದ್ದ ಮಾರ್ಗ ಸೂಚಿಗಳನ್ನು ಸೂಕ್ತವಾಗಿ ಪರಿಷ್ಕರಿಸಲು ಸರ್ಕಾರ ಉದ್ದೇಶಿಸಿದ್ದು, ಪರಿಷ್ಕೃತ ಮಾರ್ಗಸೂಚಿಗಳನ್ನು ಆಗಸ್ಟ್ 27ರಂದು ರಾಜ್ಯಪತ್ರದಲ್ಲಿ ಪ್ರಕಟಿಸಿ ಸಲಹೆ, ಆಕ್ಷೇಪಣೆಗಳನ್ನು ಆಹ್ವಾನಿಸಿದೆ.
ಮಾರ್ಗಸೂಚಿಗಳ ಬದಲಾವಣೆ
ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ - ಉಪಾಧ್ಯಕ್ಷರ ಸ್ಥಾನಗಳಿಗೆ 2018ರಿಂದ ಚುನಾವಣೆಯೇ ನಡೆದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಆದಷ್ಟುಶೀಘ್ರ ಚುನಾವಣೆ ನಡೆಸುವ ಉದ್ದೇಶದಿಂದ ಹಿಂದಿನ ಅವಧಿಯ ಮೀಸಲು ಪುನರಾವರ್ತನೆಯಾಗದಂತೆ ಹಾಗೂ ಆಯಾಯ ವರ್ಗಗಳಿಗೆ ಲಭ್ಯವಾಗುವ ಮೀಸಲು ಸ್ಥಾನಗಳ ಸಂಖ್ಯೆಯನ್ನು ಕಾಯ್ದುಕೊಂಡು ಮೀಸಲು ನಿಗದಿ ಪಡಿಸುವ ಬಗ್ಗೆ ತೀರ್ಮಾನಿಸಿ ಕ್ರಮ ವಹಿಸಲು ಮಾರ್ಗಸೂಚಿಗಳನ್ನು ಬದಲಾವಣೆ ಮಾಡಿದೆ.
ಪುರಪಿತೃಗಳಿಗೆ ಅಧಿಕಾರವಿಲ್ಲ:
ಈ ಹಿಂದೆ ರಾಜ್ಯ ಸರ್ಕಾರ ನಿಗದಿ ಪಡಿಸಿದ್ದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ - ಉಪಾಧ್ಯಕ್ಷರ ಮೀಸಲು ಪ್ರಶ್ನಿಸಿ ಅವಕಾಶ ವಂಚಿತರು ಹೈಕೋರ್ಟ್ನ ಮೊರೆ ಹೋಗಿದ್ದರು. ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ 20 ತಿಂಗಳಿಂದ ಪುರಪಿತೃಗಳಿಗೆ ಅಧಿಕಾರವೇ ಇಲ್ಲದಂತಾಗಿದೆ. ಆಡಳಿತಾಧಿಕಾರಿಗಳನ್ನು ನೇಮಕ ಮಾಡಿರುವ ಸರ್ಕಾರ, ಅವರ ಅಧ್ಯಕ್ಷತೆಯಲ್ಲಿಯೇ ಸಾಮಾನ್ಯಸಭೆ ನಡೆಸಿ ತುರ್ತು ಕಾಮಗಾರಿಗಳಿಗೆ ಅನುಮೋದನೆ ಪಡೆದುಕೊಳ್ಳುತ್ತಿದೆ.
ಶಿರಾ ಉಪಚುನಾವಣೆಗೆ ಪಕ್ಷಗಳ ಪೈಪೋಟಿ : ಯಾವ ಪಕ್ಷದಿಂದ ಯಾರಿಗೆ ಟಿಕೆಟ್?.
ಅಧಿಕಾರಿಗಳೇ ಅಧಿಪತಿಗಳು :
ಸದ್ಯಕ್ಕೆ ಜಿಲ್ಲಾಧಿಕಾರಿಗಳು ರಾಮನಗರ ನಗರಸಭೆ, ಉಪವಿಭಾಗಾಧಿಕಾರಿಗಳು ಬಿಡದಿ ಪುರಸಭೆ, ತಹಸೀಲ್ದಾರ್ ಮಾಗಡಿ ಪುರಸಭೆ ಆಡಳಿತಾಧಿಕಾರಿಯಾಗಿ ಹಾಗೂ ಆಯುಕ್ತರು, ಮುಖ್ಯಾಧಿಕಾರಿಗಳೇ ಅಧಿಪತಿಗಳಾಗಿದ್ದಾರೆ. ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಯಾಗದ ಕಾರಣ ಬಿಡದಿ ಪುರಸಭೆಯಲ್ಲಿ 20 ತಿಂಗಳು, ಕನಕಪುರ ನಗರಸಭೆ, ಮಾಗಡಿ ಪುರಸಭೆಯಲ್ಲಿ 10 ತಿಂಗಳಿಂದ ವರಿಷ್ಠರ ಹುದ್ದೆಗಳು ಖಾಲಿಯಾಗಿದ್ದರೆ, ರಾಮನಗರ ಮತ್ತು ಚನ್ನಪಟ್ಟಣ ನಗರಸಭೆ ಸದಸ್ಯ ಸ್ಥಾನಗಳಿಗೆ ಇನ್ನೂ ಚುನಾವಣೆಯೇ ನಡೆದಿಲ್ಲ.
ಹಳ್ಳಿಯಲ್ಲಿ ಪಕ್ಷ ಸಂಘಟನೆ ಮಾಡಿದ ಬಿಜೆಪಿ ನಾಯಕ ಈಗ ದಿಲ್ಲಿ ಪ್ರತಿನಿಧಿ....
ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ನಿಗದಿ ಪಡಿಸಲು ಪರಿಷ್ಕೃತ ಮಾರ್ಗಸೂಚಿಗಳನ್ನು ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಲಾಗಿದೆ. ಈ ಪರಿಷ್ಕೃತ ಮಾರ್ಗಸೂಚಿಗಳನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 7 ದಿನಗಳ ತರುವಾಯ ಪರಿಗಣನೆಗೆ ತೆಗೆದುಕೊಳ್ಳಲಾಗುವುದು.
- ಎ.ವಿಜಯ್ ಕುಮಾರ್, ಸರ್ಕಾರದ ಅಧೀನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ.
ಕುತೂಹಲ ಕೆರಳಿಸಿದ ಮೀಸಲು
ರಾಜ್ಯ ಸರ್ಕಾರ 2020ರ ಮಾಚ್ರ್ ತಿಂಗಳಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿ ಪಡಿಸಿತ್ತು. ಆಗ ಬಿಡದಿ ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟಜಾತಿ ಮಹಿಳೆಗೆ ಮೀಸಲಾಗಿದ್ದರೆ, ಮಾಗಡಿ ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ನೀಡಲಾಗಿದೆ. ಕನಕಪುರ ನಗರಸಭೆ ಅಧ್ಯಕ್ಷ ಸ್ಥಾನ ಬಿಸಿಎ ವರ್ಗ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಚನ್ನಪಟ್ಟಣ ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟಜಾತಿ ಮಹಿಳೆ , ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ರಾಮನಗರ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ , ಉಪಾಧ್ಯಕ್ಷ ಸ್ಥಾನ ಪರಿಶಿಷ್ಟಜಾತಿಗೆ ಮೀಸಲಾಗಿತ್ತು. ಈಗ ಮೀಸಲಾತಿ ನಿಗದಿ ಪಡಿಸಲು ಮಾರ್ಗಸೂಚಿಗಳನ್ನು ಪರಿಷ್ಕರಿಸಲು ಸರ್ಕಾರ ಮುಂದಾಗಿರುವುದರಿಂದ ಯಾವ ಸ್ಥಳೀಯ ಸಂಸ್ಥೆಗೆ ಯಾವ ಮೀಸಲಾತಿ ನಿಗದಿಯಾಗಲಿದೆ ಎಂಬುದು ಪುರಪಿತೃಗಳ ಕುತೂಹಲಕ್ಕೆ ಕಾರಣವಾಗಿದೆ.