ಮತ್ತೆ ಬಳ್ಳಾರಿಯಲ್ಲಿ ಶರುವಾಗಲಿದೆ ಗಣಿಯಬ್ಬರ : ಸರ್ಕಾರಕ್ಕೆ ಬರುವ ಆದಾಯವೆಷ್ಟು..?
ಬಳ್ಳಾರಿ ಗಣಿಗಾರಿಕೆ ಗುತ್ತಿಗೆ ನವೀಕರಣ ಸಮಸ್ಯೆ ಬಗೆಹರಿದಿರುವ ಹಿನ್ನೆಲೆಯಲ್ಲಿ ಮತ್ತೆ ಇಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ನೀಡಲಾಗಿದೆ. ಮತ್ತೆ ಗಣಿಯಬ್ಬರ ಶುರುವಾಗಲಿದೆ.
ಬೆಂಗಳೂರು (ಸೆ.16): ರಾಜ್ಯದ ಬಳ್ಳಾರಿ ಜಿಲ್ಲೆಯ ದೋಣಿಮಲೈ ಪ್ರದೇಶದಲ್ಲಿನ ಎನ್‌ಎಂಡಿಸಿ ಸಂಸ್ಥೆಯ ಗಣಿಗಾರಿಕೆ ಗುತ್ತಿಗೆ ಅವಧಿ ನವೀಕರಣ ಸಮಸ್ಯೆ ಬಗೆಹರಿದಿರುವ ಹಿನ್ನೆಲೆಯಲ್ಲಿ ಮತ್ತೆ ಗಣಿಗಾರಿಕೆ ನಡೆಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಇತ್ತೀಚೆಗೆ ಮುಖ್ಯಮಂತ್ರಿಗಳು ಮತ್ತು ಕೇಂದ್ರದ ಗಣಿಗಾರಿಕೆ ಸಚಿವರು ಸಭೆ ನಡೆಸಿ ಎನ್‌ಎಂಡಿಸಿ ಸಂಸ್ಥೆಯ ಗಣಿಗಾರಿಕೆ ಗುತ್ತಿಗೆ ಅವಧಿ ನವೀಕರಣ ಸಂಬಂಧ ಇದ್ದ ಸಮಸ್ಯೆಯನ್ನು ಬಗೆಹರಿಸಿದ್ದಾರೆ.
ರಾಜ್ಯಕ್ಕೆ ನೀಡಲಾಗುತ್ತಿರುವ ಶೇ.15ರಷ್ಟುರಾಯಲ್ಟಿಯನ್ನು ಶೇ.22.5ರಷ್ಟುನೀಡುವಂತೆ ಮನವಿ ಮಾಡಲಾಗಿತ್ತು. ಇದಕ್ಕೆ ಕೇಂದ್ರವು ಸಕಾರಾತ್ಮಕವಾಗಿ ಸ್ಪಂದಿಸಿದೆ. ದೋಣಿಮಲೈನ 600 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ಆರಂಭಿಸಲು ನಿರ್ಧರಿಸಲಾಗಿದೆ. ಇದರಿಂದ ವಾರ್ಷಿಕ 647 ಕೋಟಿ ರು. ಆದಾಯ ಬರುವ ನಿರೀಕ್ಷೆ ಇದೆ ಎಂದು ಹೇಳಿದರು.
'ಕಂಪನಿಗೆ ಭಿಕ್ಷೆ ಕೊಡಿ ಸ್ವಾಮಿ'; ಬೇಡಲು ರಸ್ತೆಗಿಳಿದಿದ್ದಾರೆ ಜಿಂದಾಲ್ ನೌಕರರು!
ಎನ್‌ಎಂಡಿಸಿ ಕಂಪನಿಯ ಗಣಿಗಾರಿಕೆ ಗುತ್ತಿಗೆಯ 50 ವರ್ಷಗಳ ಅವಧಿ 2018ಕ್ಕೆ ಮುಕ್ತಾಯಗೊಂಡಿದೆ. ನವೀಕರಣ ಬಗ್ಗೆ ಸ್ಪಷ್ಟತೆ ಇರಲಿಲ್ಲ. 2020ರ ನಂತರ ಯಾವುದೇ ಗಣಿಯನ್ನು ವಹಿಸಿದರೆ ಕೇಂದ್ರ ಸರ್ಕಾರ ನಿಗದಿ ಮಾಡಿದ ಪ್ರೀಮಿಯಂ ದರವನ್ನು ಸಲ್ಲಿಸಬೇಕು. ನವೀಕರಣಕ್ಕೆ ಯಾವುದೇ ಅವಕಾಶ ಇರಲಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಕೇಂದ್ರ ಗಣಿಗಾರಿಕೆ ಸಚಿವರ ಜತೆ ಇತ್ತೀಚೆಗೆ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ಹಂಚಿಕೆಯ ಮೂಲಕ ಗಣಿ ಗುತ್ತಿಗೆ ಮಂಜೂರು ಮಾಡಬಹುದಾಗಿದ್ದು, ಕೇಂದ್ರ ಸರ್ಕಾರವೇ ಇದಕ್ಕೆ ರಾಯಲ್ಟಿಗಿಂತ ಮಿಗಿಲಾದ ಪ್ರೀಮಿಯಂ ಅನ್ನು ನಿಗದಿ ಮಾಡಲಿದೆ.