ಬೇಲೂರು [ಸೆ.02]:  ತಾಲೂಕಿನ ಪ್ರಸಾದಿಹಳ್ಳಿ ಗ್ರಾಮದ ಬಳಿ ಇರುವ ಮೈಸೂರು ಅರಸರ ಕಾಲದ ರಣಘಟ್ಟಒಡ್ಡು ನಿರ್ಮಾಣಕ್ಕೆ ಮುನ್ನ ಒಡ್ಡಿನ ಹಿನ್ನೀರಿನಿಂದ ರೈತರಿಗೆ ಆಗಿರುವ ನಷ್ಟದ ಪ್ರಮಾಣವನ್ನು ಬಗೆಹರಿಸಿದ ನಂತರ ಒಡ್ಡು ನಿರ್ಮಾಣದ ಕಾಮಗಾರಿಗೆ ಮುಂದಾಗಬೇಕು ಎಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.

ಸನ್ಯಾಸಿಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಪ್ರಸಾದಿಹಳ್ಳಿಯ ಚಂದನ್‌, ಈಚೆಗೆ ಬಂದ ಭಾರೀ ಮಳೆಯಿಂದ ಯಗಚಿ ಜಲಾಶಯ ಭರ್ತಿಯಾಗಿ ನೀರನ್ನು ನದಿಗೆ ಬಿಟ್ಟಹಿನ್ನೆಲೆಯಲ್ಲಿ ರಣಘಟ್ಟಒಡ್ಡು ಭರ್ತಿಯಾಗಿ ನೀರು ಹಿನ್ನೀರಿನ ಶುಂಠಿ, ಭತ್ತ, ಜೋಳ, ಕಬ್ಬು, ಬಾಳೆ ಸೇರಿದಂತೆ ಹಲವು ಬೆಳೆಗಳಿಗೆ ಹಾನಿಯಾಗಿದ್ದು, ಸುಮಾರು 2 ಕೋಟಿ ರು. ನಷ್ಟವಾಗಿದೆ ಎನ್ನುತ್ತಾರೆ.

ಹಳೇಬೀಡು ದ್ವಾರಸಮುದ್ರಕ್ಕೆ ನೀರು ತೆಗೆದುಕೊಂಡು ಹೋಗುವ ರಣಘಟ್ಟಒಡ್ಡಿನ ಕಾಮಗಾರಿಗಾಗಿ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ 100 ಕೋಟಿ ರು.ಗಳನ್ನು ಮೀಸಲಿಡಲಾಗಿದೆ. ಇದರಿಂದ ಹಳೇಬೀಡು ಭಾಗದ ರೈತರು ಹರ್ಷಗೊಂಡಿರುವುದಂತೂ ನಿಜ. ಈ ಯೋಜನೆಗೆ ನಮ್ಮಗಳ ವಿರೋಧವಿಲ್ಲ. ಆದರೆ, ನಮ್ಮ ಜಮೀನಿನ ಮೇಲೆ ನೀರು ನಿಂತು ನಷ್ಟಅನುಭವಿಸುವುದು ಸರಿಯಲ್ಲ. ಈ ಕಾರಣ ನೀರು ನಿಲ್ಲುವ ಭೂಮಿಯ ಸರ್ವೆ ಮಾಡಿ ಪರಿಹಾರ ನೀಡಬೇಕು. ಒಡ್ಡು ನಿರ್ಮಾಣದ ವೇಳೆ ಈಗ ಇರುವ ಎತ್ತರಕ್ಕಿಂತ ಮತ್ತಷ್ಟುಎತ್ತರಿಸಬಾರದು ಎಂಬುದು ನಮ್ಮ ಆಗ್ರಹ ಎಂದು ರೈತರು ಹೇಳುತ್ತಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರೈತ ಪ್ರಸಾದಿಹಳ್ಳಿ ದೇವರಾಜೇಗೌಡ ಮಾತನಾಡಿ, ಜಲಾಶಯದಿಂದ ನದಿಗೆ ನೀರು ಬಿಟ್ಟಿದ್ದರಿಂದ ಪ್ರಸಾದಿಹಳ್ಳಿ ಗ್ರಾಮದ ರೈತರು ತಮ್ಮ ಜಮೀನಿಗೆ ಯಗಚಿ ನದಿ ದಾಟಿ ಹೋಗಲು 2003ರಲ್ಲಿ ನಿರ್ಮಿಸಿಕೊಂಡಿದ್ದ ಚಿಕ್ಕದಾದ ಸೇತುವೆ ಸಹ ಮುಳುಗಿತ್ತು.

ಸೇತುವೆ ಈಗಾಗಲೇ ಶಿಥಿಲಗೊಂಡಿದ್ದು, ಯಾವುದೇ ಸಂದರ್ಭ ಬೀಳುವ ಸಂಭವವಿದೆ. ರಣಘಟ್ಟ, ಪ್ರಸಾದಿಹಳ್ಳಿ, ನೆಟ್ಟೇಕೆರೆಗೆ ಸೇರಿದ ಜಮೀನಿನ ಮೇಲೆ ಮರಳು ತುಂಬಿಕೊಂಡಿದೆ.

ಅಣೆಕಟ್ಟು ಕಟ್ಟಿದಂದಿನಿಂದ ಈವರಗೆ ನಾವು ಈ ರೀತಿಯ ಮಳೆ ಕಂಡಿರಲಿಲ್ಲ. ಈ ಭಾರೀ ಅತಿಯಾಗಿ ಮಳೆ ಬಂದು ಜಮೀನಿಗೆ ಎಲ್ಲಿಯವರಗೆ ನೀರು ನುಗ್ಗುತ್ತದೆ ಎಂಬುದು ಗೊತ್ತಾಗಿದೆ. ಮುಂದೆಯೂ ಇದೇ ರೀತಿ ಮಳೆಯಾದಲ್ಲಿ ಸಮಸ್ಯೆ ಉದ್ಭವಿಸುತ್ತದೆ ಎಂದರು.

ನಿಜ, ತೀವ್ರವಾಗಿ ನೀರಿನ ಕೊರತೆಯಿಂದ ಬಳಲುತ್ತಿರುವ ಹಳೇಬೀಡು ಭಾಗದ ರೈತರಿಗೆ ಅತಿಮುಖ್ಯವಾದ ರಣಘಟ್ಟನೀರಾವರಿ ಯೋಜನೆಯಿಂದ ಹೆಚ್ಚಿನ ಅನುಕೂಲ ಆಗುವುದಾದರೂ ಈ ಯೋಜನೆಯ ಹಿಂದೆ ಇರುವ ಕೆಲವೊಂದು ಸಮಸ್ಯೆಗಳ ಬಗೆಹರಿಸಿಕೊಳ್ಳುವುದು ಅಷ್ಟೆಮುಖ್ಯ.


ರಣಘಟ್ಟಒಡ್ಡಿನ ಹಿನ್ನೀರಿನಿಂದ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿ ಆಗಿರುವ ಕುರಿತು ಪರಿಶೀಲಿಸಿದ್ದೇನೆ. ಈ ರೀತಿ ಹೆಚ್ಚು ಮಳೆ ಬಂದ ವೇಳೆ ನದಿ ತುಂಬಿ ಹರಿದಾಗ ಜಮೀನಿನ ಮೇಲೆ ನೀರು ಹರಿದು ಬರುವುದು ಬೆಳೆ ಹಾನಿ ಆಗಿರುವುದು ನಿಜ. ಪರಿಹಾರದ ವಿಚಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ.

-ಸಂತೋಷ್‌ ಎಂಜಿನಿಯರ್‌ ಸಣ್ಣ ನೀರಾವರಿ ಇಲಾಖೆ
  
ಈಗಿನ 5 ಅಡಿ ಎತ್ತರವಿರುವ ಒಡ್ಡಿನಿಂದಲೇ ನದಿಯ ನೀರು 120 ಎಕರೆಗೂ ಅಕ ಭೂಮಿಯನ್ನು ನುಂಗಿ ಹಾಕಿದೆ. ಕೋಟ್ಯಂತರ ರುಪಾಯಿ ನಷ್ಟವಾಗಿದೆ. ನಮ್ಮ ಭೂಮಿಯನ್ನು ಸರ್ವೆ ಮಾಡಿಸಿ ವಶಪಡಿಸಿಕೊಂಡು ಪರಿಹಾರ ನೀಡಿ ನಂತರ ಕೆಲಸ ಆರಂಭಿಸುವುದು ಒಳ್ಳೆಯದು. ಈ ಬಗ್ಗೆ ಶಾಸಕ ಕೆ.ಎಸ್‌.ಲಿಂಗೇಶ್‌ ಅವರು ಬಂದು ವೀಕ್ಷಿಸಿದ್ದು, ಕ್ರಮದ ಭರವಸೆ ನೀಡಿದ್ದಾರೆ.

-ಚಂದನ್‌ ಗ್ರಾಪಂ ಸದಸ್ಯ ಪ್ರಸಾಹಳ್ಳಿ