* ಸಾಲ ಮಾಡಿ ಹೋಳಿಗೆ ತಿಂದಿಲ್ಲ, ಸಾಲದ ಅವಕಾಶ ಇದ್ದರೂ ರೊಟ್ಟಿತಿನ್ನುತ್ತಿದ್ದೇವೆ* ಸಾಲದ ಬಜೆಟ್ ಎಂದ ವಿಪಕ್ಷಗಳಿಗೆ ಸಿಎಂ ಬೊಮ್ಮಾಯಿ ತಿರುಗೇಟು* ಬಜೆಟ್ ಮೇಲಿನ ಚರ್ಚೆಗೆ ಸಿಎಂ ಉತ್ತರ
ಬೆಂಗಳೂರು(ಮಾ. 17) ‘ನಾವು ಸಾಲ ಮಾಡಿ ಹೋಳಿಗೆ ತಿಂದಿಲ್ಲ. ಸಾಲ ಮಾಡಲು ಅವಕಾಶವಿದ್ದರೂ ಬಳಸಿಕೊಳ್ಳದೆ ರೊಟ್ಟಿತಿನ್ನುತ್ತಿದ್ದೇವೆ. ರಾಜಕೀಯದ (Karnataka Politics) ಕನ್ನಡಕ ತೆಗೆದು ವಿಶ್ಲೇಷಿಸಿ’. ಇದು ಸರ್ಕಾರದ ಬಜೆಟ್‌ನ್ನು ಸಾಲದ ಬಜೆಟ್ (Karnataka Budget 2022) ಎಂದು ಟೀಕಿಸಿದ ವಿಪಕ್ಷಗಳ ನಾಯಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ತಿರುಗೇಟು ನೀಡಿದ ಪರಿ.
ಬುಧವಾರ ವಿಧಾಸಭೆಯಲ್ಲಿ ತಮ್ಮ ಚೊಚ್ಚಲ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಅವರು ಡಬಲ್ ಎಂಜಿನ್ ಸರ್ಕಾರದ ಹೆಗ್ಗಳಿಕೆ, ಹಿಂದಿನ ಸರ್ಕಾರದ ಆರ್ಥಿಕ ವೈಫಲ್ಯ, ಕೊರೋನಾ ಸಂಕಷ್ಟದ ನಡುವೆಯೂ ಆರ್ಥಿಕತೆ ಮೇಲೆತ್ತಲು ಬಜೆಟ್ ಮೂಲಕ ಮಾಡುತ್ತಿರುವ ಪ್ರಯತ್ನದ ಕುರಿತು ಅಂಕಿ-ಅಂಶ ಸಹಿತ ವಿವರಿಸಿದರು.
ಹೋಳಿಗೆ ತಿಂದಿಲ್ಲ: ಬಜೆಟ್ ಮೇಲೆ ಚರ್ಚೆಯ ವೇಳೆ ವಿಪಕ್ಷಗಳು ಮಾಡಿದ್ದ ಸರಣಿ ಟೀಕಾ ಪ್ರಹಾರಗಳಿಗೆ ಎಳೆಎಳೆಯಾಗಿ ತಿರುಗೇಟು ನೀಡಿದ ಬೊಮ್ಮಾಯಿ ‘ಹಿಂದಿನ ಅವಧಿಯಲ್ಲಿ ಕೊರೋನಾ ಹಾಗೂ ಆರ್ಥಿಕ ಸಂಕಷ್ಟಇಲ್ಲದಿದ್ದರೂ ಸಿದ್ದರಾಮಯ್ಯ ಅವರು ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದರು. ಡಬಲ್ ಎಂಜಿನ್ ಸರ್ಕಾರದಿಂದಾಗಿಯೇ ಅತ್ಯುತ್ತಮ ಬಜೆಟ್ ಮಂಡಿಸಲು ಸಾಧ್ಯವಾಗಿದ್ದು, ರಾಜ್ಯವು ಆರ್ಥಿಕ ಸಂಕಷ್ಟದಿಂದ ಚೇತರಿಕೆ ಹಾದಿಯತ್ತ ಮರಳಿದೆ. ಬದ್ಧತಾ ವೆಚ್ಚ, ಆದಾಯ ಕೊರತೆ ಕಡಿಮೆ ಮಾಡಿಕೊಳ್ಳಲು ಎಲ್ಲಾ ಪ್ರಯತ್ನ ಮಾಡಿದ್ದೇವೆ. ಸಾಲ ಮಾಡಲು ಅವಕಾಶವಿದ್ದರೂ ಬಳಸಿಕೊಳ್ಳದೆ ರೊಟ್ಟಿತಿನ್ನುತ್ತಿದ್ದೇವೆ. ಹೀಗಾಗಿ ಇದೊಂದು ಸರ್ವಸ್ಪರ್ಷಿ, ಸರ್ವವ್ಯಾಪಿ, ಸೂಕ್ಷ್ಮಮತಿ ಬಜೆಟ್’ ಎಂದು ತಮ್ಮ ಮಾತಿನ ಉದ್ದಕ್ಕೂ ಬಜೆಟ್‌ನ್ನು ಸಮರ್ಥಿಸಿದರು.
ಸಿದ್ದು ಅವಧಿಯಲ್ಲಿ ಸಾಲ ಡಬಲ್: ಇದಕ್ಕೂ ಮೊದಲು ಮಾತನಾಡಿದ ಬೊಮ್ಮಾಯಿ ಅವರು, ಸ್ವಾತಂತ್ರ್ಯ ಬಂದಾಗಿನಿಂದ 2013ರವರೆಗೆ ಕೇವಲ 1.38 ಲಕ್ಷ ಕೋಟಿ ರು. ಸಾಲ ರಾಜ್ಯದ ಮೇಲಿತ್ತು. ಆದರೆ ಸಿದ್ದರಾಮಯ್ಯ ಅವರ 2013-2018ರ ಅವಧಿ ಮುಗಿಯುವ ವೇಳೆಗೆ ರಾಜ್ಯದ ಸಾಲ 2.86 ಲಕ್ಷ ಕೋಟಿಗೆ ಹೆಚ್ಚಾಗಿತ್ತು. ಸಿದ್ದರಾಮಯ್ಯ ಅವರ 5 ವರ್ಷದ ಅವಧಿಯಲ್ಲಿ 1.48 ಲಕ್ಷ ಕೋಟಿ ರು. (ಶೇ.107) ಸಾಲ ಹೆಚ್ಚಾಗಿದೆ. ಕಳೆದ ನಾಲ್ಕು ವರ್ಷದ ನಮ್ಮ ಅವಧಿಯಲ್ಲಿ ಆಗಿರುವುದು ಶೇ.58 ರಷ್ಟುಸಾಲ ಹೆಚ್ಚಳ ಮಾತ್ರ ಎಂದು ಟಾಂಗ್ ಕೊಟ್ಟರು. ನಿಮ್ಮ ಸರ್ಕಾರ ಇದ್ದಾಗ ಕೊರೋನಾ ಇರಲಿಲ್ಲ, ಆರ್ಥಿಕ ಸಂಕಷ್ಟಇರಲಿಲ್ಲ. ಹೀಗಿದ್ದರೂ ನೀವು ಆರ್ಥಿಕತೆಯನ್ನು ಸಮರ್ಥವಾಗಿ ನಿರ್ವಹಣೆ ಮಾಡಲಿಲ್ಲ. ನೀವು ನಮಗೆ ಆರ್ಥಿಕ ಶಿಸ್ತಿನ ಪಾಠ ಮಾಡಲು ಬರುತ್ತೀರಾ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಕಡಿಮೆ ಸಾಲ ಮಾಡಿದ್ದೇವೆ: ಕಳೆದ ಎರಡು ವರ್ಷಗಳಲ್ಲಿ ಕೊರೋನಾಗೆ 15,645 ಕೋಟಿ ರು. ಖರ್ಚು ಮಾಡಲಾಗಿದೆ. ಕೊರೋನಾದಿಂದ ರಾಜ್ಯದ ಆದಾಯವೂ ಕುಸಿದಿತ್ತು. ಹೀಗಾಗಿ ಅನಿವಾರ್ಯವಾಗಿ ಸಾಲ ಹೆಚ್ಚಿಗೆ ತೆಗೆದುಕೊಳ್ಳಬೇಕಾಯಿತು. ಕೊರೋನಾ ಸಂದರ್ಭದಲ್ಲಿ ಜಿಎಸ್‌ಟಿಯ ಶೇ.5 ರಷ್ಟುಸಾಲ ಪಡೆಯಲು (96,374 ಕೋಟಿ ರು.) ಅವಕಾಶವಿದ್ದರೂ 72,121 ಕೋಟಿ ರು. ಮಾತ್ರ ಸಾಲ ಮಾಡಿ ಶೇ.3.03ಕ್ಕೆ ವಿತ್ತೀಯ ಕೊರತೆಯನ್ನು ನಿಯಂತ್ರಿಸಿದ್ದೆವು. 2021-22ರಲ್ಲಿ ಶೇ.4 ರಷ್ಟುಪಡೆಯಲು ಅವಕಾಶವಿದ್ದರೂ 67,100 ಕೋಟಿ ರು. ಬದಲಿಗೆ 63,100 ಕೋಟಿ ರು. ಮಾತ್ರ ಸಾಲ ಮಾಡಿದ್ದೆವು. ನಾವು ಸಾಲ ಮಾಡಿ ಹೋಳಿಗೆ ತಿಂದಿಲ್ಲ ಬದಲಿಗೆ ಕೇವಲ ರೊಟ್ಟಿತಿನ್ನುವವರು ನಾವು ಎಂದು ಇದೇ ವೇಳೆ ಮುಖ್ಯಮಂತ್ರಿಗಳು ಸಮರ್ಥನೆ ನೀಡಿದರು.
ಕಾಂಗ್ರೆಸ್ ಸಭಾತ್ಯಾಗ: ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಸದಸ್ಯರು ಇದೊಂದು ಸಾಲದ ಬಜೆಟ್. ಕೇಂದ್ರದಿಂದ ಅನುದಾನ, ತೆರಿಗೆ ಪಾಲು, ಕೇಂದ್ರ ಪ್ರಾಯೋಜಿತ ಯೋಜನೆಗಳ ಪಾಲು ಸೇರಿದಂತೆ ಎಲ್ಲಾ ರೀತಿಯಲ್ಲೂ ರಾಜ್ಯಕ್ಕೆ ಅನ್ಯಾಯವಾಗಿದೆ. ಹೀಗಿದ್ದರೂ ಅನ್ಯಾಯವನ್ನು ಪ್ರಶ್ನಿಸುವ ಬದಲು ಸಮರ್ಥಿಸಿಕೊಳ್ಳುತ್ತಿದ್ದೀರಿ ಎಂದು ಆಕ್ಷೇಪಿಸಿ ಸಭಾತ್ಯಾಗ ಮಾಡಿದರು. ಕಾಂಗ್ರೆಸ್ ಸಭಾತ್ಯಾಗದ ನಡುವೆಯೇ ಇಲಾಖಾವಾರು ಬೇಡಿಕೆಗಳ ಮೇಲಿನ ಚರ್ಚೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅನುಮೋದನೆ ನೀಡಿದರು.
