20 ದಿನಗಳಲ್ಲಿ ನಿರ್ಮಾಣವಾದ ಕೋವಿಡ್ ಆಸ್ಪತ್ರೆ: ಸಿಎಂ ಉದ್ಘಾಟನೆ
20 ದಿನಗಳಲ್ಲಿ ನಿರ್ಮಾಣವಾದ ಕೋವಿಡ್ ಆಸ್ಪತ್ರೆ
100 ಹಾಸಿಗೆಗಳ ಅತ್ಯಾಧುನಿಕ ಕೊವಿಡ್-ಕೇರ್ ಸ್ಪೆಷಾಲಿಟಿ ಆಸ್ಪತ್ರೆ
'ಸೆಲ್ಕೋ', 'ಡಾಕ್ಟರ್ಸ್ ಫಾರ್ ಯು' ಸಹಯೋಗದೊಂದಿಗೆ ಯಲಹಂಕದಲ್ಲಿ ನಿರ್ಮಾಣ
ಬೆಂಗಳೂರು, (ಜೂನ್.19): ಕೋವಿಡ್ ಅಲೆಗಳನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಬೋಯಿಂಗ್ ಸಂಸ್ಥೆಯು, 'ಸೆಲ್ಕೋ', 'ಡಾಕ್ಟರ್ಸ್ ಫಾರ್ ಯು' ಸಹಯೋಗದೊಂದಿಗೆ ಯಲಹಂಕದಲ್ಲಿ 100 ಹಾಸಿಗೆಗಳ ಅತ್ಯಾಧುನಿಕ ಕೊವಿಡ್-ಕೇರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿದೆ.
ಈ ಆಸ್ಪತ್ರೆಯನ್ನು ಇಂದು (ಶನಿವಾರ) ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಉದ್ಘಾಟಿಸಿದರು.
ಆಸ್ಪತ್ರೆ ನಿರ್ಮಾಣಕ್ಕೆ ಕರ್ನಾಟಕ ವಿದ್ಯುತ್ ನಿಗಮ ತನ್ನ ಕ್ಯಾಂಪಸ್‌ನಲ್ಲಿ ಜಾಗ ನೀಡಿದ್ದು, ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಇರುವ ಆಸ್ಪತ್ರೆಯನ್ನು ಕೇವಲ 20 ದಿನದೊಳಗೆ ಪೂರ್ಣಗೊಳಿಸಿರುವುದು ವಿಶೇಷ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ,ಕೋವಿಡ್ ಎರಡನೇ ಅಲೆ ನಿಯಂತ್ರಣ, ಚಿಕಿತ್ಸೆ ಹಾಗೂ ಲಸಿಕೆ ಕಾರ್ಯಕ್ರಮದಲ್ಲಿ ಸರ್ಕಾರದ ಜತೆಗೆ ಖಾಸಗಿ ಸಂಸ್ಥೆಗಳು ಹಾಗೂ ಎನ್‌ಜಿಓಗಳು ಕೈ ಜೋಡಿಸಿರುವುದು ಅತ್ಯಂತ ಶ್ಲಾಘನೀಯ. ಬೋಯಿಂಗ್ ಸಂಸ್ಥೆಯು ಸೆಲ್ಕೋ' ಮತ್ತು 'ಡಾಕ್ಟರ್ಸ್ ಫಾರ್ ಯು' ಸಹಯೋಗದೊಂದಿಗೆ ಅತ್ಯಂತ ಕಡಿಮೆ ಸಮಯದಲ್ಲಿ ಕೊವಿಡ್-ಕೇರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಿರುವುದು ಬಹಳ ಸಂತಸದ ವಿಷಯ. ಕಾರ್ಪೋರೇಟ್ ಕಂಪನಿಗಳು ತಮ್ಮ ಸಮುದಾಯಿಕ ಜವಾಬ್ದಾರಿ ಕಾರ್ಯಕ್ರಮದ ಭಾಗವಾಗಿ ಇಂಥ ಜನಪರ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಅನುಕರಣೀಯ ಎಂದರು.
ಇನ್ನು ಡಿ.ವಿ ಸದಾನಂದ ಗೌಡ ಮಾತನಾಡಿ, ಕರ್ನಾಟಕ ವಿದ್ಯುತ್ ನಿಗಮದ ಯಲಹಂಕ ಕ್ಯಾಂಪಸ್‌ನಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಕೊವಿಡ್ ಕೇರ್ ಆಸ್ಪತ್ರೆ ತಲೆ ಎತ್ತಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಪ್ರಯತ್ನಗಳಿಗೆ ಕಾರ್ಪೋರೇಟ್ ಸಂಸ್ಥೆಗಳು ಎನ್‌ಜಿಓಗಳು ಕೈ ಜೋಡಿಸಿರುವುದು ಸಂತಸದ ವಿಷಯ. ರಾಜ್ಯದ ಆರೋಗ್ಯ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಕೈಗೊಳ್ಳುವ ಎಲ್ಲ ಕಾರ್ಯಕ್ರಮಗಳಲ್ಲಿ ಸರ್ಕಾರದ ಜತೆ ಇನ್ನಿತರ ಖಾಸಗಿ ಸಂಸ್ಥೆಗಳು ಕೈ ಜೋಡಿಸಲಿ ಎಂದು ಕರೆ ಕೊಟ್ಟರು.
ಆಸ್ಪತ್ರೆ ವೈಶಿಷ್ಟ್ಯ:
ಅತಿ ಕಡಿಮೆ ಅವಧಿ ಅಂದರೆ ಕೇವಲ 20 ದಿನಗಳಲ್ಲಿ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಈ ಆಸ್ಪತ್ರೆ ನಿರ್ಮಾಣವಾಗಿದ್ದು, ಸೌರ ವ್ಯವಸ್ಥೆಯನ್ನು ಒಳಗೊಂಡಿದೆ. ತಾಪಮಾನ ನಿಯಂತ್ರಿಸಬಲ್ಲ ಮಾದರಿ ವ್ಯವಸ್ಥೆ ಇದೆ. ಔಷಧಾಲಯ, ಪ್ರಯೋಗಾಲಯ, ವಿಶ್ರಾಂತಿ ಕೊಠಡಿ, ದಾದಿಯರ ಕೇಂದ್ರ, ತಾಯಿಯರ ಆರೈಕೆ ಕೇಂದ್ರ ಹಾಗೂ ಸಭಾಂಗಣವನ್ನು ಒಳಗೊಂಡಿದೆ. 10 ಐಸಿಯು ಹಾಸಿಗೆ, 20 ಎಚ್‌ಡಿಯು ಹಾಸಿಗೆಗಳಿವೆ. ಉಳಿದ ಹಾಸಿಗೆಗಳು ವೈದ್ಯಕೀಯ ಆಮ್ಲಜನಕದ ಸಂಪರ್ಕ ಹೊಂದಿವೆ.
ವೆಚ್ಚ, ನಿರ್ವಹಣೆ:
ಆಸ್ಪತ್ರೆ ನಿರ್ಮಾಣಕ್ಕೆ ಒಟ್ಟು 5.5 ಕೋಟಿ ರೂ. ವೆಚ್ಚವಾಗಿದ್ದು, ಬೊಯಿಂಗ್ ಡಿಫೆನ್ಸ್ ಇಂಡಿಯಾ ಪ್ರೈ. ಲಿ 3 ಕೋಟಿ ರೂ., ಸೆಲ್ಕೋ ಫೌಂಡೇಷನ್ 2.5 ಕೋಟಿ ರೂ. ನೀಡಿದೆ. ಕರ್ನಾಟಕ ವಿದ್ಯುತ್ ನಿಗಮ ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯ ಜಾಗ ಒದಗಿಸಿದೆ. ಡಾಕ್ಟರ್ಸ್ ಫಾರ್ ಯು ಸರ್ಕಾರೇತರ ಸಂಸ್ಥೆಯು ಆಸ್ಪತ್ರೆ ನಿರ್ವಹಣೆ ಮತ್ತು ಆರೋಗ್ಯ ಸೇವೆ ಒದಗಿಸುವ ಜವಾಬ್ದಾರಿ ವಹಿಸಿಕೊಂಡಿದೆ.